Gallery

blog review – 2013

The WordPress.com stats helper monkeys prepared a 2013 annual report for this blog. Here’s an excerpt: A San Francisco cable car holds 60 people. This blog was viewed about 1,700 times in 2013. If it were a cable car, it … Continue reading

Image

‘ಅನಂತನ್‌’ ಅವಾಂತರ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗುದಮುರುಗಿ !

RCUB Anantan-Cartoon
ರಾಣಿ ಚನ್ನಮ್ಮ ವಿವಿ ಕುಲಪತಿಯಾಗಿ ಅವಧಿ ಮುಗಿದರೂ ಮುಂದುವರಿಕೆ
ಬೆಂಗಳೂರು: ಅವಧಿ ಮುಗಿದರೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಪ್ರೊ.ಬಿ.ಆರ್. ಅನಂತನ್ ವಿರಾಜಮಾನರಾಗಿದ್ದಾರೆ.

ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆ ಆದೇಶದನುಸಾರ ಅನಂತನ್ ಅವರ ಅಧಿಕಾರಾವಧಿ 2013ರ ಮೇ 2ಕ್ಕೆ ಮುಗಿದಿದೆ.

ಆದರೆ ಕಳೆದ 2 ತಿಂಗಳಿಂದ ಅನಧಿಕೃತವಾಗಿ ಕುಲಪತಿ ಹುದ್ದೆಯಲ್ಲಿ ಅನಂತನ್ ಮುಂದುವರಿದಿದ್ದಾರೆ. ಆದರೆ ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರು ಮಾತ್ರ ಕುಲಪತಿ ನೇಮಕ ಹಾಗೂ ಶೋಧನಾ ಸಮಿತಿ ರಚನೆ ಕುರಿತಂತೆ ಮೌನವಹಿಸಿದ್ದಾರೆ.

ಕಳೆದ 2010ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಪ್ರೊ. ಅನಂತನ್ ಅವರು 4 ವರ್ಷದ ಅವಧಿಗೆ ಅಥವಾ 65 ವರ್ಷ ಆಗುವವರೆಗೆ ರಾಣಿ ಚೆನ್ನಮ್ಮ ವಿವಿಯ ಪ್ರಥಮ ಕುಲಪತಿಯಾಗಿರುತ್ತಾರೆ. ಇದಲ್ಲದೇ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, 4 ವರ್ಷದ ಸೇವಾವಧಿ ಅಥವಾ 65 ವರ್ಷಗಳಲ್ಲಿ ಯಾವುದು ಮೊದಲಾಗುತ್ತದೆಯೋ ಅದನ್ನು ಪರಿಗಣಿಸಲಾಗುವುದು ಎಂದು. ಆದರೆ ಪ್ರೊ.ಅನಂತನ್ ಅವರು ಬೇರೆ ಲೆಕ್ಕಾಚಾರ ಮಾಡುತ್ತಿದ್ದು, ತಮ್ಮ ಸೇವಾವಧಿ ಇನ್ನು 2 ವರ್ಷವಿದೆ ಎಂದು ಅಕ್ರಮವಾಗಿ ವಿವಿಯಲ್ಲಿ ಠಿಕಾಣಿ ಹೂಡಿದ್ದಾರೆ.

ವಿಚಿತ್ರವೆಂದರೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಹೇಳುತ್ತಾರೆ. ನೂತನ ವಿಶ್ವವಿದ್ಯಾಲಯದ ಮೊದಲ ಕುಲಪತಿಯೇ ಇಂತಹ ನೀತಿಗಳಿಗೆ ನಾಂದಿ ಹಾಡಿದರೆ ವಿವಿಯ ಸ್ಥಿತಿ ಅಧೋಗತಿಗೆ ತಲುಪುವುದರಲ್ಲಿ ಅನುಮಾನವಿಲ್ಲ ಎಂಬುದುದ ಅವರ ಅಭಿಪ್ರಾಯ.

ಸರ್ಕಾರದ ಆದೇಶದಲ್ಲೇನಿದೆ?: ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಯು.ಬಿ.ಉಳವಿ ಅವರು 2010ರ ಅಗಸ್ಟ್ 16ರಂದು ಹೊರಡಿಸಿದ ಆದೇಶ ಹೀಗಿದೆ, ‘ಕರ್ನಾಟಕ ವಿಶ್ವವಿದ್ಯಾಲಯ ಕಾಯಿದೆ ಪ್ರಕಾರ ಪ್ರೊ.ಬಿ.ಆರ್. ಅನಂತನ್ ಅವರನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯನ್ನಾಗಿ 4 ವರ್ಷಗಳ ಅವಧಿಗೆ ಅಥವಾ ಸದರಿಯವರಿಗೆ 65ವರ್ಷಗಳು ವಯಸ್ಸಾಗುವುವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ’.

ಈ ಆದೇಶದಲ್ಲಿ ಒಂದಂಶವನ್ನು ಸರ್ಕಾರ ಸೇರಿಸಿದೆ. ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂದು ಹೇಳಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.

ತಿದ್ದುಪಡಿಯೇನು?: ಕಳೆದ 2011ರ ಫೆಬ್ರುವರಿಯಲ್ಲಿ ಅಧಿನಿಯಮಕ್ಕೆ ತಿದ್ದುಪಡಿ ತಂದು, ಕುಲಪತಿಯಾಗಲು ಇರುವ ವಯೋವುತಿಯನ್ನು 67ಕ್ಕೆ ಏರಿಸಲಾಯಿತು. ಇದನ್ನೇ ನೆಪವಾಗಿರಿಸಿಕೊಂಡಿರುವ ಅನಂತನ್ ಇನ್ನು ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಯೊಬ್ಬರು ಹೇಳಿದ ಪ್ರಕಾರ, ‘ಅನಂತನ್ ಅವರ ನೇಮಕವು 2010ರಲ್ಲಿ ಆಗಿದೆ. ಆದರೆ ಈ ತಿದ್ದುಪಡಿಯಾಗಿರುವುದು 2011ರಲ್ಲಿ. ಆದ್ದರಿಂದ ಅವರ ಅಧಿಕಾರವಧಿ 2013ರ ಮೇ ತಿಂಗಳಿನಲ್ಲಿಯೇ ಕೊನೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ಈ ಗೊಂದಲದ ಅರಿವಿದ್ದರೂ ಯಾವುದೆ ಕ್ರಮ ತೆಗೆದುಕೊಂಡಿಲ್ಲ’.

ಆದರೆ 2010ರ ಅ.16 ರಂದು ಹೊರಡಿಸಿದ ಅಧಿಸೂಚನೆ ಹಾಗೂ ಅ.17ರಂದು ಹೊರಡಿಸಿದ ಸರ್ಕಾರಿ ಆದೇಶವು ವಿಭಿನ್ನವಾಗಿದೆ. ಅ.17ರಂದು ಪ್ರಕಟವಾಗಿರುವ ಸರ್ಕಾರಿ ಆದೇಶದಲ್ಲಿ ‘ಕರ್ನಾಟಕ ರಾಜ್ಯ ವಿವಿ ಅಧಿನಿಯಮದ 14(5) ಮತ್ತು 14(6)ನ್ನು ಓದಿಕೊಂಡು’ ಎಂಬಂಶ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಂತನ್ ಅವರ ವಾದಕ್ಕೆ ಮನ್ನಣೆ ದೊರಕುವುದಿಲ್ಲ.

ಹುಟ್ಟಿದ ದಿನಾಂಕದ ದಾಖಲೆ ನೀಡಿಲ್ಲ!

ವಿವಿಯ ವಿಶೇಷಾಧಿಕಾರಿ ಹಾಗೂ ಕುಲಪತಿಗಳಾಗಿ ನೇಮಕವಾದ ಬಳಿಕ ಹುಟ್ಟಿದ ದಿನಾಂಕದ ಮಾಹಿತಿಯನ್ನು ಇಲಾಖೆಗೆ ನೀಡಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕಾರಣದಿಂದ ಅವರ ನಿವೃತ್ತಿ ವಯಸ್ಸು ತಿಳಿದಿಲ್ಲ ಎಂಬ ವಾದವನ್ನು ಇಲಾಖೆ ಹೇಳುತ್ತಿದೆ. ಆದರೆ ‘ಕನ್ನಡಪ್ರಭ’ಕ್ಕೆ ಈ ಕುರಿತ ದಾಖಲೆಗಳು ದೊರೆತಿದ್ದು, 1948ರ ಮೇ 2ರಂದು ಪ್ರೊ.ಅನಂತನ್ ಅವರು ಜನಿಸಿದ್ದಾರೆ.

ಕೃಪೆ : ಕನ್ನಡಪ್ರಭ 16 Jul 2013 02:00:00 AM IST

Gallery

ಡಾ. ಕಂಬಾರರಿಗೆ : ‘ಹೇಳತೇನಿ ಕೇಳು’ ಅಲ್ಲ : ‘ಕೇಳತೇನಿ ಹೇಳ್ರಿ !’

ಡಾ. ಸಿದ್ರಾಮ ಕಾರಣಿಕ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡವರೆನಿಸಿಕೊಂಡವರು, ವಿದ್ವಾಂಸರು ಎಂಬ ಬಿರುದಾಂಕಿತರು ಹೇಳಿಕೆಗಳನ್ನು ನೀಡಬೇಕಾದರೆ ಸಾವಿರ ಸಲ ಯೋಚಿಸಬೇಕು. ತಕ್ಷಣದ ಅನುಭವ ಅಥವಾ ಮಾತಿನ ಭರದಲ್ಲಿ ಬೇಕಾಬಿಟ್ಟಿಯಾಗಿ ವಿಚಾರ ಲಹರಿಗಳನ್ನು ಹರಿಯಬಿಡವುದು ಸೂಕ್ತವಲ್ಲ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡುತ್ತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ವಿಶ್ವವಿದ್ಯಾಲಯಗಳಿಂದ ಕೆಟ್ಟ … Continue reading

Gallery

ಕತೀ ಬರಿಯೂ ಮೊದಲ …. !

ಡಾ. ಸಿದ್ರಾಮ ಕಾರಣಿಕ ಪೆನ್ನು-ಹಾಳೆ ಎರಡೂ ಮುಂದ ಅದಾವು. ಮಂದಿಯ ಮಾತುಗಳೂ ತಲೆಯೊಳಗ ಗುಂಯ್ಞ ಅನ್ನಾಕತ್ತಾವು. ಒಮ್ಮೊಮ್ಮೆ ಬರೀಬೇಕಾಗಿರೋದು ಏನ ಅನ್ನೋದ ಮರ್ತ ಹೋದಾಂಗ ಅನ್ನಿಸಾಕತ್ತೀತು. ನಡು ನಡುವ ನೆನಪುಗೋಳು ಹದ್ದು ಬಂದು ತಲಿ ಮ್ಯಾಲ ಕುಂತ ಕಿರುಚಿ, ಕುಕ್ಕಾಕತ್ತಿತ್ತು ! ಕತೀ ಬರೀಬೇಕು ಅನ್ನಿಸಿತು. ಹಂಗಾರ ಹೆಂಥಾ ಕತಿ ಬರಿಯೂದು … ? ಮುಂದ … Continue reading

Gallery

ಕರ್ನಾಟಕ ಜನಸಾಹಿತ್ಯ ಸಮಾವೇಶ ಆಹ್ವಾನ ಪತ್ರಿಕೆ

ಕರ್ನಾಟಕ ಜನಸಾಹಿತ್ಯ ಸಮಾವೇಶ ದಿನಾಂಕ : ಮಾರ್ಚ್ ೨೩ ಮತ್ತು ೨೪, ೨೦೧೩. ಸ್ಥಳ :ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಾ.೨೩. ಬೆ. ೧೦.೩೦-೧೧.೩೦: ೧. ಆಶಯ ನುಡಿ ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ ಆಶಯ ಮಾತು : ಲಕ್ಷ್ಮಣ ಗಾಯಕವಾಡ, ಮರಾಠಿ ದಲಿತ ಲೇಖಕರು ಬಾನು ಮುಷ್ತಾಕ್, … Continue reading

Gallery

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !

-ಸರೋವರ್ ಬೆಂಕೀಕೆರೆ. ಭೂಮಿಯಲ್ಲಿ ಎಷ್ಟೋ ಜೀವಿಗಳು ಬದುಕಿವೆ, ಎಲ್ಲ ಪ್ರಾಣಿ ಪಕ್ಷಿಗಳು ಜಾತಿ, ಮತ, ಧರ್ಮ ಎನ್ನದೆ ಸಂತೋಷದಿಂದ ಬದುಕುತ್ತಿವೆ, ಮೊನ್ನೆ ಪತ್ರಿಕೆಯಲ್ಲಿ ಕಂಡೆ ಹಸುವು ತನ್ನ ಕರು ಅಲ್ಲದ, ತನ್ನ ಜಾತಿಗೆ ಸೇರದ ಕೊಳಚೆಯಲ್ಲಿ ವಾಸಿಸುವ ಹಂದಿಮರಿಯೊಂದಕ್ಕೆ ಹಾಲುಣಿಸಿ ಮಾನವೀಯತೆ ಮೆರೆಯಿತೆಂದು ! ನನ್ನಲ್ಲಿ ಪ್ರಶ್ನೆ ಹಾಕಿಕೊಂಡೆ ಮಾನವೀಯತೆ ಹಾಗೆಂದರೆ ? ಓಹ್ ಮಾನವ … Continue reading

ದೇವರು : ಹೆಸರು ಮತ್ತು ವಿವಾದ !

ಡಾ. ಸಿದ್ರಾಮ ಕಾರಣಿಕ
ಯಾವುದೋ ಸಿನೇಮಾ ಹಾಡೊಂದರಲ್ಲಿ ‘ಶ್ರೀ ರಾಮ’ನ ಹೆಸರು ಬಂದಿದೆಯೆಂದು ತಗಾದೆ ತೆಗೆದ ಬಗ್ಗೆ ಪಬ್ಲಿಕ್ ಟಿ.ವ್ಹಿ.ಯಲ್ಲಿ ಚರ್ಚೆ ಆರಂಭವಾಗಿದೆ. ಆ ಹಾಡಿಗೆ ವ್ಯಕ್ತಪಡಿಸುವವರು ಕನಕದಾಸರ ಹರಿಭಕ್ತಸಾರವನ್ನು ಒಮ್ಮೆ ಓದಬೇಕು.

ಅಲ್ಲಿ ಕನಕದಾಸರು ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುತ್ತ ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಟ ಎಂಬುದನ್ನು ಪರಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲೆ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ನನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.

ಇನ್ನು ಮುಂದೆ ರಾಮ, ಕೃಷ್ಣ, ಶಿವ ಮೊದಲಾದ ಗಂಡು ದೇವರುಗಳ ಮತ್ತು ಸೀತಾ, ರುಕ್ಮಿಣಿ, ದ್ರೌಪದಿ, ಲಕ್ಷ್ಮಿ, ಸರಸ್ವತಿ, ಪಾರ್ವತಿ ಮೊದಲಾದ ಹೆಣ್ಣು ದೇವರ ಹೆಸರುಗಳನ್ನು ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಟಿ.ವ್ಹಿ. ಮುಂದೆ ಕುಳಿತ ಸ್ವಾಮಿಜಿಯೊಬ್ಬರು ‘ಶ್ರೀ ರಾಮ ಅಂದ್ರೆ ಅರ್ಥ ಏನು ಗೊತ್ತಾ ? ಹೆಸರಿನ ಅರ್ಥ ಗೊತ್ತಿಲ್ಲದಿದ್ದರೆ ಹ್ಯಾಗೆ ಹೆಸರಿಡ್ತೀರಿ ?’ ಎಂದು ಜೋರಾಗಿಯೇ ಫರ್ಮಾನು ಹೊರಡಿಸಿದರು !

ಅಯ್ಯೋ ಸ್ವಾಮಿ, ಇದು ಬಿಟ್ಟು ಬಿಡಿ ; ಇನ್ನು ಮುಂದೆ ಕಲ್ಲವ್ವ, ಕಲ್ಲಪ್ಪ ಮೊದಲಾದ ಹೆಸರುಗಳನ್ನೂ ಇಡುವಂತಿಲ್ಲವೇನೋ ? ಯಾಕೆಂದರೆ ‘ನಮ್ಮ ದೇವರು ಕಲ್ಲಿನ ರೂಪದಲ್ಲಿದೆ. ಆ ಹೆಸರನ್ನು ಬಳಸಬಾರದು’ ಎಂದು ಜೋಲಿ ಹೊಡೆಯುತ್ತಾರೋ ಏನೋ ?

ಯಾಕೋ ಇತ್ತೀಚಿಗೆ ಇಂಥ ಪ್ರಕ್ರಿಯೆಗಳು ತುಂಬ ಜೋರಾಗಿಯೇ ನಡೆದಿವೆ. ಹೀಗಿರಬಾರದು ; ಹೀಗಿರಬೇಕು ; ಹೀಗೆಯೇ ಇರಬೇಕು ಎನ್ನುವ ಯಜಮಾನ್ಯ ಸಂಸ್ಕೃತಿ ಮತ್ತೇ ವಿಜ್ರಂಬಿಸಲು ಆರಂಭವಾಗಿದೆಯೇ ? ಪ್ರಜ್ಞಾವಂತರು ಯೋಚಿಸಬೇಕು ಸ್ವಾಮಿ ! ಏನಂತೀರಿ ?

ಮನುಸ್ಮೃತಿ ಇನ್ನೂ ಸುಟ್ಟಿಲ್ಲ ; ಸುಡಬೇಕಿದೆ !

ಡಾ. ಸಿದ್ರಾಮ ಕಾರಣಿಕ

ಈ ದೇಶದಲ್ಲಿ ಸ್ತ್ರೀಯರನ್ನು ‘ದೇವತೆ’ ಎಂದೇ ತಿಳಿಯಲಾಗುತ್ತದೆ ಎಂದು ಷರಾ ಬರೆಯತ್ತಲೇ ಆ ‘ದೇವತೆ’ಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಇನ್ನೂ ಮೇಲೆರಲು ಸಾಧ್ಯವಾಗಿಯೇ ಇಲ್ಲ. ಯಾಕೆಂದರೆ ಆ ‘ದೇವತೆ’ ಹೀಗೇ ಇರಬೇಕು ; ಇದನ್ನೇ ತೊಡಬೇಕು ; ಇದನ್ನೇ ಉಣ್ಣಬೇಕು ; ಇಂಥದ್ದನ್ನೇ ಮಾಡಬೇಕು ಮತ್ತು ಇಂಥದ್ದನ್ನು ಮಾಡಬಾರದು ಎಂಬ ಬಿಗಿಯಾದ ಕಟ್ಟಳೆಗಳು ಈ ದೇಶದಲ್ಲಿವೆ. ಈ ದೇಶದಲ್ಲಿ ಆ ‘ದೇವತೆ’ಯನ್ನು ಮೂರ್ಖಳು ಎಂದು ಭಾವಿಸಲಾಗುತ್ತದೆ ; ತಿಳುವಳಿಕೆ ಇಲ್ಲದವಳು ಎಂದು ಹಂಗಿಸಲಾಗುತ್ತದೆ ! ಈ ದೇಶದಲ್ಲಿ ಆ ‘ದೇವತೆ’ಯನ್ನು ಕೇವಲ ಹೇರುವ ಯಂತ್ರವನ್ನಾಗಿ ಮಾತ್ರ ನೋಡಲಾಗುತ್ತದೆ ; ಪುರುಷರ ದೈಹಿಕ ಹಸಿವನ್ನು ತೀರಿಸಿಕೊಳ್ಳಲು ಇರುವ ಒಂದು ಸಾಧನವನ್ನಾಗಿ ಪರಿಗಣಿಸಲಾಗುತ್ತದೆ ! ಹೀಗಾಗಿಯೇ ಆ ‘ದೇವತೆ’ಯ ಮೇಲೆ ನಿರಂತರ ಶೋಷಣೆಗಳು ನಡೆಯುತ್ತವೆ ; ಹೇಯವಾದ ಅತ್ಯಾಚಾರಗಳಾಗುತ್ತವೆ ! ಯಾವತ್ತೂ ಪುರುಷರ ಆಧೀನದಲ್ಲಿಯೇ ಆ ‘ದೇವತೆ’ ಇರಬೇಕು ಎಂಬ ಮನೋಭಾವ ತುಂಬಿಕೊಂಡಿದೆ ; ಏನೇ ಆದರೂ ‘ತಾಳಿ’ಕೊಳ್ಳಬೇಕು ಎಂಬ ತತ್ವಗಾರಿಕೆ ಇದೆ ! ಹೀಗಾಗಿಯೇ ಆ ‘ದೇವತೆ’ ಇಂದು ಮಾರಾಟದ ಸರಕಾಗಿದ್ದಾಳೆ ; ಭ್ರೂಣದಲ್ಲಿಯೇ ಸಾಯುತ್ತಿದ್ದಾಳೆ !

ಹೌದು, ಇದು ನನ್ನದು ಎಂದು ಹೇಳಿಕೊಳ್ಳುತ್ತಿರುವ ದೇಶದಲ್ಲಿಯೇ ನಡೆಯುತ್ತದೆ ! ಯಾಕೆಂದರೆ ಮನುಷ್ಯ ಸಂಬಂಧಗಳನ್ನೇ ಪರಗಣಿಸದ ವೈದಿಕಶಾಹಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ; ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಅಂದು ಸುಟ್ಟು ಹಾಕಿದ ಮನುಸ್ಮೃತಿ ಇನ್ನೂ ಬೂದಿಯಾಗಿಯೇ ಇಲ್ಲ ; ಅದು ಈ ದೇಶದಲ್ಲಿ ಇನ್ನೂ ಉರಿಯುತ್ತಲೇ ಇದೆ ! ಸಾಮಾಜಿಕ ಅಸಮಾನತೆಗೆ ಕಾರಣವಾಗಿ, ಬ್ರಾಹ್ಮಣ್ಯಶಾಹಿಯನ್ನು ಈ ದೇಶದ ಜನರ ಮೇಲೆ ಹೇರಿ ಯಜಮಾನಿಕೆ ವಿಕೃತಿಯನ್ನು ಮುಂದುವರಿಸುವ ಮೂಲವೇ ಮನುಸ್ಮೃತಿ ! ಇದನ್ನು ಅರಿತುಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 1927 ಡಿಸೆಂಬರ್ 20 ರಂದು ಆ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದರು ; ಇಡೀ ಜಗತ್ತು ಒಂದಾಗಿ ಬದುಕಬೇಕಾದ ಸಂದೇಶವನ್ನು ರವಾನಿಸಿದರು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ನಂತರ ಕೆಲವೇ ದಿನಗಳಲ್ಲಿ ಆ ಮನುಸ್ಮೃತಿ ಮತ್ತೇ ಚಿಗಿತುಕೊಳ್ಳತೊಡಗಿತ್ತು ! ಯಾಕೆಂದರೆ ಅದಾಗಲೇ ಈ ದೇಶದ ಎಲ್ಲರ ತಲೆಯಲ್ಲಿ ಬೀಜವನ್ನು ಬಿತ್ತಿ ರಾಶಿ ಮಾಡುವ ಹವಣಿಕೆಯಲ್ಲಿತ್ತು ! ಹೀಗಾಗಿಯೇ ಮರಾಠಿಯ ಪ್ರಗತಿಪರ ಬರಹಗಾರ ಪ್ರದೀಪ ದೇಶಪಾಂಡೆ ಹೇಳುತ್ತಾರೆ ; ‘ಮನುಸ್ಮೃತಿ ಅಜೂನಹೀ ಜಾಳತೇಚ ಆಹೆ !’ (ಮನುಸ್ಮೃತಿ ಇಂದಿಗೂ ಉರಿಯುತ್ತಲೇ ಇದೆ !)
ಈ ಮಾತನ್ನು ಸ್ಪಷ್ಟೀಕರೀಸಲು ಮನುಸ್ಮೃತಿಯಲ್ಲಿ ಹೇಳಿದ ಕೆಲವು ಮಾತುಗಳನ್ನು ಇಲ್ಲಿ ಉದ್ದರಿಸುತ್ತಿರುವೆ. (ಧಾರವಾಡದ ಸಮಾಜ ಪುಸ್ತಕಾಲಯ 2003 ರಲ್ಲಿ ಮೂರನೇ ಮುದ್ರಣವಾಗಿ ಪ್ರಕಟಿಸಿರುವ ಶೇಷ ನವರತ್ನ ಅವರು ಅನುವಾದಿಸಿರುವ ಮನುಸ್ಮೃತಿಯಿಂದ ಇಲ್ಲಿಯ ಉದ್ಧರಣೆಗಳನ್ನು ನೀಡಲಾಗಿದೆ) ಮನುಸ್ಮೃತಿಯ ಎರಡನೇ ಅಧ್ಯಾಯದ 213 ಮತ್ತು 214ನೇ ಶ್ಲೋಕಗಳು ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ವ್ಯಾಖ್ಯಾನ ಮಾಡುತ್ತವೆ ;

ಸ್ವಭಾವ ಏಷ ನಾರೀಣಾಮಿಹ ದೂಷಣಂ I
ಅತೋರ್ಥಾನ್ನ ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ’ II213 II

ಎಂದರೆ ಪುರುಷರ ಮನಸ್ಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಆದ್ದರಿಂದ ತಿಳುವಳಿಕೆಯುಳ್ಳ ಪ್ರಾಜ್ಞರು ಸ್ತ್ರೀಯರ ವಿಷಯದಲ್ಲಿ ಎಚ್ಚರ ತಪ್ಪಿ ನಡೆಯುವುದಿಲ್ಲ ಎನ್ನುವುದು ಇಲ್ಲಿಯ ಅರ್ಥ !

‘ಅವಿದ್ಯಾಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ I
ಪ್ರಮದಾ ಹ್ಯುತ್ಪಥಂ ನೇತು ಕಾಮಕ್ರೋಧವಶಾನುಗಂ’ II214 II

ಅಂದರೆ ಕಾಮ ಕ್ರೋಧಗಳಿಂದ ವಶನಾದ ಮನುಷ್ಯನನ್ನು ಅವನು ಪಂಡಿತನೇ ಇರಲಿ, ಪಾಮರನೇ ಇರಲಿ, ದಾರಿ ತಪ್ಪಿಸಲು ಸ್ತ್ರೀಯರು ಸಮರ್ಥರಾಗಿರುತ್ತಾರೆ ಎನ್ನಲಾಗಿದೆ !

‘ಸ್ತ್ರೀಯೋ ರತ್ನಾನ್ಯಥೋ ವಿದ್ಯಾ ಧರ್ಮಃ ಶೌಚ ಸುಭಾಷಿತಂ I
ವಿವಿಧಾನಿ ಚ ಶಿಲ್ಪ ಸಮಾದೇಯಾನಿ ಸರ್ವತಃ’ II229 II

ಸ್ತ್ರೀಯರು, ರತ್ನಗಳು, ಧರ್ಮ, ಶೌಚ, ಸುಭಾಷಿತ, ಶಿಲ್ಪಗಳು ಇವು ಎಲ್ಲಿದ್ದರೂ ಸಹ ಅವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂಬುದು ಮೇಲಿನ ಶ್ಲೋಕಕ್ಕೆ ನೀಡಿರುವ ಅರ್ಥವಾಗಿದೆ.

ಇವೆಲ್ಲವುಗಳನ್ನೂ ಹೇಳಿದ ಮೇಲೆ ಮೂರನೇ ಅಧ್ಯಾಯದಲ್ಲಿ,

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ I
ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ’ II56 II

ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ !’ ಎಂದು ಹೇಳಿಕೊಂಡಿರುವುದು ಇದು ತಿಪ್ಪೆ ಸಾರಿಸುವ ಕೆಲಸವಲ್ಲದೆ ಮತ್ತೇನೂ ಅಲ್ಲ ! ಇಂಥ ಮನುಸ್ಮೃತಿ ಈ ದೇಶದ ಜನರೆಲ್ಲರ ಮನಸ್ಸನ್ನು ಕೆಡಿಸಿ ಹಾಕಿದೆ.

ಸಂವಿಧಾನಬದ್ಧವಾಗಿರುವ ಈ ದೇಶದ ಆಡಳಿತ ಕೂಡ ಮನುಸ್ಮøತಿಯ ನೆರಳಿನಲ್ಲಿಯೇ ಇಂದಿಗೂ ಸಾಗಿ ಬಂದಿರುವುದು ನಮ್ಮ ದೇಶದ ದುರಂತವೇ ಸರಿ. ಬರೀ ಆಡಳಿತಗಾರರು, ಸನಾತನಿ ಪುರೋಹಿತಶಾಹಿಗಳು ಮಾತ್ರವಲ್ಲ ಈ ದೇಶದ ಪ್ರತಿಶತ ತೊಂಬತ್ತರಷ್ಟು ಜನ ಮನುಸ್ಮೃತಿಯ ಪ್ರಕಾರವೇ ಬದುಕು ನಡೆಸುತ್ತಿದ್ದಾರೆ. ಇಂದಿಗೂ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ಬದುಕು ಮನುಸ್ಮೃತಿಯ ಚೌಕಟ್ಟಿನಲ್ಲಿಯೇ ಬಂಧಿಯಾಗಿದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ! ಹೀಗಾಗಿಯೇ ಈ ದೇಶದ ದೀನ-ದಲಿತರು, ಮಹಿಳೆಯರು ಪ್ರತಿನಿತ್ಯ ಶೋಷಣೆಗೆ ಈಡಾಗಿ ನೋವು ಉಣ್ಣುತ್ತಿದ್ದಾರೆ ! ದಲಿತರ ಮೇಲೆ ನಡೆಯುವ ದೌರ್ಜನ್ಯಗಳು, ಬಹಿಷ್ಕಾರಗಳು, ಮಹಿಳೆಯರ ಮೇಲೆ ನಡೆಯುವ ಹಲ್ಲೆಗಳು, ಅತ್ಯಾಚಾರಗಳು, ಅನಾಗರಿಕ ವರ್ತನೆಗಳು ಈ ಕಾರಣಕ್ಕಾಗಿಯೇ ಇಂದು ಹೆಚ್ಚಾಗುತ್ತಲೇ ಇವೆ !

ಈ ದೇಶದ ಹೆಣ್ಣುಮಕ್ಕಳು ಇಂದು ಎಲ್ಲ ರಂಗಗಳಲ್ಲಿಯೂ ಮುಕ್ತವಾಗಿ ಭಾಗವಹಿಸುವ ಆಸಕ್ತಿಯನ್ನು ಹೊಂದಿದ್ದಾರೆ. ಶಿಕ್ಷಣದ ಮೂಲಕ ಹೊಸ ಹೊಸ ಅವಕಾಶಗಳೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಇದ್ದಾರೆ. ಕೆಲವು ಜನ ಇದರಲ್ಲಿ ಯಶಸ್ಸನ್ನೂ ಪಡೆದಿದ್ದಾರೆ. ಭಾರತೀಯ ಸಮಾಜ ಇಂದು ಬದಲಾಗಿದೆ ಎಂದು ಎದೆ ತಟ್ಟಿಕೊಂಡು ಭಾಷಣ ಬಿಗಿಯುವ ಮಂದಿಯೂ ನಮ್ಮ ನಡುವೆಯೂ ಇದ್ದಾರೆ. ಆದರೆ ಬದಲಾವಣೆ ಎನ್ನುವುದು ಹೊರಗಿನ ರೂಪ ಮಾತ್ರ ! ಹೆಣ್ಣುಮಕ್ಕಳ ವಿಷಯದಲ್ಲಿ ಇಂದಿಗೂ ಅದೇ ಹಳೆಯ ಮನೋಭಾವಗಳು ನಮ್ಮಲ್ಲಿ ಇಂದಿಗೂ ಜೀವಂತವಾಗಿವೆ ! ಯಾಕೆಂದರೆ ಈ ದೇಶದಲ್ಲಿ ಮನುಸ್ಮೃತಿ ಪೂರ್ಣವಾಗಿ ಸುಟ್ಟು ಹೋಗಿಲ್ಲ !

‘ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯಿಂದ ಬಿಗಿಯಲ್ಪಟ್ಟ ಬಂಧನದಲ್ಲಿಯೇ ಇಂದಿಗೂ ನಾವು ಬದುಕು ನಡೆಸುತ್ತಿದ್ದೇವೆ … … ಸ್ಥಳಾಂತರದ ಜೊತೆಗೆ ವೃತ್ತಿಯಾಂತರವನ್ನೂ ಮಾಡಲಾಗಿದೆ ಎಂಬುದೇನೋ ನಿಜ. ಆದರೆ ಮದುವೆ ಮಾಡುವಾಗ ಮಾತ್ರ ಇಂದಿಗೂ ಜಾತಿಯೇ ಪ್ರಧಾನ ಪಾತ್ರವಹಿಸುತ್ತದೆ. ಈ ದೃಷ್ಟಿಕೋನ ಮನುಸ್ಮೃತಿಯ ಪ್ರಭಾವದಿಂದಲೇ ಚಾಲ್ತಿಯಲ್ಲಿದೆ’ ಎನ್ನುವ ಪ್ರದೀಪ ದೇಶಪಾಂಡೆಯವರ ಮಾತುಗಳನ್ನು ಗಮನಿಸಿದಾಗ ಮನುಸ್ಮೃತಿಯ ಬೇರುಗಳು ಎಷ್ಟೊಂದು ಆಳಕ್ಕಿಳಿದು ನಮ್ಮನ್ನು ಆಳುತ್ತಿವೆ ಎಂಬುದರ ಅರಿವಾಗುತ್ತದೆ.

ಪ್ರದೀಪ ದೇಶಪಾಂಡೆಯವರ ಮಾತುಗಳನ್ನೇ ಮುಂದುವರಿಸಿ ಹೇಳುವುದಾದರೆ ಹೆಣ್ಣುಮಕ್ಕಳನ್ನು ತಮ್ಮ ಆಧೀನ ಎಂದುಕೊಳ್ಳುವ ಪ್ರವೃತ್ತಿ ಇಂದು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದೆ. ‘ಗಂಡು’ ಶ್ರೇಷ್ಠ – ಹೆಣ್ಣು ಕನಿಷ್ಠ ಎನ್ನುವ ವಿಚಾರಗಳು ನಮ್ಮ ತಲೆಯಲ್ಲಿಯೂ ಹಾಗೆಯೇ ಉಳಿದುಕೊಂಡಿವೆ. ಮದುವೆಯ ಸಂದರ್ಭದಲ್ಲಿ ಮದುಮಗನ ಕಡೆಯವರೇ ಎಲ್ಲ ಗೌರವಕ್ಕೂ ಅರ್ಹರು ; ಹೆಣ್ಣಿನ ಕಡೆಯವರು ಗೌಣ ! ಮದುವೆಯಾದ ನಂತರ ವಧುವಿನ ಹೆಸರು ಬದಲಾಗುತ್ತದೆ ; ಅಡ್ಡಹೆಸರೂ ಬದಲಾಗುತ್ತದೆ ! ಮಕ್ಕಳಾದಾಗಲೂ ಹೀಗೆಯೇ ನಮ್ಮ ವರ್ತನೆ ಇರುತ್ತದೆ – ಗಂಡು ಹುಟ್ಟಿದರೆ ಫೇಡೆ ಹಮಚುತ್ತೇವೆ ; ಹೆಣ್ಣುಮಗುವಾಗಿದ್ದರೆ ಜಿಲೇಬಿ ಅಥವಾ ಬರ್ಫಿ ಹಂಚುತ್ತೇವೆ (ಕೆಲವು ಸಲ ಅದೂ ಇಲ್ಲ !) ಮನೆಯಲ್ಲಿ ಹೆಂಡತಿಯಾದಾಕೆ ಗಂಡನನ್ನು ‘ರೀ’ ಎಂದೇ ಕರೆಯಬೇಕು ; ಗಂಡನಾದವನು ಮಾತ್ರ ಹೆಂಡತಿಯನ್ನು ‘ಏಯ್’ ಎಂದೇ ಮಾತನಾಡಿಸುತ್ತಾನೆ !
ಗಂಡಸರು ಏನು ಮಾಡಿದರೂ ‘ಅಂವಾ ಗಂಡ್ಸು ; ಮಾಡಿದರ ನಡೀತದ ಬಿಡ’ ಅನ್ನುವ ಮಾತು ಸಾಮಾನ್ಯ ; ಅದೇ ಹೆಂಗಸು ಒಂದು ಸಣ್ಣ ತಪ್ಪು ಮಾಡಿದರೂ ಕೂಡ ‘ಗಂಡುಭೀರಿ’ ಎನಿಸಿಕೊಳ್ಳುತ್ತಾಳೆ ; ವ್ಯಭಿಚಾರಿಣಿ ಪಟ್ಟ ಕಟ್ಟಲಾಗುತ್ತದೆ ! ಅನೈತಿಕ ಸಂಬಂಧ ಮಾಡಿದ ಕೆಟ್ಟ ಹುಳು ಎಂದು ದೂರೀಕರಿಸುತ್ತೇವೆ ! ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಶವ ಸಂಸ್ಕಾರ ಮಾಡುವಂತಿಲ್ಲ ; ವಿಧವೆಯಾದರೆ ಪೂಜೆ-ಪುನಸ್ಕಾರ-ಮದುವೆ-ಮುಂಜಿ-ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ; ಎರಡನೆಯ ಮದುವೆಗೂ ನೂರಾರು ವಿಘ್ನ ! ಗಂಡಸಾದರೆ ಆತ ವಿಧುರನಾದರೂ ಎಲ್ಲದರಲ್ಲೂ ಭಾಗವಹಿಸಬಹುದು ; ಎರಡನೆಯ ಮದುವೆಯನ್ನೂ (ಯಾಕೆ ಮೂರನೆಯ ಮದುವೆಯನ್ನೂ) ಮಾಡಿಕೊಳ್ಳಬಹುದು – ಇದಕ್ಕೆ ಯಾವುದೇ ತಕರಾರುಗಳು ಇಲ್ಲ ! ಮನೆಯಲ್ಲಿ ಗಂಡನಾದವನು ಆರಾಮಾಗಿ ಕುಳಿತಾಗ ಹೆಂಡತಿಯಾದವಳು ಮನೆಯ ಕೆಲಸವನ್ನೆಲ್ಲ ಅಚ್ಚಕಟ್ಟಾಗಿ ಮಾಡಿ ಮುಗಿಸಬೇಕು ; ಹೆಚ್ಚು-ಕಡಿಮೆಯಾದರೆ ಬೈಗುಳಗಳ ಸುರಿಮಳೆ ; ಬುದ್ಧಿಯಿಲ್ಲದವಳು ಎಂಬ ತೆಗಳಿಕೆ !

ಈ ಎಲ್ಲ ಕಾರಣಗಳಿಂದಲೇ ಕೆಲವು ಮುಖಂಡರು, ಸನ್ಯಾಸಿಗಳು ಹೆಣ್ಣಿನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡತೊಡಗಿದ್ದಾರೆ. ಯಾರೋ ಒಬ್ಬರು ಹೆಣ್ಣುಮಕ್ಕಳು ಹೊರಗೆ ಹೋಗಬಾರದು ; ತಗ್ಗಿ-ಬಗ್ಗಿ ನಡೆಯಬೇಕು. ಯಾವುದೇ ಅಲಂಕಾರ ಮಾಡಿಕೊಳ್ಳಬಾರದು ; ಹೊಸ ಬದುಕಿಗೆ ಹಾತೊರೆಯಬಾರದು ; ಬಟ್ಟೆಗಳನ್ನು ಮೈ ತುಂಬ ಧರಿಸಬೇಕು ಎಂದು ಮೊದಲಾಗಿ ಒದರಿ, ಹೆಣ್ಣುಮಕ್ಕಳು ಹೀಗಿದ್ದರೆ ಅವರ ಮೇಲೆ ಅತ್ಯಾಚಾರಗಳು ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು. ನಗರಗಳಲ್ಲಿ ಹೆಣ್ಣುಮಕ್ಕಳು ವಿದೇಶಿ ಸಂಸ್ಕೃತಿಯಿಂದ ಪ್ರಭಾವಿತರಾಗಿರುವುದರಿಂದ ಚೆಲ್ಲು ಚೆಲ್ಲಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಅತ್ಯಾಚಾರ ಪ್ರಮಾಣ ಹೆಚ್ಚು ಎಂದು ಕರಬುತ್ತಾರೆ ! ಯಾಕೆ ಹಳ್ಳಿಗಳಲ್ಲಿಯೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುವುದಿಲ್ಲವೆ ! ಅಲ್ಲಿ ಪ್ರಚಾರ ಸಿಗುವುದಿಲ್ಲ ; ನಗರಗಳಲ್ಲಿ ಸುದ್ದಿ ಬಹುಬೇಗ ಹಬ್ಬುತ್ತದೆ ಅಷ್ಟೆ ! ಹಾಗೆ ನೋಡಿದರೆ ಇಂಥ ಎಲ್ಲಿ ವಿಕೃತಿ ಇರುತ್ತದೆಯೋ ಅಂಥಲ್ಲೆಲ್ಲ ಇವು ನಡೆಯುತ್ತಲೇ ಇರುತ್ತವೆ.

ಇನ್ನೊಬ್ಬರು ಬಾಯಿ ಬಾಯಿ ಪಡೆದುಕೊಂಡು ಅತ್ಯಾಚಾರಿಗಳು ಎದುರಿಗೆ ಬಂದಾಗ ಹೆಣ್ಣುಮಕ್ಕಳು ಅವರಿಗೆ ಕೈ ಮುಗಿದು. ‘ಅಣ್ಣಾ, ಅಪ್ಪಾ’ ಎನ್ನಬೇಕು. ಆಗ ಅತ್ಯಾಚಾರಿಗಳ ಮನಃಪರಿವರ್ತನೆಯಾಗುತ್ತದೆ ಎಂಬುದಾಗಿ ಪ್ರವಚನ ಹೇಳತೊಡಗಿದರು ! ಹೆಣ್ಣನ್ನು ಎಷ್ಟೊಂದು ಹೀನಾಯವಾಗಿ ನಡೆಯಿಸಿಕೊಳ್ಳುತ್ತದೆಯಲ್ಲ ಈ ದೇಶ ! ವಿಕೃತ ಮನಸ್ಸಿನವರ ಮುಂದೆ ಕೈ ಕಾಲು ಹಿಡಿದು ಕಾಪಾಡಿ ಎಂದರೆ ರಕ್ಷಣೆ ಸಿಗಲು ಸಾಧ್ಯವೆ ! ಇಂಥ ಮಾತುಗಳೆಲ್ಲ ಹೆಣ್ಣುಮಕ್ಕಳನ್ನು ಇನ್ನೊಂದಿಷ್ಟು ಭ್ರಮಾವಲಯದಲ್ಲಿ ಕೆಡವಲು ಮಾಡುವ ಹುನ್ನಾರಗಳೇ ಆಗಿವೆ ! ಇದಕ್ಕೆಲ್ಲ ಮೂಲ ಕಾರಣ ಮನುಸ್ಮೃತಿ ಇನ್ನೂ ಉರಿಯುತ್ತಲೇ ಇದೆ ! ಅದನ್ನು ಮತ್ತೊಮ್ಮೆ ನಾವೆಲ್ಲ ಸೇರಿ ನಮ್ಮ ಮನೆಗಳಿಂದ-ಮನಗಳಿಂದ ಹೊರ ತಂದು ಸಂಪೂರ್ಣವಾಗಿ ಸುಡಬೇಕಿದೆ ; ಸುಟ್ಟು ಇನ್ನೆಂದೂ ಚಿಗಿಯದಂತೆ ಬೂದಿ ಮಾಡಬೇಕಿದೆ.

*****

ದಲಿತ ಸಾಹಿತ್ಯದ ಗೈರುಹಾಜರಿಯಲ್ಲಿ ಕಸಾಪ ಸಮ್ಮೇಳನ !

ಬಸವರಾಜ ಸೂಳಿಭಾವಿ – ಡಾ. ಎಚ್.ಎಸ್.ಅನುಪಮಾ

ಸರ್ಕಾರ ಅಲುಗಾಡುತ್ತಿರುವಾಗಲೂ ಸರ್ಕಾರಿ ಕೃಪಾಪೋಷಿತ ಸಾಹಿತ್ಯ ಪರಿಷತ್ತು ಮತ್ತೊಂದು ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಜ್ಜಾಗುತ್ತಿರುವಾಗ ಅದರ ಸ್ವರೂಪದ ಬಗ್ಗೆ ಮತ್ತೆ ಗಂಭೀರ ಚರ್ಚೆ ನಡೆಯತೊಡಗಿದೆ. ವಿಜಾಪುರದ ಬರದ ನಾಡು ತನ್ನಲ್ಲಿರುವ ಸೌಂದರ್ಯ, ಐತಿಹಾಸಿಕ ಸ್ಮಾರಕಗಳನ್ನೆಲ್ಲ ತೋರಿಸಲು ತವಕಿಸುತ್ತಿರುವಾಗ ಪರಿಷತ್ತಿನ ನಿಜಮುಖ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಸಮ್ಮೇಳನದಲ್ಲಿ ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ವಚನ ಸಾಹಿತ್ಯ, ಅನುಭಾವಿ ಸಾಹಿತ್ಯ, ಗಝಲ್ ಸಾಹಿತ್ಯ, ಜಾನಪದ ಸಾಹಿತ್ಯ ಇತ್ಯಾದಿ ಸಾಹಿತ್ಯದ ನಾನಾ ಪ್ರಕಾರಗಳಿಗೆ ಒಂದೊಂದು ಗೋಷ್ಠಿ ಇದೆ. ಎಂದಿನಂತೆ ದಲಿತ ಸಾಹಿತ್ಯ ಪ್ರಕಾರವಷ್ಟೇ ಗೈರುಹಾಜರಿ. ರಾಜಾಶ್ರಯದಲ್ಲಿ ಹುಟ್ಟಿದ ಕಸಾಪ ತಳ ಸಮುದಾಯಗಳ ತಲ್ಲಣ ಒಳಗೊಂಡ ಸಾಹಿತ್ಯದ ದನಿಯಲ್ಲ ಎಂಬುದನ್ನು ಅದರ ನಡೆ ಸ್ಪಷ್ಟಪಡಿಸುತ್ತಲೇ ಬಂದಿದೆ.
ನೂರು ವರ್ಷ ಮಿಕ್ಕಿದ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಈ ತನಕ ಆಯ್ಕೆಯಾದವರಲ್ಲಿ ಒಬ್ಬರೂ ದಲಿತ ಸಮುದಾಯದಿಂದ ಬಂದವರಿಲ್ಲ. ನಡೆದ ಎಪ್ಪತ್ತೊಂಬತ್ತು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾದವರಲ್ಲಿ ಗೀತಾ ನಾಗಭೂಷಣ ಒಬ್ಬರಷ್ಟೇ ಪರಿಶಿಷ್ಟ ಪಂಗಡದವರು. ಜಿಲ್ಲಾ ಘಟಕಗಳ ಸಂಘಟನೆ ಮತ್ತು ಸಮ್ಮೇಳನಗಳಲ್ಲಿಯೂ ಇದು ಪುನರಾವರ್ತನೆಯಾಗಿದೆ.
ಈ ಅವಧಿಯಲ್ಲಿ ಚಾಮರಾಜನಗರ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರ ಯಾದಿಯಲ್ಲಿ ದಲಿತ ಸಮುದಾಯದ ಸಾಹಿತಿಗಳ ಹೆಸರುಗಳಿಲ್ಲ. ಇದು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಕಟುಸತ್ಯವೆಂದರೆ ಕಸಾಪಕ್ಕಿರುವುದು ದಲಿತ ಅಸ್ಮಿತೆ ನಿರಾಕರಿಸುವ ಮೇಲ್ಜಾತಿ ಚಹರೆ. ಜಾತಿ ಆಧಾರಿತ ಸಮಾಜದಲ್ಲಿ ಕಸಾಪ ಮೇಲ್ವರ್ಗದವರ ಸಾಹಿತ್ಯಿಕ ಸಂವೇದನೆಗಳ ಅಭಿವ್ಯಕ್ತಿ ಘಟಕದಂತಿದೆ. ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಗಳಲ್ಲಿ ದಲಿತ ಸಾಹಿತ್ಯ ಗೋಷ್ಠಿ ಇಡಬೇಕೆಂಬ ಅಭಿಪ್ರಾಯ ವ್ಯಕ್ತಗೊಂಡಾಗಲೂ ಅದನ್ನು ನಿರಾಕರಿಸುವ ಅಸಡ್ಡೆ ಪ್ರಕಟವಾಗಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ.
ಹಂಪನಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ 1979ರಲ್ಲಿ ನಡೆದ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿ ಇಡಿ ಎಂಬ ಕೂಗು ಕೇಳಿಬಂತು. ಚನ್ನಣ್ಣ ವಾಲೀಕಾರರ ಆ ನಿಲುವಿಗೆ ಕಸಾಪ ಅಧ್ಯಕ್ಷರು ಸಾಹಿತ್ಯದಲ್ಲಿ `ದಲಿತ-ಬಲಿತ’ ಎಂಬುದಿಲ್ಲ ಎಂದು ಹೇಳಿದ್ದರು. ಈ ಮಾತು ಅವರೊಬ್ಬರ ಹೇಳಿಕೆ ಮಾತ್ರವಲ್ಲ, ಸಾಹಿತ್ಯದಲ್ಲಿ ಮೇಲ್ಜಾತಿಗಳ ಪ್ರಾಬಲ್ಯ ಮತ್ತು ಧೋರಣೆಯ ಪುರಾವೆಯೂ ಆಗಿದೆ. ಕಸಾಪದ ಈ ಮನೋಧರ್ಮವನ್ನು ವಿರೋಧಿಸಿಯೇ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿದ್ದರೂ ಆ ಧೋರಣೆ ವಿಜಾಪುರ ಸಾಹಿತ್ಯ ಸಮ್ಮೇಳನದವರೆಗೂ ಮುಂದುವರೆದುಕೊಂಡು ಬಂದಿದೆ.
ಸಮ್ಮೇಳನದಲ್ಲಿ ಯಾವ ಗೋಷ್ಠಿಯನ್ನಾದರೂ ಇಡುವ ಸ್ವಾತಂತ್ರ್ಯವಿರುವಾಗ ದಲಿತ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗೆ ಅವಕಾಶ ನೀಡಿ ಎಂದು ವಿಜಾಪುರ ಸಮ್ಮೇಳನದ ಪೂರ್ವಭಾವಿ ಸಭೆಗಳಲ್ಲಿ ದಲಿತ ಸಾಹಿತಿಗಳು ಒತ್ತಾಯಿಸುತ್ತಲೇ ಬಂದಿದ್ದರು. ದಲಿತ ಸಂಘಟನೆಗಳ ಅಭಿಮತವೂ ಅದೇ ಆಗಿತ್ತು. ಅಷ್ಟಾದರೂ ದಲಿತ ಸಾಹಿತ್ಯ ಗೋಷ್ಠಿಗೆ ಅವಕಾಶ ನೀಡುವ ವಿಚಾರ ಕೈಬಿಟ್ಟುಹೋಗಿದೆ. ಜಾತಿಪದ್ಧತಿ ವಿರುದ್ಧ ಚಾರಿತ್ರಿಕ ಹೋರಾಟ ಕಟ್ಟಿ, ಅನುಭವ ಮಂಟಪದಲ್ಲಿ ದಲಿತ ದಮನಿತ ದನಿಗಳಿಗೆ ವಿಪುಲ ಅವಕಾಶ ನೀಡಿದ ಬಸವಣ್ಣನ ನಾಡಿನಲ್ಲಿ ನಡೆವ ಸಮ್ಮೇಳನ ದಲಿತ ಸಾಹಿತ್ಯ ಚರ್ಚೆಗೆ ಆಸ್ಪದ ಕಲ್ಪಿಸದೇ ಹೋಗಿರುವುದು ಕಸಾಪದ ಮೇಲ್ಜಾತಿ ಪ್ರೇಮವನ್ನು ಢಾಳಾಗಿ ತೋರ್ಪಡಿಸಿದೆ.
ದಲಿತ ಚಳವಳಿಯ ಮುನ್ನ ಮತ್ತು ನಂತರ ರಚಿತವಾದ ಅಪಾರ ದಲಿತ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡಾಗ; ಸಂವಿಧಾನಾತ್ಮಕ ಕ್ರಮಗಳ ಹೊರತಾಗಿಯೂ ದಲಿತ ಸಮುದಾಯ ಬಿಕ್ಕಟ್ಟುಗಳಲ್ಲಿ ಮುಳುಗಿರುವಾಗ; ಬೆರಳೆಣಿಕೆಯಷ್ಟು ದಲಿತ ಸಾಹಿತಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದರೂ ದಲಿತ ಸಂವೇದನೆ – ಬಿಕ್ಕಟ್ಟು ಕುರಿತು ಒಂದೂ ಗೋಷ್ಠಿಯಿಲ್ಲದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬಹುದೊಡ್ಡ ಲೋಪವಾಗಿ ಕಾಣಿಸುತ್ತಿದೆ.
ಇಲ್ಲಿ ಕೆಲ ಪ್ರಶ್ನೆಗಳೇಳುತ್ತವೆ. ಭಾಗವಹಿಸುತ್ತಿರುವ ದಲಿತ ಲೇಖಕರು ಏಕೆ ಈ ಕುರಿತು ಪ್ರಶ್ನಿಸುವುದಿಲ್ಲ? ಸಾಹಿತ್ಯ ಪರಿಷತ್ತಿನಲ್ಲಿ ಪರಿಶಿಷ್ಟಜಾತಿ ಕೋಟಾದಲ್ಲಿ  ಪ್ರಾತಿನಿಧ್ಯ ಪಡೆದವರೇಕೆ ಪ್ರತಿಭಟಿಸುವುದಿಲ್ಲ? ದಲಿತ ಪ್ರಶ್ನೆಯನ್ನು ದಲಿತರೇ ಎತ್ತಬೇಕೆಂದು ದಲಿತೇತರ ಲೇಖಕರು ಏಕೆ ಭಾವಿಸುತ್ತಾರೆ? ಮಾತೆತ್ತಿದರೆ ದಲಿತ ಪರ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುವ ಸರ್ಕಾರದಿಂದ ಅನುದಾನ ಪಡೆಯುವ ಪರಿಷತ್ತು ಗೋಷ್ಠಿಯೊಂದನ್ನು ದಲಿತ ಸಂವೇದನೆಗೆ ಮೀಸಲಿಡಲು ಏಕೆ ಹಿಂದೆ ಮುಂದೆ ನೋಡುತ್ತದೆ? ಇಂಥ ಪ್ರಶ್ನೆಗಳಿಗೆ ಸಮಜಾಯಿಷಿ ಉತ್ತರಗಳು ಸಿದ್ಧವಾಗಿರುತ್ತವೆ. ಆದರೆ ಇಂಥ ಸಮಜಾಯಿಷಿಗಳ ಸಾರ ಇಷ್ಟೆ: ದಲಿತ ಭಾಗವಹಿಸುವಿಕೆ ಮತ್ತು ಪ್ರತಿನಿಧಿತ್ವ ಪ್ರಾತಿನಿಧಿಕವಾಗಿರಲೆಂದೇ ಹೊರತು ಸಮಾನ ನೆಲೆಯ ಸಹಭಾಗಿತ್ವ ಹಾಗೂ ಒಳಗೊಳ್ಳುವಿಕೆಗಲ್ಲ.
ಸಾಮಾಜಿಕ ನ್ಯಾಯದ ಮೇಲೆ ಆಣೆಯಿಡುವ ಸರ್ಕಾರದ ಲೋಪಗಳನ್ನು ಎತ್ತಿತೋರಿಸಿ ಪ್ರಶ್ನಿಸುವುದೇ ಇಷ್ಟು ಕಷ್ಟವಾದರೆ; ಭಾಷೆ ಕುರಿತ ತಪ್ಪು ನೀತಿಗಳ ವಿರುದ್ಧ, ನಿರುಪಯೋಗಿ ಕಾರ್ಯಕ್ರಮಗಳ ವಿರುದ್ಧ, ಜನವಿರೋಧಿ ತಾತ್ವಿಕತೆಯ ವಿರುದ್ಧ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗುವುದು ದೂರವೇ ಉಳಿಯಿತು.
ಸಾಹಿತ್ಯ, ಕಲೆಗಳು ಎಂದಿನಿಂದ ರಾಜಾಶ್ರಯದಲ್ಲಿ ಅರಳಿವೆ, ನರಳಿವೆ. ಹಾಗೆಯೇ ರಾಜಸ್ವದ ಹಂಗಿಲ್ಲದೆ ಜನಪದರ ಬಯಲಲ್ಲಿ ಜೀವಂತವಾಗಿಯೂ ಉಳಿದಿವೆ. ಸಾಹಿತ್ಯಕ್ಕೆ ದೊರಕುವ ರಾಜಾಶ್ರಯ ಕೇವಲ ಆಸ್ಥಾನ ಕವಿ, ಪಂಡಿತರ ಸ್ವ-ಪೋಷಣೆಗಷ್ಟೇ ಸೀಮಿತವಾಗುವುದಾದರೆ; ರಾಜಾಶ್ರಯದ ಹೆಮ್ಮರ ಸಣ್ಣಪುಟ್ಟ ಸಸಿಗರಿಕೆಗಳೆಂಬ ಬಹುತ್ವ ಬಿಂಬಿಸುವ ಜೀವಸಂಕುಲದ ಬೆಳವಣಿಗೆಗೆ ಮಾರಕವಾಗುವುದಾದರೆ; ಅದು ಭಾಷೆಗೂ, ಆ ಭಾಷೆಯ ಸಾಹಿತ್ಯಕ್ಕೂ ಶತ್ರುವೇ.
ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರೀ ಅನುದಾನವನ್ನವಲಂಬಿಸಿದ ಒಂದು ಸಂಸ್ಥೆ. ಪ್ರತಿ ವರ್ಷ ನಡೆಯುವ ಸಮ್ಮೇಳನವೂ ಅದರ ಪ್ರತಿಬಿಂಬವೇ ಆಗಿರುತ್ತದೆ. ಅದು ಎಷ್ಟು ರಾಜಕೀಕರಣಗೊಂಡಿದೆಯೆಂದರೆ ಅಲ್ಲಿ ಸಾಹಿತಿಗಳನ್ನು ದುರ್ಬೀನು ಹಾಕಿ ಹುಡುಕಬೇಕು. ಅಷ್ಟೇ ಅಲ್ಲ, ಅದು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎನ್ನುವಂತೆಯೂ ಇಲ್ಲ. ಸರ್ಕಾರದ ಹಂಗಿನಲ್ಲಿರುವ ಕಸಾಪದಲ್ಲಿ ರಾಜಕೀಯ-ಸಾಮಾಜಿಕ ಬದುಕಿನ ಲೆಕ್ಕಾಚಾರ, ಸಮೀಕರಣಗಳೇ ಮುಂದುವರೆಯುತ್ತವೆ. ಎಲ್ಲೆಡೆ ಇಂಗ್ಲಿಷ್ ಶಾಲೆ ತೆರೆಯಲು ಅವಕಾಶ ಕೊಟ್ಟು ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರ ಮತ್ತು ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಕಸಾಪ, ಸರ್ಕಾರ ಕೊಡುವ ಅನುದಾನದಿಂದ ಬಾಯಿಮುಚ್ಚಿಕೊಂಡಿದೆ. ಸರ್ಕಾರದ ಅನುದಾನ ಜನರ ಹಣ, ಅದನ್ನು ಕೊಡಬೇಕಾದ್ದು ಸರ್ಕಾರದ ಕರ್ತವ್ಯ ಎಂದುಕೊಂಡರೂ ಅದರ ಅಧೀನತೆ ಮಗ್ಗಲು ಬದಲಿಸಿದಂತಾಗುತ್ತದೆ.
ಸಾಹಿತ್ಯ ಚಳವಳಿಯಲ್ಲಾಗುವ ಹೊಸತನಗಳಿಗೆ ತೆರೆದುಕೊಳ್ಳದೇ, ಕಾಲದ ಪಲ್ಲಟಗಳನ್ನು ಗಮನಿಸದೇ ಬೀಸುಗಾಲಿಡುವ ಕಸಾಪ ಉದ್ದಕ್ಕೂ ಸಾಂಪ್ರದಾಯಿಕ ನೆಲೆಯಲ್ಲಿ ಒಂದೇ ಮಾದರಿಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಕಾಲದ ಸಂಕಟಗಳಿಗೆ, ಅದನ್ನು ಒಳಗೊಳ್ಳುವ ಸಾಹಿತ್ಯ ಸಂವೇದನೆಯ ಕಡೆಗೆ ಕ್ಯಾರೆ ಅನ್ನದೆ ವರ್ಷವರ್ಷ ಸಮ್ಮೇಳನ ನಡೆದು ಗೊತ್ತುವಳಿ ಸ್ವೀಕರಿಸಲಾಗುತ್ತಿದೆ. ಪರಿಷತ್ತು ಜಾತಿ ವಾಸನೆಯಿಂದ ಎಂದೂ ಬಿಡಿಸಿಕೊಳ್ಳದಿರುವುದು; ರಾಜಕಾರಣಿಗಳಿಂದ ಉದ್ಘಾಟಿಸಲ್ಪಡುವುದು; ಸಾಹಿತ್ಯಕ್ಕೆ ಸಂಬಂಧವೇ ಇಲ್ಲದ ಸ್ವಾಮಿಗಳನ್ನು ಕರೆತಂದು ಉಧೋ ಉಧೋ ಎನ್ನುವುದು ಇವೆಲ್ಲ ಅದರ ಸ್ವರೂಪಕ್ಕೆ ತಕ್ಕ ಪುರಾವೆಗಳಾಗಿವೆ.
ಎಂದೇ ಕಸಾಪ ಹೊಸತನ ಪಡೆದುಕೊಳ್ಳಬಯಸಿದಲ್ಲಿ ತುಂಬ ನಿಷ್ಠುರ ದಾರಿ ಕ್ರಮಿಸಬೇಕಾಗುತ್ತದೆ. ಸ್ವಾಯತ್ತ ಸಂಸ್ಥೆಯಾಗಿ ತನ್ನ ಹಣಕಾಸನ್ನು ತಾನೇ ಉತ್ಪಾದಿಸಿಕೊಂಡು ಸರ್ಕಾರದ ಹಂಗಿನಿಂದ ಹೊರಬರಬೇಕು. ಕಸಾಪ ವರ್ತಮಾನದ ತಲ್ಲಣಗಳ ಬಗ್ಗೆ ಮಾತನಾಡಿ ಜನರ ಧ್ವನಿಯಾಗಬೇಕು. ಸಾಹಿತ್ಯದ ಬೆಳವಣಿಗೆ ಗಮನಿಸಿ ಹೊಸ ಸಾಧ್ಯತೆಗಳಿಗೆ ಅವಕಾಶ ನೀಡಬೇಕು. ರಾಜಕಾರಣದ ಮತ್ತು ಆಳುವವರ ಭಾಷೆಯಾದ ಮೆರವಣಿಗೆಯ ಔಚಿತ್ಯ ಏನೆಂದು ವಿವೇಚನೆಗೊಳಪಟ್ಟು ಸರಳತೆ ಸಾಹಿತ್ಯ ಸಮ್ಮೇಳನಗಳ ಆದ್ಯತೆಯಾಗಬೇಕು. ಸಾಹಿತ್ಯ ಅರಿವಿನ ವಿನಯದತ್ತ ಸಾಗಬೇಕು.

ಕಸಾಪ ಮುನ್ನಡೆಸುವವರು ಈ ಎಲ್ಲದರ ಕುರಿತು ತುರ್ತಾಗಿ ಯೋಚಿಸಬೇಕು.

ಕೃಪೆ : ಪ್ರಜಾವಾಣಿ

ಸಾಹಿತ್ಯ ಸಂಭ್ರಮಕ್ಕೆ ತಕ್ಷಣ ಪ್ರತಿಕ್ರಿಯಾತ್ಮಕ ವಿರೋಧ ಬೇಕು !

ಡಾ. ಸಿದ್ರಾಮ ಕಾರಣಿಕ
‘ಸಾಹಿತ್ಯ ಸಂಭ್ರಮ ಹುಟ್ಟು ಹಾಕಿರುವ ಪ್ರಶ್ನೆಗಳು’ ಎಂಬ ಎಂ.ಡಿ. ಒಕ್ಕುಂದ ಅವರ ಲೇಖನ (ವಿ.ಕ-25-01-2013) ಸಕಾಲಿಕವಾಗಿದೆ. ವ್ಯಾಪಾರೀ ಮನೋಭಾವವನ್ನಿಟ್ಟುಕೊಂಡು ಸಾಹಿತ್ಯವನ್ನು, ಸಾಹಿತ್ಯ ಚರ್ಚೆಯನ್ನು ಮಾಡಲು ಮುಂದಾಗಿದ್ದ ಸಾಹಿತ್ಯ ಸಂಭ್ರಮದ ಟ್ರಸ್ಟು, ಪ್ರಜ್ಞಾವಂತರ ಭಾರೀ ಪ್ರತಿಭಟನೆ ಮತ್ತು ವಿರೋಧದ ಕಾರಣವಾಗಿ ನಿಯಮಾವಳಿಗಳನ್ನು ಸಡಿಲಿಸಿಕೊಂಡಿರುವುದು ಸ್ವಾಗತಾರ್ಹವಾದರೂ ಅದರ ನಡೆಯಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

‘ಸಾಹಿತ್ಯಿಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ’ ಎನ್ನುವ ಟ್ರಸ್ಟಿನ ಗೌರವಾಧ್ಯಕ್ಷ ಡಾ. ಎಂ. ಎಂ. ಕಲಬುರ್ಗಿಯವರು ಹೇಳಿದ್ದು ಮತ್ತು ಟ್ರಸ್ಟಿನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್ ಅವರು ಹೇಳಿರುವ ‘ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳುವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ’ ಎನ್ನುವ ಮಾತುಗಳು ಕಾರ್ಯಕ್ರಮದ ಹೊಸ ಸಾಧ್ಯತೆಗಳ ಬಗ್ಗೆ ತಿಳಿಸುವ ಪರಿಯಲ್ಲಿದ್ದರೂ ಆ ಮಾತುಗಳ ಹಿಂದೆ ಚಳುವಳಿಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಬಗ್ಗೆ ಅವರಿಗಿರುವ ನಿಷ್ಕಾಳಜಿಯನ್ನು ವ್ಯಕ್ತಿಸುತ್ತವೆ. ಗೋಷ್ಟಿಗಳಲ್ಲಿ ಇರುವ ವಿಷಯಗಳು ಅಂಥ ಹೊಸ ಕಲ್ಪನೆಗಳನ್ನೇನೂ ಹುಟ್ಟು ಹಾಕುವುದಿಲ್ಲ. ಕತೆ ಹುಟ್ಟುವ ರೀತಿ, ಕತೆ ಹೇಳುವ ಕಲೆ, ಆತ್ಮಕತೆಗಳ ಓದು, ಪ್ರಶಸ್ತಿಗಳ ಹಾವಳಿ ಪ್ರಾಚೀನ ಕಾವ್ಯವಾಚನ, ಅಂತರ್ ಜಾಲ ಕನ್ನಡ, ಕನ್ನಡ ವಿಮರ್ಶೆ, ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು ಮೊದಲಾದವುಗಳ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. ‘ಹಾಗಿರಬಾರದು; ಹೀಗೆ ಇರಬೇಕು; ಹೀಗೆಯೇ ಇರಬೇಕು’ ಎಂಬುದರತ್ತಲೇ ಹೆಚ್ಚಿನ ಒತ್ತು ನೀಡುವ ಇದು ಸಂಭ್ರಮವಾದರೂ ಹೇಗಾದೀತು ? ತಮ್ಮ ಬದ್ಧತೆಗಳನ್ನೇ ಎಲ್ಲರೂ ಅನುಸರಿಸಬೇಕು ಎಂಬ ಯಜಮಾನಿಕೆಯ ಗತ್ತುಗಾರಿಕೆ ಇಲ್ಲಿ ಕಂಡು ಬರುತ್ತದೆ. ನಮ್ಮ ನಾಡಿನ ಗಮನ ಸೆಳೆಯುವ ಬರಹಗಾರರು, ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಎಂದುಕೊಂಡಿದ್ದ ಮಂದಿಯೇ ಇಂಥ ಯಜಮಾನಿಕೆ ನಡೆಸಲು ಮುಂದಾಗಿರುವುದು ತುಂಬ ವಿಪರ್ಯಾಸ ಎನ್ನುವುದಕ್ಕಿಂತ ನಂಬಿಕೆಯನ್ನೇ ಬುಡಮೇಲಾಗಿಸುವ ಮನೋಭಾವ ಎನ್ನಬಹುದೇನೋ ! ಇಂದು ನಡೆದ ಕಾರ್ಯಕ್ರಮವನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಭಾ ಭವನದ ಹೊರಗೆ ನಾಲ್ಕೈದು ಸೆಕ್ಯೂರಿಟಿ ಗಾರ್ಡುಗಳು, ಒಳಗೆ ಇನ್ನೊಂದಿಷ್ಟು ಸೆಕ್ಯುರಿಟಿ ಗಾರ್ಡುಗಳು ಟಿಪ್‌ಟಾಪ್ ಆಗಿ ನಿಂತಿದ್ದರು. ಒಳಗೆ ಮಾತನಾಡಿದರೆಲ್ಲಿ ಹೊರ ಹಾಕುತ್ತಾರೋ ಎಂದುಕೊಂಡು ಉಸಿರಾಡಿಸಲೂ ಕಷ್ಟಪಡುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು, ಹೊರಗಡೆ ಇನ್ನೂ ಪುಸ್ತಕಗಳ ಕಟ್ಟನ್ನೇ ಬಿಚ್ಚಿಡುತ್ತಿದ್ದ ನಾಲ್ಕೈದು ಪುಸ್ತಕ ವ್ಯಾಪಾರಿಗಳು, ಗಂಟು ಹಾಕಿಕೊಂಡಂತಿದ್ದ ಮುಖಗಳು ತುಂಬ ನಿರಾಸೆಯನ್ನುಂಟು ಮಾಡಿದವು. ಐನೂರು ಕೊಟ್ಟು ಬಂದವರು ಯಾವ ಸಾರ್ಥಕತೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಸಂಭ್ರಮಕ್ಕೆ ಆಗಮಿಸಿರುವ ದೊಡ್ಡ ದೊಡ್ಡ ಸಾಹಿತಿಗಳ ಜೊತೆಗೆ ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು ಎಂಬ ಅವರ ಹಂಬಲ ಮಾತ್ರ ಈಡೇರಬಹುದೇನೋ !

ಇಂತಹ ಸಾಂಸ್ಕೃತಿಕ ದಿವಾಳಿತನಕ್ಕೆ ಎಡೆ ಮಾಡಿಕೊಟ್ಟಿರುವ ಈ ‘ಸಂಭ್ರಮ’ ವನ್ನು ವಿರೋಧಿಸಿ ಧಾರವಾಡದ ಪ್ರಗತಿಪರ ಬರಹಗಾರರ ಹಾಗೂ ಸಂಘಟನೆಗಳ ವೇದಿಕೆ ‘ಜನತೆಯತ್ತ ಸಾಹಿತ್ಯ’ ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರೂ ಅದನ್ನು ‘ಸಂಭ್ರಮ ಸಂಘಟಕರ’ ಮಾತು ಕೇಳಿ ಮುಂದೆ ಹಾಕಿದ್ದಾದರೂ ಯಾಕೆ ಎಂದು ತಿಳಿಯುತ್ತಿಲ್ಲ. ರಾಜಿಯಾಗುವ ಮನೋಧರ್ಮ ಇನ್ನೂ ಬದಲಾಗಿಲ್ಲ ಎಂದರೆ ಧಾರವಾಡದಲ್ಲಿ ಇನ್ನು ಮುಂದೆ ‘ಸಂಭ್ರಮ’ ಮಾದರಿಯ ಕಾರ್ಯಕ್ರಮಗಳು ಯಾರ ಮುಲಾಜಿಗೂ ಕಾಯದೆ ಕಾರ್ಯಪ್ರವತ್ತರಾಗಬಲ್ಲವು ! ‘ಸಂಭ್ರಮ’ ಆರಂಭದ ದಿನವೇ ಒಂದು ಸಣ್ಣ ಪ್ರತಿಭಟನೆಯನ್ನೋ ಪರ್ಯಾಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೋ ಅದು ಬೀದಿಯಲ್ಲಾದರೂ ಸರಿ ಮಾಡಿದ್ದರೆ ಪ್ರತಿಭಟನೆಗೆ ಒಂದು ಅರ್ಥ ಬರುತ್ತಿತ್ತು. ಮಾರ್ಚಿನಲ್ಲಿ ‘ಸಂಭ್ರಮ’ ವನ್ನು ವಿರೋಧಿಸಿ ಮಾಡುವ ಕಾರ್ಯಕ್ರಮ ಪರ್ಯಾಯ ಎನಿಸಿಕೊಳ್ಳಲಾರದು. ಎಂ.ಡಿ. ಒಕ್ಕುಂದ ಅವರು ಹೇಳುವಂತೆ ‘ಕರ್ನಾಟಕದ ಚರಿತ್ರೆಯಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು ಆಸ್ಥಾನೀಕರಿಸುವ, ಅಗ್ರಹಾರೀಕರಿಸುವ ಪ್ರಯತ್ನಗಳು ನಡೆದಾಗಲೆಲ್ಲ ತೀವ್ರವಾದ ಪ್ರತಿಭಟನೆಗಳು ಸಜನಶೀಲವಾದ ಪರ‌್ಯಾಯಗಳು ರೂಪ ತಾಳಿವೆ’ ಎಂಬುದೇ ನಿಜವಾದರೆ ಇನ್ನೂ ಕಾಲ ಮಿಂಚಿಲ್ಲ; ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಎದುರಿನಲ್ಲೇ ನಡೆಯುತ್ತಿರುವ ವೈಚಾರಿಕ ಬದ್ಧತೆಯಿಲ್ಲದ ‘ಸಂಭ್ರಮ’ ದ ಕೊನೆಯ ದಿನವಾದರೂ ಪರ್ಯಾಯ ಮಾದರಿಯಲ್ಲಿ ವಿಶ್ವವಿದ್ಯಾಲಯ ವೃತ್ತದಲ್ಲಿ ಅಥವಾ ಇನ್ನೆಲ್ಲಿಯಾದರೂ ಒಂದು ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಧಾರವಾಡದ ಪ್ರಜ್ಞಾವಂತ ಗೆಳೆಯರು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.

ಕೃಪೆ: ವಿಜಯ ಕರ್ನಾಟಕ

ಅಕ್ಷರಹೀನ ವಚನಕಾರರು ?

ಡಾ. ಸಿದ್ರಾಮ ಕಾರಣಿಕ

ಹನ್ನೆರಡನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸಂಭವಿಸಿತು. ಜಾತಿ-ಜಾತಿಗಳಲ್ಲಿದ್ದ ಅಂತರವನ್ನು ದೂರ ಮಾಡಿ, ಪುರೋಹಿತಶಾಹಿ ವರ್ಗದ ವಿರುದ್ಧ ಸಿಡಿದು ನಿಂತು ಮಾಡಿದ ಕ್ರಾಂತಿಯ ಹೆಜ್ಜೆ ಯಾವತ್ತಿಗೂ ಅನುಕರಣೀಯವೇ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ಅಕ್ಷರ ವಂಚಿತ ಸಮುದಾಯ ಕೂಡ ಅಕ್ಷರ ಕಲಿತು ವಚನ ರಚಿಸಿದರು ಎಂಬುದು ಒಪ್ಪತಕ್ಕ ಮಾತು ಅಲ್ಲ ; ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ. ಹೀಗೆ ಹೇಳುತ್ತಿರುವುದನ್ನು ಒಪ್ಪದ ಕೆಲ `ಬುದ್ಧಿಜೀವಿಗಳು’, `ಪಂಡಿತರು’, ವಿದ್ವಾಂಸರು’ ಅಪಸ್ವರ ಎತ್ತಿ ಹಾಡಲು ಸುರು ಮಾಡಬಹುದು ! ಈ ವಾದವು ಪರಾಂಪರಾಗತ ನಂಬಿಕೆಯೊಂದನ್ನು ಬುಡಮೇಲು ಮಾಡುವ ಹುನ್ನಾರ ಎಂದು ಹುಯಿಲೆಬ್ಬಿಸಬಹುದು ! ಆದರೆ ವಾಸ್ತವ ವಾಸ್ತವೇ ! ಇತಿಹಾಸದ ಸತ್ಯವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
ವೈದಿಕ ಧರ್ಮದಲ್ಲಿ ದಲಿತರು, ಶೂದ್ರರು ಅಕ್ಷರ ಕಲಿಯುವಿಕೆಯನ್ನು ನಿರಾಕರಿಸಲಾಗಿದೆ. ಕೇವಲ ಪಠನ ಮಾಡಿದರೆ ಸಾಕು ನಾಲಿಗೆಯನ್ನೇ ಕಿತ್ತಿ ಹಾಕುವ, ವೇದ-ಮಂತ್ರಗಳನ್ನು ಕೇಳಿದರೆ ಸಾಕು ಕಿವಿಯಲ್ಲಿ ಕಾದ ಸೀಸವನ್ನು ಸುರಿಯುವ ಪದ್ಧತಿಯನ್ನು ಪ್ರಾಚೀನ ಕಾಲದಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಈ ಪರಿಕ್ರಮಕ್ಕೆ ಹನ್ನೆರಡನೇ ಶತಮಾನವೂ ಕೂಡ ಹೊರತಾಗಿರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಬಸವಣ್ಣ ತೋರಿದ ಕ್ರಾಂತಿಕಾರಿ ನಿಲುವಿಗೆ ಸನಾತನವಾದಿಗಳು ತೋರಿದ ತೀವ್ರ ವಿರೋಧವನ್ನು ಗಮನಿಸಬೇಕು. ಹೀಗೆಲ್ಲ ಇರುವಾಗ ಒಂದು ಸೀಮಿತ ಅವಧಿಯಲ್ಲಿ ಅಕ್ಷರ ಹೀನ ದಲಿತರು, ಶೂದ್ರರು ಮತ್ತು ಮಹಿಳೆಯರು ಅಕ್ಷರ ಕಲಿತು ಪಾಂಡಿತ್ಯ ಗಳಿಸಿದರು ಎಂದರೆ ಅದೇನು ಪವಾಡವೇ ?
`ಪುರುಷರೇ ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಆ ಕಾಲದಲ್ಲಿ ನೂರಾರು ಜನ ಸ್ತ್ರೀಯರು, ಅದರಲ್ಲೂ ದಲಿತ ವರ್ಗದ ಸ್ತ್ರೀಯರು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುವುದುರ ಮೂಲಕ ಬಹುದೊಡ್ಡ ಪ್ರಸಾರ ಮಾಧ್ಯಮವೊಂದು ವರಿಷ್ಠರ ವಜ್ರಮುಷ್ಠಿಯಿಂದ ಕನಿಷ್ಠ ವರ್ಗದ ಪುರುಷರ ಕೈಗೆ, ಸ್ತ್ರೀಯರ ಕೈಗೂ ಇಳಿದು ಬಂದದ್ದು ತೀವ್ರ ಗಮನಿಸಬೇಕಾದ ಅಂಶವಾಗಿದೆ.’1 ಎನ್ನುವ ಡಾ. ಎಂ. ಎಂ. ಕಲ್ಬುರ್ಗಿಯವರ ಮಾತಿನಲ್ಲಿರುವ `ಸಾಹಿತ್ಯ ನಿರ್ಮಿತಿ’ ಬಂದದ್ದು ಕೇವಲ ಅನುಭಾವದಿಂದಾಗಿಯೇ ಹೊರತು ಅಕ್ಷರಜ್ಞಾನದಿಂದ ಅಲ್ಲವೇ ಅಲ್ಲ.
`……..ಪ್ರಾಚೀನ ಮಹಿಳಾ ಶಿಕ್ಷಣವನ್ನು ಗಮನಿಸಿದರೆ ಹೆಣ್ಣು ಸಾಂಸ್ಕøತಿಕವಾಗಿ ದಾಖಲಾಗಿರುವುದು ಗಮನಾರ್ಹ ವಸ್ತವಾಗಿದೆಯೇ ಹೊರತು ವಿದ್ಯಾವತಿಯಾಗಿ ಅಲ್ಲ’2 ಎನ್ನುವ ಡಾ. ಚೆನ್ನಕ್ಕ ಪಾವಟೆಯವರ ಮಾತುಗಳನ್ನು ದಲಿತ ಮತ್ತು ಶೂದ್ರರಿಗೂ ಅನ್ವಯಿಸಿಕೊಂಡು ಅವಲೋಕಿಸಿದಾಗ ಲೇಖನದ ಈ ವಾದಕ್ಕೆ ಸಾಕ್ಷ್ಯ ದೊರೆಯುತ್ತದೆ. ಆದರೆ ಈ ಮಟ್ಟಿಗಿನ ವಾದವನ್ನು ಬೆಳೆಸಲು ಬಹಳಷ್ಟು ಜನ ಹಿಂಜರಿಯುವುದೇ ಹೆಚ್ಚು. ಮತಾಂಧತೆಯ ಭಾರತದಲ್ಲಿ ಇದು ಸಹಜ ಕೂಡ !
`ಯಾವ ದಲಿತರು ಅಜ್ಞಾನಿಗಳಾಗಿದ್ದರೋ ಅಂಥವರು ವಚನ ಚಳುವಳಿಯ ಸಂದರ್ಭದಲ್ಲಿ ವಿಚಾರವಂತರಾದರು. ವಿಚಾರವಾದಕ್ಕೆ ವ್ಯಾಖ್ಯೆಯನ್ನು ಬರೆದರು. ಯಾರನ್ನು ಈ ವ್ಯವಸ್ಥೆಯಲ್ಲಿ ಪಶು-ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿತ್ತೋ ಅಂತಹವರೇ ಹೊಸ ಸಂಸ್ಕøತಿಯ ಹರಿಕಾರರಾದರು. ಯಾರು ಭಯದಿಂದ ತತ್ತರಿಸಿ, ಕೀಳರಿಮೆಯಿಂದ ಮುದುಡಿಕೊಂಡಿದ್ದರೋ ಅಂಥವರೇ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಝಳಪಳಿಸುವ ಖಡ್ಗಗಳಾದರು. ಇದು ವಚನ ಚಳುವಳಿಯ ಅತ್ಯಂತ ಮಹತ್ವದ ಸಾಧನೆ.’3 ಎನ್ನುವ   ಡಾ. ಬಸವರಾಜ ಸಬರದ ಅವರ ವಿವರಣೆ ಪಾರಂಪರಿಕವಾಗಿ ಪ್ರಚುರಪಡಿಸುತ್ತ ಬಂದಿರುವಂಥದ್ದೇ ಆಗಿದೆ. ಈ ಮೊದಲು ನಾವು ಕೂಡ ಈ ವಿಚಾರವನ್ನೇ ಅಧಿಕೃತವಾಗಿ ಒಪ್ಪಿಕೊಳ್ಳುತ್ತಿದ್ದೇವು. ಆದರೆ ಇಲ್ಲಿರುವ ಮಾತುಗಳನ್ನು ಸೂಕ್ಷ್ಮವಾಗಿ ನೋಡಿದಾಗ ವಚನ ಚಳುವಳಿ ಮೌಖಿಕ ಪರಂಪರೆಯ ಸಾಧನೆಯೇ ಆಗಿದೆ ಎಂಬುದು ಸಾಧಿತ ಅಂಶವಾಗಿ ಹೊರಹೊಮ್ಮುತ್ತದೆ.
ಬಸವಣ್ಣನ ನಾಯಕತ್ವದಲ್ಲಿ ಜಾಗೃತಿ ಅಭಿಯಾನ ಆರಂಭವಾದಾಗ ಕೆಲವು ದಲಿತರು, ಶೂದ್ರರು ಮತ್ತು ಮಹಿಳೆಯರು ಸಾಂಪ್ರದಾಯಿಕ ಸಮಾಜವನ್ನು ಧಿಕ್ಕರಿಸಿ, ಹೊಸ ಸಮಾಜದ ಅಸ್ತಿತ್ವಕ್ಕಾಗಿ ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಿದರಷ್ಟೇ ಅಲ್ಲ, ತಮ್ಮ ವಿಚಾರಗಳನ್ನು ದಿಟ್ಟವಾಗಿ ಪ್ರತಿಪಾದಿಸುವ ಮೂಲಕ ಇನ್ನುಳಿದ ತಮ್ಮ ಬಾಂಧವರಿಗೆ ಅರಿವನ್ನುಂಟು ಮಾಡಲು ಮುಂದಾದರು. ಆದರೆ ಅವರಿಗೆ ಅಕ್ಷರದ ಅರಿವು ಇರಲಿಲ್ಲ. ಅವರ ಹೆಸರಿನಲ್ಲಿರುವ ವಚನಗಳು ಬೇರೆ ಯಾರೋ ಲಿಪೀಕರಣ ಮಾಡಿದರ ಫಲ ಮಾತ್ರ. ಆದರೆ ಆ ವಚನಗಳಲ್ಲಿ ಇರುವ ವಿಚಾರ ಮಾತ್ರ ಆ ವಚನಕಾರರದೇ ಆಗಿದೆ. ಅಂದರೆ ವಚನಕಾರರೆಲ್ಲ ಪ್ರಾಜ್ಞರೇ ಆಗಿದ್ದರೂ ಅಕ್ಷರವನ್ನು ಬಲ್ಲವರಾಗಿರಲಿಲ್ಲ.
ಜಾನಪದ ಪರಂಪರೆಯನ್ನು ಗಮನಿಸಿದಾಗ ಈ ಪ್ರಕ್ರಿಯೆ ಬಹು ಹಿಂದಿನಿಂದಲೇ ಹೊರಹೊಮ್ಮಿ ಬಂದಿದೆ ಎನ್ನುವದು ಸ್ಪಷ್ಟವಾಗುತ್ತದೆ. ಈ ವಿಚಾರದಿಂದ ಜನಪದರು ಸೃಷ್ಟಿಸಿದ ಜಾನಪದ ಸಾಹಿತ್ಯ ಕೂಡ ಗಟ್ಟಿಕಾಳೇ ಆಗಿದೆ ಎನ್ನುವುದು ಸಾಬೀತಾಗುತ್ತದೆ. ಹೀಗಾಗಿ ಹನ್ನೆರಡನೇ ಶತಮಾನದ ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಆಯ್ದ ಕೆಲವರನ್ನು ಬಿಟ್ಟರೆ ಇನ್ನುಳಿದವರೆಲ್ಲ ಮೌಖಿಕ ಪರಂಪರೆಯವರು ಎಂಬುದು ಖಚಿತ.
ಈ ವಾದಕ್ಕೆ ಇನ್ನಷ್ಟು ನಿಖರತೆಯನ್ನು ನೀಡಲು ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ಅವರನ್ನು ಅಧ್ಯಯನ ಮಾಡಬೇಕಾಗುತ್ತದೆ. ಯಾವುದೇ ಪುರಾಣ, ಕಥೆ, ಐತಿಹ್ಯ ತೆಗೆದು ನೋಡಿದರೂ ಅವುಗಳಲ್ಲಿ ಈ ಇಬ್ಬರು ಒಂದೇ ಕಡೆ ಹೆಚ್ಚು ಕಾಲ ಸ್ಥಾಯಿಯಾಗಿ ನೆಲೆ ನಿಂತವರಲ್ಲ ಎಂಬ ಪ್ರಸ್ತಾಪ ಕಂಡು ಬರುತ್ತದೆ. ಮಾಯಾ ಮೋಹವನ್ನೇ ತಿರಸ್ಕರಿಸಿ, ವಿಚಿತ್ರ ವೇಷದಲ್ಲಿ ದೇಶ ಸಂಚಾರ ಮಾಡಿದ ಅಲ್ಲಮ ಮತ್ತು ಭವದ ಬದುಕನ್ನೇ ತಿರಸ್ಕರಿಸಿ, ಕೇಶಾಂಬರಿಯಾಗಿ ಸಂಚಾರ ಮಾಡಿದ ಅಕ್ಕಮಹಾದೇವಿ ಜಂಗಮತ್ವವನ್ನು ಅಪ್ಪಿಕೊಂಡವರು. ಇಂದು ಇಲ್ಲಿದ್ದರೆ ನಾಳೆ ಮತ್ತೆಲ್ಲೋ ! ಅಲೆದಾಟದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದ ಇವರು ಸಂದರ್ಭಕ್ಕೆ ತಕ್ಕಂತೆ ಅನುಭಾವದ ನೆಲೆಯಲ್ಲಿ ತಮ್ಮ ವಿಚಾರಗಳನ್ನು ಬಿತ್ತರಿಸುತ್ತ ಹೋಗಿದ್ದಾರೆ. ಅವೆಲ್ಲ ಅವರು ಬರೆದಿಟ್ಟ ವಿಚಾರಗಳಲ್ಲ ಅಥವಾ ಆನಂತರದಲ್ಲಿ ಅವುಗಳನ್ನು ಬರೆದುಕೊಂಡವರೂ ಅಲ್ಲ. ಬರೆದಿಡುವುದು ಸಾಧ್ಯವೂ ಇರಲಿಲ್ಲ.
ಇದಕ್ಕೆ ಪೂರಕವಾಗಿ ಒಂದು ಮೂಲಭೂತವಾಗಿ ಉದ್ಭವಿಸುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಕೇಳಲೇಬೇಕಾಗುತ್ತದೆ ; ಅಲೆದಾಟದಲ್ಲಿದ್ದ ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿ ತಾವಾಡಿದ ಮಾತುಗಳನ್ನು ಬರೆದಿಟ್ಟುಕೊಳ್ಳಲು ತಮ್ಮ ಹತ್ತಿರ ಬರೆಯುವ ಹಾಳೆ, ತಾಳೆಗರಿ, ಲೆಕ್ಕಣಿಕೆ, ದೌತಿಗಳನ್ನು ಖಾಯಮ್ಮಾಗಿ ಇಟ್ಟುಕೊಂಡಿರುತ್ತಿದ್ದರೆ ? ಅನುಭಾವದ ವಿಚಾರಗಳನ್ನು ಹೇಳಿಯಾದ ಮೇಲೆ ಅವುಗಳನ್ನು ಲಿಪಿಬದ್ಧಗೊಳಿಸುತ್ತಿದ್ದರೆ ? ಹಾಗಾದರೆ ಅವರು ತಾವು ಬರೆದ ವಚನಗಳನ್ನು ಎಲ್ಲಿ ಸಂಗ್ರಹಿಸಿ ಇಡುತ್ತಿದ್ದರು ? ತಮ್ಮ ಜೊತೆಯಲ್ಲಿಯೇ ಗಂಟು ಕಟ್ಟಿಕೊಂಡು ತಿರುಗುತ್ತಿದ್ದರೆ ? ಅರಿವೆಯ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ಇವರು ಹೀಗೆಲ್ಲ ಮಾಡಲು ಸಾಧ್ಯವೇ ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೇ ಇಲ್ಲ. ಅದೂ ಅಲ್ಲದೇ `ಅಕ್ಕನ ದಿಗಂಬರತ್ವವನ್ನು ಕುರಿತ ಚರ್ಚೆ-ಪ್ರತಿಚರ್ಚೆಯನ್ನು ಬೆಳೆಯಿಸಿದ `ಶೂನ್ಯ ಸಂಪಾದನೆ’ಗಳಲ್ಲಿ ಬಂದಿರುವ ಅಲ್ಲಮನ ಹಾಗೂ ಅಕ್ಕನ ಉಕ್ತಿಗಳು (ವಚನಗಳು) ಈ ಸಂದರ್ಭದ ನಾಟಕೀಯತೆಗಾಗಿ ನಿರ್ಮಿತಿಯಾದವುಗಳೇ ಹೊರತು ಅವು ಅಲ್ಲಮ ಹಾಗೂ ಅಕ್ಕನ `ಮೂಲ ವಚನ’ಗಳಾಗಿರಲಾರವು.’4 ಎನ್ನುವ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾತಿನಲ್ಲಿ ವಚನಗಳನ್ನು ಬರೆದಿರುವ ಬಗ್ಗೆ ಗುಮಾನಿ ಇದೆ. ಆ ಸಂದರ್ಭದಲ್ಲಷ್ಟೇ ಅಲ್ಲ ಅವರ ಹೆಸರಿನಲ್ಲಿರುವ ಯಾವ ವಚನಗಳೂ ಅವರ ಮೂಲ ವಚನಗಳೇ ಅಲ್ಲ. ಯಾಕೆಂದರೆ ಅವರು ಮೌಖಿಕ ಪರಂಪರೆಯ ಪ್ರತಿನಿಧಿಗಳು.
ಹಾಗಾದರೆ ವಚನಗಳನ್ನು ಲಿಪೀಕರಣ ಮಾಡಿದ್ದು ಯಾರು ಎಂಬ ಪ್ರಶ್ನೆ ಕೂಡ ಇಲ್ಲಿ ತಲೆ ತಿನ್ನುತ್ತದೆ. ಅದಕ್ಕೆ ಉತ್ತರವೂ ಇದೆ. ಪ್ರಾಚೀನ ಕಾಲದಲ್ಲಿ ಬರವಣಿಗೆ ಒಂದು ನಿರ್ದಿಷ್ಟ ಜಾತಿಯ ಕೆಲಸವಾಗಿತ್ತು. ಅವರು ಇತರರು (ಬರವಣಿಗೆಯ ಚೌಕಟ್ಟಿಗೆ ಸಂಬಂಧಿಸಿದವರು) ಹೇಳಿದ್ದನ್ನು ಲಿಪಿಬದ್ಧಗೊಳಿಸುತ್ತಿದ್ದರು. ಇದು ಒಂದು ವೃತ್ತಿಯೇ ಆಗಿತ್ತೆಂದರೆ ತಪ್ಪಾಗುವುದಿಲ್ಲ. ಇದರ ಜೊತೆಗೆ ಈ ಲಿಪೀಕರಣ ವ್ಯಕ್ತಿಯೊಬ್ಬನ ಆಸಕ್ತಿ ಕೂಡ ಆಗಿತ್ತು. ಬುದ್ಧನ ಕಾಲದಲ್ಲಿ ಬುದ್ಧನ ಆಚಾರ-ವಿಚಾರಗಳನ್ನು, ಬೋಧನೆಗಳನ್ನು ಬರೆದಿಡಲು `ಭಾಣಕರು’ ಎನ್ನುವವರು ಇದ್ದರು. ಹನ್ನೆರಡನೇ ಶತಮಾನದಲ್ಲಿ ಕೂಡ ಇಂಥ ಪದ್ಧತಿ ಚಾಲ್ತಿಯಲ್ಲಿರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬಾರದು.
ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆ-ಸಂವಾದಗಳನ್ನು ಬರೆದಿಡುವ ಕಾಯಕದವರೂ ಇದ್ದರು. `ಪ್ರತಿಯೊಂದು ವಚನವೂ ಆಯಾ ವಚನಕಾರನ ಇಷ್ಟ ದೈವದ ಸಾಕ್ಷಿಯಲ್ಲಿ ನುಡಿದ ಮಾತು’5 ಆಗಿರುವುದರಿಂದ ಆ ವಚನಕಾರ ತನ್ನ ಮಾತನ್ನು ಇಷ್ಟದೈವದ ಹೆಸರಿನೊಂದಿಗೆ ನುಡಿಯುತ್ತಿದ್ದರಿರಬೇಕು. ಇಲ್ಲವೆ ವಚನಕಾರನ ಇಷ್ಟದೇವದ ಹೆಸರುಗಳನ್ನು ಅರಿತ ಲಿಪಿಕಾರ ವಚನಕಾರನ ಮಾತಿನ ಕೊನೆಯಲ್ಲಿ ಸೇರಿಸಿ ಬರೆಯುವ ರೂಢಿ ಇಟ್ಟುಕೊಂಡಿರಬೇಕು. ಇದನ್ನೇ ನಾವು ಮುದ್ರಿಕೆಗಳು ಎನ್ನುವುದು. ಈ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಅಧ್ಯಯನಗಳು ನಡೆಯಬೇಕಿದೆ. ಆವಾಗ ಮೂಲ ಹಸ್ತಪ್ರತಿಯ ಲಿಪಿಕಾರ ಯಾರು ಎನ್ನುವುದು ತಿಳಿಯಲು ಸಾದ್ಯವಾಗಬಹುದು.
ಅಲ್ಲಮ ಪ್ರಭು ಮತ್ತು ಅಕ್ಕ ಮಹಾದೇವಿಯರ ವಚನಗಳಿಗೆ ಈ ಮಾತು ಸರಿ ಹೊಂದಲಾರದು. ಅವರು ಅನುಭವ ಮಂಟಪದಲ್ಲಿದ್ದಾಗ ಅವರ ನುಡಿಗಳನ್ನು ಲಿಪಿಬದ್ಧಗೊಳಿಸಿರುವ ಲಿಪಿಕಾರ ಇಷ್ಟದೈವದ ಸೇರಿಸಿದ್ದರೆ, ಅವರು ಜಂಗಮತ್ವವನ್ನು ಹೊಂದಿ ನಿರಂತರ ತಿರುಗಾಟದಲ್ಲಿ ಇದ್ದಾಗ ಅವರ ಅಂಕಿತ ಅವರ ವಚನಗಳಿಗೆ ಹೇಗೆ ಬಂತು ಎಂಬ ಪ್ರಶ್ನೆಯೂ ವಿದ್ವಾಂಸರಿಂದ ಉದ್ಭವಿಸುತ್ತದೆ.
ಇದಕ್ಕೂ ಸರಳವಾದ ಉತ್ತರವಿದೆ. ಮೇಲೆ ಹೇಳಿದಂತೆ ಇವರು ನುಡಿಯನ್ನು ಮುಗಿಸಬೇಕಾದರೆ ಇಷ್ಟದೈವದ ಹೆಸರನ್ನು ಹೇಳುತ್ತಿರಬೇಕು. ಹೀಗೆ ಅವರು ಹೇಳುತ್ತ ಹೋದಂತೆ ಆಸಕ್ತರಾಗಿರುವ ಕೆಲವು ಜನರು ಅವರ ವಿಚಾರಗಳಿಂದ ಪ್ರಭಾವಿತರಾಗಿ ಯಥಾವತ್ ಅಲ್ಲದಿದ್ದರೂ ನುಡಿಯ ಸಾರ ಮತ್ತು ಅಂಕಿತವನ್ನು ಲಿಪಿಬದ್ಧಗೊಳಿಸಿರಬೇಕು. ಈ ಕಾರಣದಿಂದಲೇ ವಚನಗಳ ಸಂಖ್ಯೆಯನ್ನು ನಿರ್ಣಯಿಸುವ ಕಾರ್ಯ ಇಂದಿಗೂ ಕಷ್ಟದಾಯಕವಾಗಿಯೇ ಇದೆ. ಯಾಕೆಂದರೆ ಭಿನ್ನ ಅಂಕಿತಗಳು ಇರುವ ಒಂದೇ ರೀತಿಯ ವಚನಗಳೂ ಇಂದು ನಮ್ಮ ನಡುವೆ ಇವೆ.ಯಾವುದು ಯಾರ ವಚನ ಎನ್ನುವುದನ್ನು ನಿರ್ಣಯಿಸುವಲ್ಲಿ ಇನ್ನೂ ಗೊಂದಲಗಳಿವೆ.  ಲಿಪಿಕಾರ ಮತ್ತು ಪ್ರತಿ ಲಿಪಿಕಾರನ ತಪ್ಪಿನಿಂದಲೇ ಇಂತಹ ಅವಘಡಗಳು ಸಂಭವಿಸಿವೆ.
ಇದಕ್ಕಿಂತ ಮುಖ್ಯವಾಗಿ ವಚನಗಳನ್ನು ಸಾಮಾನ್ಯವಾಗಿ ನುಡಿ, ಮಾತು, ಸೂಳ್ನುಡಿ ಮೊದಲಾದವುಗಳಿಂದಲೇ ಸೂಚಿಸಲಾಗಿದೆ ಹೊರತು ಬೇರೆ ರೀತಿಯಲ್ಲಿ ಹೇಳಿಲ್ಲ. `ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬುದಾಗಿ ಹೇಳಲಾಗಿದೆಯೇ ಹೊರತು `ಬರೆದರೆ…..’ ಎಂದು ಹೇಳಲಾಗಿಲ್ಲ. ಈ ವಾದ ತುಂಬ ಬಾಲಿಶ ಎನಿಸಬಹುದಾದರೂ ಕೂಡ ಅದೇ ಸತ್ಯವನ್ನು ತೋರುವ ಮಾರ್ಗವೂ ಆಗಬಲ್ಲದು ಎಂಬುದನ್ನು ಮಾತ್ರ ನಾವು ಮರೆಯುವಂತಿಲ್ಲ.
ಈ ಎಲ್ಲ ಅಂಶಗಳನ್ನು ಅರ್ಥಪೂರ್ಣವಾಗಿ ಮನನ ಮಾಡಿಕೊಂಡು ಮಥಿಸಿದಾಗ ವಚನಕಾರರೆಲ್ಲರೂ ಅಕ್ಷರ ಕಲಿತವರಾಗಿರಲಿಲ್ಲ ಎಂಬ ವಾದ ಸಾಧಿತವಾಗುತ್ತದೆ. ಹೀಗಾಗಿ ವಚನ ಸಾಹಿತ್ಯ ಮೌಖಿಕ ಪರಂಪರೆಯ ಜಾನಪದ ಸಾಹಿತ್ಯ ಎಂದು ಪರಿಗಣಿಸಲು ಯಾವುದೇ ಅಡ್ಡಿಗಳಿಲ್ಲ ಅಲ್ಲವೇ ?

ಅಡಿ ಟಿಪ್ಪಣಿಗಳು :
1. ಮಾರ್ಗ ಸಂ-1 : ಡಾ. ಎಂ.ಎಂ.ಕಲ್ಬುರ್ಗಿ : 1995 : ಪು-260
2. ಅನುಗ್ರಹ : ಡಾ. ಚೆನ್ನಕ್ಕ ಪಾವಟೆ : 1999 : ಪು-217
3. ಸಮುದಾಯ ಮತ್ತು ಸಂಸ್ಕøತಿ : ಡಾ. ಬಸವರಾಜ ಸಬರದ : 2002 : ಪು-130
4. ಸಾಹಿತ್ಯ ವಿಮರ್ಶೆ-1992 : ಸಂ-ಡಾ. ರಹಮತ್ ತರೀಕೆರೆ : 1993 : (ಅಡಿ ಟಿಪ್ಪಣಿ)      ಪು-124

ಕೋರೆಗಾವ ವಿಜಯ ದಿನ

ಬೆಂಗಳೂರು, ಜ.1: ದೇಶದಲ್ಲಿ ದಲಿತರ ಹಾಗೂ ಬಡವರ ಇತಿಹಾಸವನ್ನು ಪ್ರಜ್ಞಾಪೂರ್ವಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಅದಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಕೋರೆಗಾಂವ್ ಘಟನೆಯೇ ಉದಾಹರಣೆಯಾಗಿದೆ ಎಂದು ಬೆಂಗಳೂರು ನಗರ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. ಮಂಗಳವಾರ ನಗರದ ಪುರಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೋರೆಗಾಂವ್ ವಿಜಯ ದಿನದ ಅಂಗವಾಗಿ ಏರ್ಪಡಿಸಿದ್ದ ‘ಮಹಾರ್ ವೀರ ಯೋಧರ ಬಲಿದಾನದ ನೆನಪಿಗಾಗಿ ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋರೆಗಾಂವ್ ಯದ್ಧವು ದಲಿತ ಮಹಾರ್ ಸೈನಿಕರು ತಮ್ಮ ಸ್ವಾಭಿಮಾನದ ರಕ್ಷಣೆಗಾಗಿ ಪೇಶ್ವೆಯ ಬೃಹತ್ ಸೈನ್ಯದ ವಿರುದ್ಧ ನಡೆಸಿದ ಹೋರಾಟವಾಗಿದೆ. ಆದರೆ ಭಾರತೀಯ ಇತಿಹಾಸದಲ್ಲಿ ದಲಿತರ ಈ ದಿಗ್ವಿಜಯವನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗಿದ್ದು, ಈ ಬಗ್ಗೆ ಹೆಚ್ಚು ಮಾಹಿತಿಗಳೇ ಇಲ್ಲ ಎಂದು ರವಿಕಾಂತೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಬ್ರಿಟಿಷರು ತಮ್ಮ ದೊಡ್ಡ ರೆಜಿಮೆಂಟ್‌ನ್ನು ವಿಸರ್ಜಿಸಿ ದಲಿತ ಸೈನಿಕರಿಗೆ ಆದ್ಯತೆ ನೀಡಲು ಸಾಧ್ಯವಾದದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ರಿಂದ. ಈ ಘಟನೆ ನಮ್ಮ ಪರಂಪರೆಗೆ ಸಿಕ್ಕ ದೊಡ್ಡ ಗೌರವವಾಗಿದೆ. ನಾವು ನಮ್ಮ ಇತಿಹಾಸ ಪರಂಪರೆಗಳ ಕಡೆಗೆ ಮತ್ತೆ ತಿರುಗಿ ನೋಡಬೇಕಿದೆ. ಇತಿಹಾಸದ ಸತ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದ್ದು, ಈ ಬಗ್ಗೆ ಗಂಭೀರ ಚಿಂತನೆಯಾಗಬೇಕು. ಈ ನಿಟ್ಟಿನಲ್ಲಿ ದಲಿತಾರ ಸೈನಿಕರ ಈ ದಿಗ್ವಿಜಯ ನಮ್ಮೆಲ್ಲರ ಕಣ್ಣುಗಳನ್ನು ಇತಿಹಾಸದ ಕಡೆಗೆ ತೆರೆಸುವ ಮೂಲಕ ಸ್ವಾಭಿಮಾನದೆಡೆಗೆ ಕೊಂಡೊಯ್ಯಲಿ ಎಂದು ರವಿಕಾಂತೇಗೌಡ ಆಶಿಸಿದರು.
ನಾವೆಲ್ಲ ಯದ್ಧ ವಿರೋಧಿಗಳಾಗಿದ್ದು, ಯದ್ಧಗಳನ್ನು ಮಾಡಿ ರಕ್ತ ಸುರಿಸುವುದಕ್ಕಿಂತ, ಮಡಿದ ವೀರ ಯೋಧರ ನೆನಪಲ್ಲಿ ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯವಾಗಿದೆ. ಪೊಲೀಸ್ ಇಲಾಖೆ ಸಹ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ರಕ್ತದ ತುರ್ತು ಅಗತ್ಯವಿರವವರು ಸಂಪರ್ಕಿಸಿದರೆ, ಪೊಲೀಸ್ ಸಿಬ್ಬಂದಿ ರಕ್ತ ನೀಡಲಿದ್ದಾರೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಸಿದ್ದರಾಮ ಕಾರ್ಣಿಕ್, ಅಂಬೇಡ್ಕರ್ ನಮಗೆಲ್ಲ ಕೇವಲ ಹೆಸರಾಗಿದ್ದಾರೆಯೇ ಹೊರತು, ಉಸಿರಾಗಿಲ್ಲ. ನಮಗೆ ಅವರು ಹೆಸರು ಹಾಗೂ ಉಸಿರಾದಾಗ ಮಾತ್ರ ದಲಿತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ ಶಿವಾಜಿ, ಸಾಂಬಜಿ ಸೇರಿದಂತೆ ಹಲವು ನಾಯಕರ ಸಮಾಧಿಗಳನ್ನು ಸರಕಾರ ಅಭಿವೃದ್ಧಿಪಡಿಸಿದೆ. ಆದರೆ ಸ್ವಾಭಿಮಾನಕ್ಕಾಗಿ ಹುತಾತ್ಮರಾದ ಮಹರ್ ಯೋಧರ ಸ್ಮಾರಕ ಶಿಥಿಲಗೊಂಡಿದ್ದು, ಸರಕಾರ ನಿರ್ಲಕ್ಷಿಸಿದೆ. ಆದುದರಿಂದ ಮಹಾರಾಷ್ಟ್ರ ಸರಕಾರ ಕೋರೆಗಾಂವ್ ಸ್ಮಾರಕವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ದಲಿತರು ಎಚ್ಚೆತ್ತುಕೊಳ್ಳದ ಕಾರಣ ಕೋರೆಗಾಂವ್‌ನಂತಹ ಹಲವು ಐತಿಹಾಸಿಕ ಘಟನೆಗಳು ಮುಚ್ಚು ಹೋಗುತ್ತಿವೆ. ನಾವು ಎದ್ದು ನಿಲ್ಲದಿದ್ದರೆ ನಮ್ಮ ಅವಸಾನವಾಗಲಿದೆ. ಆದುದರಿಂದ ಕೋರೆಗಾಂವ್ ಯೋಧರ ತ್ಯಾಗ, ಬಲಿದಾನ, ಸ್ವಾಭಿಮಾನಗಳನ್ನು ಅರ್ಥಮಾಡಿಕೊಂಡು ನಾವೆಲ್ಲ ಮುಂದುವರಿ ಯಬೇಕು. ಆ ಮೂಲಕ ಅಧಿಕಾರದ ಕೇಂದ್ರ ಸ್ಥಾನಗಳ ಗದ್ದುಗೆ ಏರಬೇಕು ಎಂದು ಡಾ.ಸಿದ್ದರಾಮ ಕಾರ್ಣಿಕ್ ನುಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ರಂಗಸ್ವಾಮಿ, ಅಂಬೇಡ್ಕರ್‌ರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾನತೆಗಾಗಿ ಹೋರಾಟ ನಡೆಸೋಣ ಎಂದರು.
ಅಧ್ಯಕ್ಷತೆಯನ್ನು ಡಿಎಸ್‌ಎಸ್‌ನ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು. ಕವಿ, ಸಾಹಿತಿ ರುದ್ರಪ್ಪ ಹನಗವಾಡಿ, ಪ್ರಜಾವಿಮೋಚನಾ ಚಳವಳಿಯ ಮುಖಂಡ ಪಟಾಪಟ್ ನಾಗರಾಜ್, ಟಿಪ್ಪು ಸಂಯುಕ್ತ ರಂಗದ ಅಧ್ಯಕ್ಷ ಅಹ್ಮದ್ ಖುರೇಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೃಪೆ : ವರ್ತಮಾನ ಭಾರತಿ

`ಮಾರ್ಕ್ಸ್‌ವಾದದ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರಹ ನನ್ನದು’

 ಶ್ರೀಲಂಕಾದ ಚೆಕಾಫ್ ಜಯತಿಲಕೆ ಕಮ್ಮಲ್ಲವೀರ ಸಂದರ್ಶನ                             

                                                                   – ಡಿ.ಕೆ. ರಮೇಶ್

* ರಾಜಕೀಯ ಹೋರಾಟಗಾರರಾದ ನೀವು ಸಾಹಿತ್ಯದತ್ತ ಮುಖ ಮಾಡಿದ್ದು ಹೇಗೆ?ಚಿಕ್ಕಂದಿನಿಂದ ನನ್ನ ಒಲವು ಸಾಹಿತ್ಯದತ್ತಲೇ. ಉಳ್ಳವರು ಮತ್ತು ಉಳ್ಳದವರ ನಡುವಿನ ಘರ್ಷಣೆಯಿಂದಾಗಿ ಸಮತಾವಾದ ಶ್ರೀಲಂಕಾದಲ್ಲಿ ಬೇರು ಬಿಡುತ್ತಿತ್ತು. ಚಹಾ ತೋಟಗಳ ಕಾರ್ಮಿಕರು, ಬಂದರು ಕೆಲಸಗಾರರು ಸಂಘಟಿತರಾಗುತ್ತಿದ್ದರು. ಆಗ ದೇಶದ ತುಂಬಾ ರಷ್ಯಾ ಸಾಹಿತ್ಯದ ಅಲೆಯಿತ್ತು. ಬಡತನದ ಕಾರಣಕ್ಕೆ ಚಿಕ್ಕಂದಿನಿಂದಲೇ ಶಾಲೆ ತೊರೆದ ನಾನು ಅಂತಹ ಅನೇಕ ಸಾಹಿತ್ಯ ಕೃತಿಗಳನ್ನು ಓದತೊಡಗಿದೆ. ಹದಿನೇಳನೇ ವಯಸ್ಸಿಗೆ ಬರೆಯಲು ಆರಂಭಿಸಿದೆ. ಆ ಬಳಿಕ ನವ ಸಮ ಸಮಾಜದಲ್ಲಿ ದುಡಿದೆ. ಅದರಿಂದ ಸಾಕಷ್ಟು ಅನುಭವಗಳಾದವು. ಶ್ರೀಲಂಕಾದ ಹಳ್ಳಿ ಹಳ್ಳಿಗಳನ್ನು ತಿರುಗುವುದು, ಜನರ ನೋವು ನಲಿವುಗಳನ್ನು ಹತ್ತಿರದಿಂದ ನೋಡುವುದು ಸಾಧ್ಯವಾಯಿತು.

ಕೆಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಬಳಿಕ ಸಂಘಟನೆಯಿಂದ ದೂರ ಉಳಿದೆ. ಸಾಹಿತ್ಯದ ಕೆಲಸಗಳಲ್ಲಿ ಹೆಚ್ಚು ಮಗ್ನನಾದೆ. ದಕ್ಷಿಣ ಅಮೆರಿಕ, ಆಫ್ರಿಕಾ, ಭಾರತೀಯ ಸಾಹಿತ್ಯವನ್ನು ಓದುತ್ತಾ ಹೋದೆ. ಜತೆಗೆ ಬರವಣಿಗೆಯೂ ಸಾಗಿತು.
ಬರೆವ ಬೆರಗಿನ ಕುರಿತು ಒಂದಿಷ್ಟು…
ಕೆಲ ಕಾದಂಬರಿಗಳನ್ನು ಬರೆದಿದ್ದರೂ ಸೃಜನಶೀಲ ಬರವಣಿಗೆಯಲ್ಲಿ ಸಣ್ಣಕತೆಯೇ ನನ್ನ ನೆಚ್ಚಿನ ಪ್ರಕಾರ. ಇಡೀ ಶ್ರೀಲಂಕಾದಲ್ಲಿ ಕಾದಂಬರಿಕಾರನಿಗಿಂತಲೂ ಹೆಚ್ಚಾಗಿ ನನ್ನೊಳಗಿನ ಕತೆಗಾರನನ್ನು ಸಹೃದಯಿಗಳು ಗುರುತಿಸಿದ್ದಾರೆ. ಸೃಜನಶೀಲ ಬರವಣಿಗೆಯಲ್ಲಿ ಕತೆ ಅತ್ಯಂತ ಪ್ರಭಾವಶಾಲಿಯಾದುದು ಎಂದು ನಂಬಿದ್ದೇನೆ. ಅಲ್ಲದೆ ಇದು ಸಾಹಿತ್ಯದ ನವಿರು ಕಸರತ್ತು ಕೂಡ. ಒಂದೊಳ್ಳೆಯ ಕತೆ ಒಳ್ಳೆಯ ಕಾವ್ಯದಂತೆಯೇ ಮಧುರ. ಕತೆಯನ್ನು ಓದುವುದರಿಂದಲೇ ಸಾಹಿತ್ಯದ ಒಂದು ಅಭ್ಯಾಸ ಆರಂಭವಾಗುತ್ತದೆ. ಕತೆಯ ಪದ ಅಥವಾ ವಾಕ್ಯಗಳನ್ನು ಓದುವುದಕ್ಕಿಂತ ಅವುಗಳ ಧ್ವನಿಯನ್ನು ಗುರುತಿಸುವುದು ಮುಖ್ಯ.

ಇಂಗ್ಲಿಷ್‌ನಲ್ಲಿ eading between the lines ಎನ್ನುತ್ತಾರಲ್ಲಾ ಹಾಗೆ. ಅಲ್ಲಿನ ಉಪಮೆ, ಪ್ರತೀಕ, ಕಾಣ್ಕೆಗಳನ್ನು ಸಂದರ್ಭಕ್ಕೆ ಸರಿಯಾಗಿ ಗ್ರಹಿಸಿದಾಗಲೇ ಒಂದೊಳ್ಳೆ ರಸಾನುಭವ ಸಾಧ್ಯ. ಕತೆ ಬರೆಯುವಾಗ ಶೈಲಿ, ನಿರೂಪಣೆ ಕೂಡ ಅಷ್ಟೇ ಮುಖ್ಯ.

ಹೀಗಾಗಿ ನನ್ನ ಬರವಣಿಗೆಯಲ್ಲಿ ಬರೆವ ಶೈಲಿ, ಬಳಸುವ ಭಾಷೆ ಹಾಗೂ ನಿರೂಪಣೆಯ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ. ಇದು ಕೂಡ ಕತೆಯ ವಸ್ತುವಿನಷ್ಟೇ ಮಹತ್ವದ್ದು. ಸಾಂದರ್ಭಿಕ ಅರ್ಥಗಳು, ಪದಗಳ ಸಾಂಕೇತಿಕ ಪ್ರಸ್ತುತತೆ ಹಾಗೂ ಭಾಷೆಯ ಲಯವನ್ನು ವಿಶೇಷವಾಗಿ ಗಮನಿಸುತ್ತೇನೆ. ಏಕೆಂದರೆ ಎಲ್ಲಾ ಕತೆಗಳನ್ನು ಒಂದೇ ಶೈಲಿ ಹಾಗೂ ಲಯದಲ್ಲಿ ಬರೆಯಲು ಸಾಧ್ಯವಿಲ್ಲ. ಒಂದು ಭಾಷೆಗೆ ಇರುವ ಲಯವನ್ನು ಕಂಡುಕೊಳ್ಳುವುದು ಲೇಖಕನಿಗಿರಬೇಕಾದ ಮುಖ್ಯ ಗುಣ. ಜತೆಗೆ ಓದುಗರೂ ಬರೆದದ್ದನ್ನು ಅರ್ಥ ಮಾಡಿಕೊಳ್ಳುವಷ್ಟು ಮುಂದುವರಿದಿರಬೇಕು. ಅವರ ಅಭಿರುಚಿಯೂ ಬರಹಗಾರನಷ್ಟೇ ಎತ್ತರದಲ್ಲಿರಬೇಕು. ಅನುಭವ ಹಾಗೂ ಭಾಷೆಯ ಸೂಕ್ಷ್ಮತೆಯನ್ನು ಗಮನಿಸುವ ಕೆಲಸ ಅವರಿಂದಾಗಬೇಕು.
* ನಿಮ್ಮ ಕತೆಗಳ ಒಟ್ಟು ದನಿ?
ಬಹುಶಃ ಕಪ್ಪು ಬಿಳುಪು ರೀತಿಯಲ್ಲಿ ಇದಮ್ಮಿತ್ತಂ ಎಂದು ನನ್ನ ಕತೆಗಳ ಆಶಯವನ್ನು ಹೇಳಿಕೊಳ್ಳಲಾಗದು. ಕಾಲ- ದೇಶಗಳಲ್ಲಿ ನಡೆದ ಸಾಹಿತ್ಯ ಕೃಷಿ ಮನುಷ್ಯ ಪರವಾಗಿರುವಂತೆಯೇ ನನ್ನ ಕತೆಗಳು ಕೂಡ ಅದರತ್ತಲೇ ತುಡಿಯುತ್ತವೆ. ಮಾರ್ಕ್ಸ್‌ವಾದದ ಹಿನ್ನೆಲೆಯಿಂದ ಬಂದವನಾದರೂ ಅದರ ಯಾಂತ್ರಿಕತೆಯಿಂದ ಬಿಡಿಸಿಕೊಂಡ ಬರವಣಿಗೆ ನನ್ನದಾಯಿತು ಎಂದು ಹೇಳಬಹುದೇನೋ.
*  ಜನಾಂಗೀಯ ಕಲಹದ ಬಳಿಕ ಶ್ರೀಲಂಕಾದ ತಮಿಳು ಹಾಗೂ ಸಿಂಹಳ ಸಾಹಿತ್ಯದಲ್ಲಿ ಎಂಥ ಬದಲಾವಣೆಗಳಾದವು?
ತಮಿಳು ಸಾಹಿತ್ಯ ನನಗೆ ಅಷ್ಟು ಆಳವಾಗಿ ಗೊತ್ತಿಲ್ಲದ ಕಾರಣ ಅದರ ಕುರಿತು ಪ್ರಸ್ತಾಪಿಸುವುದಿಲ್ಲ. ಆದರೆ ಸಿಂಹಳ ಕವಿತೆ, ಸಣ್ಣಕತೆ ಹಾಗೂ ಕಾದಂಬರಿ ಪ್ರಕಾರಗಳ ಕುರಿತು ಪ್ರತಿಕ್ರಿಯಿಸಬಲ್ಲೆ. ಕದನದ ಸಮಯದಲ್ಲಿ ಕೂಡ ಬಹುತೇಕ ಸಿಂಹಳ ಬರಹಗಾರರು ಜನಾಂಗೀಯ ಕಲಹ ಕುರಿತು ಸೂಕ್ಷ್ಮಜ್ಞರಾಗಿರಲಿಲ್ಲ. ಸಮರೋತ್ತರ ಸಂದರ್ಭವಾದ ಈ ದಿನಗಳಲ್ಲಿಯೂ ನನಗೆ ಅಂಥ ಮಹತ್ವದ ಬದಲಾವಣೆಗಳು ಕಂಡು ಬರುತ್ತಿಲ್ಲ. ಹಾಗೆಂದು ಅಂತಹ ಸೂಕ್ಷ್ಮತೆಯಿಂದ ಎಲ್ಲರೂ ಹೊರತಾಗಿದ್ದಾರೆ ಎಂದರ್ಥವಲ್ಲ. ಹಾಗೆ ಸೃಜನಾತ್ಮಕವಾಗಿ ಸ್ಪಂದಿಸಿದ ಕೆಲವರ ಕೃತಿಗಳು ತುಂಬಾ ಶಕ್ತಿಶಾಲಿಯಾಗಿಯೇ ಇವೆ.

ಸಿಂಹಳ ಸಿನಿಮಾಗಳಲ್ಲಿ ಮಾತ್ರ ಅಲ್ಪಮಟ್ಟಿನ ಬದಲಾವಣೆಗಳುಂಟಾದವು. ಯುದ್ಧದ ಸಂದರ್ಭಗಳಲ್ಲಿ ಕದನವನ್ನು ವಿಮರ್ಶಿಸಿ ಕೆಲವು ಚಿತ್ರಗಳು ತಯಾರಾದವು. ಆ ಚಿತ್ರಗಳ ಕೆಲವು ಕಲಾವಿದರನ್ನು ಬೆದರಿಸಲಾಯಿತು, ಅವಮಾನಿಸಲಾಯಿತು. ಆದರೆ ಅಂತಹ ಕಲಾವಿದರು ಅಂತರರಾಷ್ಟ್ರೀಯ ನೆಲೆಯಲ್ಲಿ ಗುರುತಿಸಿಕೊಂಡರು. ವಿಚಿತ್ರವೆಂದರೆ ಯುದ್ಧ ಮುಗಿವ ಹೊತ್ತಿಗೆ ಇಡೀ ಸಂಘರ್ಷವನ್ನು ವೀರಗಾಥೆಯಂತೆ, ದೇಶಭಕ್ತಿಯ ಸಂಕೇತವೆಂಬಂತೆ ಬಿಂಬಿಸಲಾಯಿತು. ಕಲಾತ್ಮಕ ಅಂಶಗಳಿಲ್ಲದಿದ್ದರೂ ಕೂಡ ಅಂತಹ ಚಿತ್ರಗಳಿಗೆ ಸರ್ಕಾರದ ಮನ್ನಣೆ ದೊರೆಯಿತು. ಈಗ ಜನಾಂಗೀಯವಾದಿ ಚಲನಚಿತ್ರಗಳತ್ತಲೇ ಹೆಚ್ಚು ಒಲವು ಇದ್ದಂತಿದೆ.
ತಮಿಳರ ಬದುಕು ನಿಮ್ಮನ್ನು ಕಾಡಲು ಕಾರಣ?
ತೀರಾ ಹತ್ತಿರದಿಂದ ತಮಿಳರ ಬದುಕನ್ನು ನೋಡಿದ್ದೆ. ಸಾಮಾನ್ಯ ಸಿಂಹಳ ವ್ಯಕ್ತಿಯ ನೋವುಗಳಿಗೂ ಅವರ ನೋವುಗಳಿಗೂ ಅಂಥ ವ್ಯತ್ಯಾಸ ಇರಲಿಲ್ಲ. ಎಲ್‌ಟಿಟಿಇಯ ತೀವ್ರಗಾಮಿ ಹೋರಾಟ ತಮಿಳರ ನೋವುಗಳಿಗೆ ನಿಜವಾಗಿ ಸ್ಪಂದಿಸಲಿದೆಯೇ ಎಂಬ ಅನುಮಾನ ನನ್ನೊಳಗೂ ಇತ್ತು. ಶ್ರೀಲಂಕಾಕ್ಕೆ ಸ್ವಾತಂತ್ರ್ಯ ದೊರೆತ ನಂತರ ಎಲ್ಲಾ ಸರ್ಕಾರಗಳೂ ತಮಿಳರನ್ನು ಮೂಲೆಗುಂಪು ಮಾಡಿದವು. ವೈವಿಧ್ಯತೆಗೆ ಅವಕಾಶ ನೀಡದೆ ಸಿಂಹಳೀಯರಿಗೆ ಮಾತ್ರ ಮಣೆ ಹಾಕಲಾಯಿತು. ತಮಿಳರ ದಮನಕ್ಕೆ ಇದೂ ಒಂದು ಕಾರಣ. ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಭಾಗಗಳ ಬದುಕು ದೊಡ್ಡಮಟ್ಟದಲ್ಲಿ ಅನಾವರಣಗೊಂಡಿರುವುದು ನನ್ನ ಕಾದಂಬರಿ `ಸಿಯೋತ್ ತತು ಸಿಂಧ`ದಲ್ಲಿ.
*  ನೀವು ಕಂಡುಕೊಂಡಂತೆ ಎರಡೂ ದೇಶಗಳ ನಡುವೆ ಇರುವ ಸಾರಸ್ವತ ಲೋಕದ ವ್ಯತ್ಯಾಸ?
ನಮ್ಮ ದೇಶದಲ್ಲಿ ಕೆಲವು ಪ್ರಗತಿಪರ ಸಾಹಿತ್ಯಕ ಹೋರಾಟಗಳು ನಡೆದಿವೆ. ಆದರೆ ಕನ್ನಡದಲ್ಲಿ ಅಥವಾ ಭಾರತದ ಕೆಲ ಭಾಷೆಗಳಲ್ಲಿ ಆಗಿರುವಂತೆ ನವೋದಯ, ಪ್ರಗತಿಶೀಲ, ನವ್ಯ, ದಲಿತ- ಬಂಡಾಯ ಹೀಗೆ ವಿವಿಧ ಕಾಲಘಟ್ಟಗಳ ಚಳವಳಿ ಸಾಧ್ಯವಾಗಿಲ್ಲ. ಈ ಚಳವಳಿಗಳ ಆಶಯ ನಮ್ಮ ಸಾಹಿತ್ಯದಲ್ಲಿ ಸಮಗ್ರವಾಗಿ ಅಡಕವಾಗಿವೆಯೇ ಹೊರತು ಒಡೆದು ಕಾಣುವ ಪ್ರತ್ಯೇಕತೆ ತೋರದು.

ಮೇಲಾಗಿ ಭಾರತದ ಜಾತಿ ಪದ್ದತಿ ಹಾಗೂ ದೊಡ್ಡ ಧಾರ್ಮಿಕ ಅಂತರ ನಮ್ಮಲ್ಲಿಲ್ಲ. ಬಹುತೇಕ ಹೋರಾಟಗಳು ನಮ್ಮ ದೇಶದಲ್ಲಿ ಆರ್ಥಿಕ ಅಸಮಾನತೆಯ ವಿರುದ್ಧ ನಡೆದಿವೆ. ಹೀಗಾಗಿ ಭಾರತದ ಯು.ಆರ್. ಅನಂತಮೂರ್ತಿ, ರವೀಂದ್ರನಾಥ ಟ್ಯಾಗೋರ್, ಕಮಲಾದಾಸ್, ಸಾದತ್ ಹಸನ್ ಮಾಂಟೊ, ಅರುಂಧತಿ ರಾಯ್, ಸಲ್ಮಾನ್ ರಶ್ದಿ ಮುಂತಾದವರು ಹೆಚ್ಚು ವೈವಿಧ್ಯಮಯವಾಗಿ ತೋರುತ್ತಾರೆ.

ಇನ್ನು ರಚನೆಯ ವಿಚಾರಕ್ಕೆ ಬಂದರೆ ನಮ್ಮಲ್ಲಿ ಕಾವ್ಯ ಬೆಳೆದಷ್ಟು ಇತರ ಸಾಹಿತ್ಯ ಪ್ರಕಾರಗಳು ಬೆಳೆದಿಲ್ಲ. ಕತೆ, ಕಾದಂಬರಿಗಳಂತಹ ಗದ್ಯ ಪ್ರಕಾರದಲ್ಲಿ ಸಾಕಷ್ಟು ಕೃಷಿ ನಡೆಯಬೇಕಿದೆ. ವಿವಿಧ ಭಾಷೆಗಳ ಅನುವಾದಿತ ಸಾಹಿತ್ಯ ಶ್ರೀಲಂಕಾದಲ್ಲಿ ವಿಫುಲವಾಗಿ ದೊರೆಯುತ್ತದೆ. ಆದರೆ ಸಿಂಹಳ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವಂತಹ ಅನುವಾದಕರ ಕೊರತೆ ಇದೆ. ಬಹುತೇಕ ದೇಶಗಳಲ್ಲಿ ನಡೆಯುವಂತೆ ಸಾಹಿತ್ಯದ ಬೆಳವಣಿಗೆ ಕುರಿತು ನಮ್ಮ ಸರ್ಕಾರದ ಗಮನ ಅಷ್ಟಕ್ಕಷ್ಟೇ.

ಕೃಪೆ : ಪ್ರಜಾವಾಣಿ  

ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

ಕನ್ನಡ ಶಾಸ್ತ್ರಕ್ಕೆ ಯಾರು ಎಂದರೆ ನಾವು ಬಹಳ ಹಿಂದೆ ಶಂಕರಭಟ್ಟರು ಎನ್ನುತ್ತಿದ್ದೇವು ! ಆದರೆ ಇಂದು ಶಂಕರ ಭಟ್ ಅವರು ಬರೆಯುತ್ತಿರುವುದನ್ನು ಕಂಡಾಗ ಯಾಕೋ ನಮಗೇ ಮುಜುಗರು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳೇ ಹುಟ್ಟುವುದಿಲ್ಲ ! ಹಾಗೆ ಪ್ರಶ್ನೆಗಳು ಹುಟ್ಟದಿದ್ದರೆ ನಾವು ಮನುಷ್ಯರು ಅನ್ನಿಸಿಕೊಳ್ಳುವುದಕ್ಕೆ, ನಮಗೂ ಒಂದು ವ್ಯಕ್ತಿತ್ವ ಇದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ಉಜಿರೆಯಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಸೇರಿದ ನಮ್ಮಲ್ಲಿ ಒಂದು ಪ್ರಶ್ನೆ ಹೀಗಿತ್ತು. ಶಂಕರ ಭಟ್ಟರು ಬರೆಯುತ್ತಾರೆ. ಅವರಿಗೆ ಕನ್ನಡದ ವ್ಯಾಕರಣ ಮತ್ತು ಶಾಸ್ತ್ರಗಳ ಪರಿಚಯವಿದೆ. ಆದರೂ ಅಸಂಬದ್ಧವಾಗಿ ಬರೆಯತ್ತಾರೆ ಮತ್ತು ಅದಕ್ಕೆ ಉತ್ತರವನ್ನು ಕೇಳಿದರೆ ಅವರು ಏನನ್ನೂ ಹೇಳುವುದಿಲ್ಲ ! ಅಂದರೆ ಅವರು ಬರೆದ ಪುಸ್ತಕದ ಬಗ್ಗೆಯೇ ವಿಮರ್ಶೆ ನಡೆದಾಗಲೂ, ಪ್ರೀತಿಯಿಂದ ಆ ‘ಕಾರ್ಯ’ಕ್ಕೆ ಅವರನ್ನು ಆಹ್ವಾನಿಸಿದರೂ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ !
ರವಿವಾರದ ವಿಜಯ ಕರ್ನಾಟಕದಲ್ಲಿ (9-9-2012) ಶಂಕರಭಟ್ಟ ಅವರು ಒಂದು ಲೇಖನ ಬರೆದಿದ್ದಾರೆ. ಅದರ ಶೀರ್ಷಿಕೆ ‘ಓದುವ ಹಾಗೆಯೇ ಬರೆಯುವುದು’ ಎಂದಿದೆ. ಅಂದರೆ ಸಂಸ್ಕøತದಿಂದ ಎರವಲು ಪಡೆದ ಪದಗಳನ್ನು ನಾವು ಯಾವ ರೀತಿ ಉಚ್ಚರಿಸುತ್ತೇವೆಯೋ ಅದೇ ರೀತಿಯಲ್ಲಿ ಬರೆಯಬೇಕೆಂದು ಸೂಚಿಸುತ್ತಾರೆ ! ಇದು ಆಂಡಯ್ಯನ ವಾದ ಎಂದರೂ ನಡೆಯುತ್ತದೆ ! ಶಂಕರಭಟ್ಟರು ಹಿರಿಯರು, ವಿದ್ವಾಂಸರು ಎನ್ನುವುದು ಬೇರೆ ಮಾತು. ಆದರೆ ಅದನ್ನೇ ಮುಂದು ಮಾಡಿಕೊಂಡು ಕನ್ನಡಿಗರನ್ನು ಹಾದಿ ತಪ್ಪಿಸುವ ನಡೆಯನ್ನು ಅವರು ಮುಂದುವರಿಸಿರುವುದು ಮಾತ್ರ ಸಮಂಜಸವೆಂದು ತೋರುತ್ತಿಲ್ಲ !
ಶಂಕರ ಭಟ್ಟರು ನಮ್ಮನ್ನು ಒಂದು ರೀತಿಯಲ್ಲಿ ಕನ್‍ಫ್ಯೂಜ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ ನನಗೆ ! ಜನಸಾಮಾನ್ಯರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಳ್ಳದ ಮತ್ತು ಆ ಬಗ್ಗೆ ಅನುಭವ ಇಲ್ಲದಿರುವ ಅವರು ತಮ್ಮ ಗೂಡಿನೊಳಗೆ ಕುಳಿತುಕೊಂಡು ತಮಗೆ ತೋಚಿದಂತೆ ವಿಚಾರಗಳನ್ನು ಹರಿಯಬಿಡುತ್ತಿರುವುದು ಸರ್ವಥಾ ಸರಿಯಲ್ಲ. ಯಾಕೆಂದರೆ ಅವರು ಉಪಯೋಗಿಸುವ ಕನ್ನಡ ಪದಗಳೇ ಒಮ್ಮೊಮ್ಮೆ ಕನ್ನಡಿಗರಿಗೆ ಅರ್ಥವಾಗಲಾರವು ! ‘ತಿಳಿವಿಗರು’, ‘ಹೊರಪಡಿಕೆಗಳು’, ‘ಎತ್ತುಗೆ’, ‘ಬರಿಗೆ’  ಮೊದಲಾದ ಪದಗಳು ಜನಸಾಮಾನ್ಯರಿಗೆ ಹೇಗೆ ಅರ್ಥವಾಗುತ್ತವೆ ? ನಿಮ್ಮ ಬುದ್ಧಿಶಕ್ತಿ ಅಪಾರವಾಗಿರಬಹುದು. ಆದರೆ ಅದನ್ನು ದಯವಿಟ್ಟು ಜನಸಾಮಾನ್ಯರ ಮೇಲೆ ಹೇರಬೇಡಿ !
ಇಡೀ ಲೇಖನವನ್ನು ಕಂಡಾಗ ಸಂಸ್ಕøತ ಭಾಷೆಯ ಅಕ್ಷರಗಳನ್ನು ಬಳಕೆ ಮಾಡುವುದರ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಆದರೆ ತಾವೇ ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಬಳಸುತ್ತಾರೆ ! ‘ಸುಲಭ>ಸುಲಬ, ಖುಷಿ>ಕುಶಿ, ಪೂಜ್ಯಭಾ>ಪೂಜ್ಯಬಾವ ಮೊದಲಾಗಿ ಬಳಸಿದ್ದಾರೆ. ಇದು ಕನ್ನಡ ಪ್ರೇಮವೇ ? ‘… ಮಾರ್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು’ ಎನ್ನುವ ಅವರಿಗೆ ತಾವು ಮಾಡುತ್ತಿರುವುದೂ ತೊಡಕಿನ ಸೃಷ್ಟಿಯೇ ಅಂತ ಯಾಕೆ ಅನ್ನಿಸುತ್ತಿಲ್ಲ ? ಮಹಾಪ್ರಾಣವನ್ನು ತಿರಸ್ಕರಿಸುವ ಮೂಲಕ ಬಳಕೆಯಲ್ಲಿರುವ ಕನ್ನಡ ಪದಗಳ ಅರ್ಥವ್ಯತ್ಯಾಸವಾಗುವುದಿಲ್ಲವೆ ? ನಾನು ಬದಲಾವಣೆಯ ಗಾಳಿ ಬೀಸುತ್ತಿದ್ದೇನೆ ಎಂದು ಅವರು ತಿಳಿದುಕೊಂಡಿದ್ದರೆ ಯಾಕೋ ಸಮಂಜಸವೆನಿಸಲಾರದು ! ಆಡುಭಾಷೆಯನ್ನು ಹದಗೆಡಿಸಿ ಕ್ಲಿಷ್ಟ ಮಾಡುವ ಪರಿ ಒಂದು ರೀತಿಯಲ್ಲಿ ನಗುವನ್ನೂ ತರುತ್ತದೆ !
ಶಂಕರ ಭಟ್ಟರ ಲೇಖನವಷ್ಟೇ ಅಲ್ಲ. ಸಿದ್ಧರಾಜು ಬೋರೇಗೌಡ ಅವರ ಲೇಖನ ‘ಬಾರತದವರು ಅಮೆರಿಕಾದವರಿಂದ ಆಳಗ್ಗಳೆ ಮತ್ತು ಆಳೀಳಿಗೆಯ ಪಾಟ’ (ವಿಜಯ ಕರ್ನಾಟಕ : 19-09-2012) ಕೂಡ ಇದೇ ರೀತಿಯ ಗೊಂದಲಗಳನ್ನು ಹುಟ್ಟು ಹಾಕುವಂತಿದೆ. ಯಾಕೆಂದರೆ ಲೇಖಕರು ಕನ್ನಡ ಲಿಪಿ ಸುದಾರಣೆಯಲ್ಲಿ ನುಡಿಯರಿಗೆ ಶಂಕರ ಬಟ್ಟರ ಶಾಲೆಗೆ ಸೇರಿದವರು. ಅಮೆರಿಕಾದ ಸ್ಕ್ರಿಪ್ಟ್ಸ್ ಅರಕೆ ಸಂಸ್ತೆಯಲ್ಲಿ ಬುಡಕಣಗಳ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ ! ಇವರು ಬಳಸುವ ಪದಗಳು ಕೂಡ ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ಇಲ್ಲ. ಶೀರ್ಷಿಕೆಯಲ್ಲಿಯೇ ಇರುವ ಆಳಗ್ಗಳೆ, ಆಳೀಳಿಗೆ ಹಾಗೂ ಲೇಖನದಲ್ಲಿ ಬಂದಿರುವ ಒಪ್ಪುಕೂಟ, ಮೇಟಿಯಾಳ್ಕೆ, ಆಳ್ಕೆ, ಈಳಿಗೆ, ಬೇರ್ಮೆ ಹಲತನ, ಹೆಗ್ಗಳ, ಮಿಂಬಲೆ ಮೊದಲಾದ ಪದಗಳನ್ನು ಒತ್ತಾಯಪೂರ್ವಕವಾಗಿಯೋ ಇಲ್ಲವೆ ಹಾಗೆ ಬರೆಯಲೇ ಬೇಕು ಎಂಬ ಹಠದಿಂದಲೋ ಉಪಯೋಗಿಸಿದ್ದಾರೆ !
ಸಿದ್ಧರಾಜು ಅವರೇ ಲೇಖನದಲ್ಲಿ ಒಂದು ಕಡೆ ‘ಹೆಚ್ಚೆಣಿಕೆಯವರ ತೀಟೆಗಾಗಿ ಕೊರೆಯೆಣಿಕೆಯವರನ್ನು ತೊಂದರೆಗೀಡು ಮಾಡುವುದು ಆಳಾಳ್ಕೆಯಾಗದು’ ಎನ್ನುತ್ತಾರೆ. ಹಾಗಾದರೆ ಶಂಕರಭಟ್ಟರು ಮತ್ತು ಅವರ ಅನುಯಾಯಿಗಳಾದ ಸಿದ್ಧರಾಜು ಅವರು ಮಾಡುತ್ತಿರುವುದದರೂ ಏನು ? ಕನ್ನಡದ ಬಗ್ಗೆ ತುಂಬ ಕಾಳಜಿ ಇದೆ. ಅದು ಉಳಿಯಬೇಕು, ಬೆಳೆಯಬೇಕು ಎಂಬುದು ಎಲ್ಲ ಕನ್ನಡಿಗರ ಆಶಯವಾಗಿರುತ್ತದೆ. ಆದರೆ ಅದನ್ನು ಹೀಗೇ ಇರಬೇಕು ಎಂದು ನಿರ್ದೇಶನ ಮಾಡಿ ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ ! ಶಂಕರ ಭಟ್ಟರಂತೂ ‘ಅಕ್ಷರ’ವನ್ನು ‘ಬರಿಗೆ’ ಎಂದೇ ಕರೆಯಲು ಆರಂಭಿಸಿದ್ದಾರೆ ! ಭಾಷೆಯೊಂದರಲ್ಲಿ ಕಡಿಮೆ ಅಕ್ಷರಗಳಿದ್ದಷ್ಟೂ ಆ ಭಾಷೆ ಬೆಳವಣಿಗೆ ಹೊಂದುತ್ತದೆ ಎಂಬ ವಿಚಾರವನ್ನು (ವಿ.ಕ. 21-10-2012) ಪ್ರತಿಪಾದಿಸತೊಡಗಿದ್ದಾರೆ. ಇಲ್ಲಿ ಹೊಸದೇನೂ ಇಲ್ಲ. ಕನ್ನಡದ್ದೇ ಎನ್ನುವ ಪದಗಳನ್ನು ಬಿಟ್ಟರೆ ವಿಚಾರವೆಲ್ಲ ಹಳೆಯದೇ. ಕೇಶಿರಾಜ ಕೂಡ ಅಕ್ಷರಗಳನ್ನು ಕಡಿಮೆ ಮಾಡಲು ಹೆಣಗಾಡಿದ್ದಾನೆ ; ಭಾಷಾಶಾಸ್ತ್ರಜ್ಞರೂ ಈ ಬಗ್ಗೆ ಈಗಾಗಲೇ ಚರ್ಚೆ ನಡೆಯಿಸಿದ್ದಾರೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅಕ್ಷರಗಳು ರೂಪುಗೊಂಡಿರುತ್ತವೆ. ಈ ವಿಚಾರವನ್ನು ಶಂಕರ ಭಟ್ಟರು ಯಾಕೆ ಮರೆತಿದ್ದಾರೋ ತಿಳಿಯದು. ಸಮಸ್ಕøತದಲ್ಲಿ ಕಡಿಮೆ ಅಕ್ಷರಗಳಿರುವುದನ್ನು ಹೇಳಿರುವ ಅವರು ಅದೇ ದೇವನಾಗರಿ ಲಿಪಿಯನ್ನು ಬಳಸಿಕೊಂಡು ಬೆಳೆದು ಬಂದಿರುವ ಹಿಂದಿ, ಮರಾಠಿ ಬಗ್ಗೆ ಮಾತನಾಡುವುದಿಲ್ಲ. ಮರಾಠಿ ಅಥವಾ ಹಿಂದಿಯಲ್ಲಿ ‘ಇ, ಈ, ಉ, ಊ’ ಇವೆಯಾದರೂ ‘ಎ, ಒ’ಗಳು ಇಲ್ಲ. ಹೀಗಾಗಿಯೇ ಮರಾಠಿಗರು ಮಾತನಾಡುವಾಗ ‘ಹೆಡ್ಮಾಸ್ಟರ್’ ಎನ್ನುವುದನ್ನು ‘ಹೇಡಮಾಸ್ಟರ್’ ಎಂದೇ ಉಚ್ಛರಿಸುತ್ತಾರೆ. ಹಾಗೆಯೇ ‘ಒದರುವ’ ಎಂಬುದನ್ನು ‘ಓದರುವ’ ಎಂದೇ ಮಾತಿನಲ್ಲೂ ಬರವಣಿಗೆಯಲ್ಲೂ ಬಳಸುತ್ತಾರೆ. ಹೀಗಾದಾಗ ಆಯಾ ಪ್ರದೇಶದ ಭಾಷೆಗಳ ಮಿತಿಯನ್ನು ತಿಳಿದುಕೊಂಡಿರಬೇಕು. ಕೇವಲ ಆಡುಮಾತುಗಳನ್ನೇ ಇಟ್ಟುಕೊಂಡು ವಾದಕ್ಕೆ ಇಳಿಯುವ ಶಂಕರ ಭಟ್ಟರು ಇಂಥ ಸೂಕ್ಷ್ಮಗಳನ್ನೂ ಅರಿತಿರಬೇಕಾಗುತ್ತದೆ. ಅಕ್ಷರಗಳು ಹೆಚ್ಚೋ, ಕಡಿಮೆಯೋ ಎಂಬುದು ಭಾಷಾ ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ ಎಂಬುದನ್ನು ಮೊದಲು ಅವರು ಗಮನಿಸಬೇಕು. ಚೀನಿ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಂತ ಚೀನಿ ಭಾಷೆ ನಶಿಸಿದೆಯೆ ? ಇಲ್ಲ. ಇವತ್ತು ಆ ದೇಶದ ಪ್ರತಿಯೊಂದು ಉತ್ಪನ್ನಗಳ ಮೇಲೆ ಆ ಭಾಷೆಯ ಬಳಕೆ ಇದೆ. ಕನ್ನಡಕ್ಕೆ ಕುತ್ತು ಇರುವುದು ಇಂಥಲ್ಲಿಯೇ ! ವಿನಃ ಶಂಕರ ಭಟ್ಟರು ಅಥವಾ ಅವರ ಅನುಯಾಯಿಗಳು ಹೇಳುವ ಕಾರಣಗಳಿಂದಲ್ಲ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ. ಒಂದು ನಾಡಿನ ಭಾಷೆಯೊಂದು ಅನ್ನ ಕೊಡುವ ತಾಕತ್ತು ಹೊಂದಿರಬೇಕು ; ಆ ನಾಡಿನಲ್ಲಿ ಉತ್ಪನ್ನವಾಗುವ ಎಲ್ಲ ವಸ್ತುಗಳ ಮೇಲೆ ಅಲ್ಲಿಯ ಭಾಷೆಯೇ ಪ್ರಮುಖವಾಗಿ ಕಾಣಿಸಬೇಕು. ಅಂದಾಗ ಮಾತ್ರ ಆ ನಾಡಿನ ಭಾಷೆ ಉಳಿಯುತ್ತದೆ ; ಬೆಳೆಯುತ್ತದೆ. ಒಣ ವೇದಾಂತಕ್ಕಿಂತ ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ.
ಇದೆಲ್ಲ ಬಿಟ್ಟು ಅಕ್ಷರಗಳನ್ನು ಕಡಿಮೆ ಮಾಡಬೇಕು. ಪದಗಳನ್ನು ‘ಹೀಗೆ’ ಪರಿವರ್ತಿಸಿಕೊಳ್ಳಬೇಕು ಎಂಬುದೆಲ್ಲ ಪ್ರಚಾರಕ್ಕಾಗಿ ಮಾಡುವ ಒಂದು ಗಿಮಿಕ್ಕಾಗಿ ತೋರುತ್ತದೆ ! ಇದರಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ‘ಎಲ್ಲರ ಕನ್ನಡ’ ಎಂದು ಹೇಳುತ್ತಲೇ ಕನ್ನಡವನ್ನು ತೀರ ಸಂಕೀರ್ಣಗೊಳಿಸಿ ಹಾಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಅಂಥವರಿಗೆ ವೇದಿಕೆ ಒದಗಿಸುವ ವೇದಿಕೆಗಳೂ ಕೂಡ ನಿಷ್ಪಕ್ಷಪಾತದಿಂದ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕು.
ಹೀಗೇ ಇರಬೇಕು. ಹೀಗೆಯೇ ಬರಬೇಕು ; ಬರೆಯಬೇಕು ಎಂಬ ವಿಚಾರಗಳನ್ನೇ ಇಟ್ಟುಕೊಂಡಿದ್ದ ಆಂಡಯ್ಯ ಕೂಡ ಕಬ್ಬಿಗರ ಕಾವ ಬರೆದ. ಆದರೆ ಅದರ ಪ್ರಭಾವ ಏನಾಯಿತು ? ಏನಾದರೂ ಬದಲಾವಣೆ ಸಾಧ್ಯವಾಯಿತೇ. ಈಗ ‘ಕಬ್ಬಿಗರ ಕಾವ’ ಅರ್ಥ ಮಾಡಿಕೊಳ್ಳುವವರೆಷ್ಟು ಇದ್ದಾರೆ ? ಇಂಥ ವಿಷಯಗಳನ್ನೆಲ್ಲ ಮನಗಾಣದೇ ವಿಚಾರಗಳನ್ನು, ಅಭಿಪ್ರಾಯಗಳನ್ನು ಹೇರುವುದು ಸರ್ವಥಾ ಸರಿಯಲ್ಲ. ಬಹುಶಃ ಆಂಡಯ್ಯನ ಅನುಯಾಯಿಗಳು ಇನ್ನೂ ಇದ್ದಾರೆ ಎನ್ನುವುದೇ ಸೋಜಿಗ ! ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

ಬೇಂದ್ರೆ ಟ್ರಸ್ಟ್ ಪ್ರಶಸ್ತಿಯ ಅವಘಡಗಳು !

ಬಸವರಾಜ್ ಸುಳೇಭಾವಿ
ಬೇಂದ್ರೆ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ ! ಧಾರವಾಡದಲ್ಲಿರುವ ದ ರಾ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಗೆಳೆಯ ಶಿವರಾಜ ಬೆಟ್ಟದೂರು ಈ ಹೊತ್ತಿನ ಭರವಸೆಯ ಕವಿ. ಅವರು ತಮ್ಮ ಕವನ ಸಂಕಲನಕ್ಕೆ ಸಿಕ್ಕ ಈ ಸಲದ ಬೇಂದ್ರೆ ಟ್ರಸ್ಟಿನ ಪ್ರಶಸ್ತಿಯನ್ನು ನಾಜೂಕಾಗಿ ನಿರಾಕರಿಸಿದ್ದಾರೆ. ತಮಗೆ ಗುಂಗು ಹಿಡಿಸಿದ ಕವಿ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಯಾಕೆ ನಿರಾಕರಿಸಿದೆನೆಂದು ಅದರ ಹಿಂದಿರುವ ಕಾರಣಗಳನ್ನು, ಮುಜುಗರಗಳನ್ನು ನಾಡಿನ ಪ್ರಾಜ್ಞರೆದುರು ತೆರೆದಿಟ್ಟದ್ದಾರೆ. ಪ್ರಶಸ್ತಿ ಕೊಡುವವರ ಅಸೂಕ್ಷ್ಮತೆಗಳನ್ನು ಪ್ರಸ್ತಾಪಿಸಿದ್ದಾರೆ. ಆ ಸಂಗತಿಗಳನ್ನು ಓದಿ ಸುಮ್ಮನೆ ಮುಂದೆ ಸಾಗುವುದು ನನಗಂತೂ ಸಾಧ್ಯವಿಲ್ಲವೆಂದು ಅನ್ನಿಸಿತು.
ಬೇಂದ್ರೆ ಟ್ರಸ್ಟಿನ ಮೊಟ್ಟಮೊದಲ ಅಧ್ಯಕ್ಷರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಎಂ.ಎಂ.ಕಲಬುರ್ಗಿಯವರು. ಯಾವ ಜಾಗದಲ್ಲೇ ಇರಲಿ ಭವಿಷ್ಯತ್ ನ್ನು ರೂಪಿಸುವ ಕನಸುಗಳನ್ನಿಟ್ಟುಕೊಂಡು ಕೆಲಸ ಮಾಡುವ ಕಲಬುರ್ಗಿಯವರು ಯುವ ಸಾಹಿತಿಗಳಿಗೆ ಆಯಾ ಸಾಹಿತ್ಯ ಪ್ರಕಾರಗಳಿಗೆ ಬೇಂದ್ರೆ ಹೆಸರಿನ ಪ್ರಶಸ್ತಿ ನೀಡುವ ಯೋಜನೆಗೆ ಚಾಲನೆ ನೀಡಿದರು. ಅಲ್ಲದೇ ರಾಷ್ಟ್ರ ಮಟ್ಟದ ಕ್ಯಾನ್ವಾಸ ಇಟ್ಟುಕೊಂಡು ನಾಡಿನ ಹಿರಿಯ ಕವಿಗಳಿಗೊಬ್ಬರಿಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಕೊಟ್ಟು ಗೌರವಿಸುವದನ್ನು ಅನುಷ್ಟಾನಗೊಳಿಸಿದರು.ಕನ್ನಡವಲ್ಲದೆ ಬೇರೆ ಭಾಷೆಯ ದಿಗ್ಗಜ ಕವಿಗಳಿಗೆ ಪ್ರಶಸ್ತಿ ನೀಡಿ ಬೇಂದ್ರ ಟ್ರಸ್ಟಿನ ಇರುವಿಕೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಈ ಪ್ರಶಸ್ತಿ ಜ್ಞಾನಪೀಠದಷ್ಟು ಗೌರವ ಪಡಿಯಬೇಕೆಂಬ ಹಂಬಲ ಅವರದಾಗಿತ್ತು. ಅವರಿರುವ ತನಕ ಎಲ್ಲವೂ ಸರಿಯಾಗಿಯೇ ಇತ್ತು.
ಬೇಂದ್ರೆಯವರು ಆಳದಲ್ಲಿ ಜಾತಿಪ್ರಜ್ಞೆಯಿಂದ ಹೊರತಾದವರು. ಅವರ ಕಾವ್ಯವನ್ನು ಓದಿಕೊಂಡವರಿಗೆ ಅವರು ಸನಾತನವಾದ , ವೈದಿಕಶಾಹಿಯನ್ನು ಸೂಕ್ಷ್ಮವಾಗಿ ವಿರೋಧಿಸುವ ಅಂಶಗಳು ಕಾವ್ಯದಲ್ಲಿ ಇರುವುದು ಅರಿವಿಗೆ ಬರುತ್ತದೆ. ಅವರ ಹೆಸರಿನ ಟ್ರಸ್ಟಿನ ಕಾರ್ಯನಿರ್ವಹಣೆಗಳು ಡಾ. ಕಲಬುರ್ಗಿಯವರು ಅಧ್ಯಕ್ಷರಾಗಿರುವವರಿಗೆ ಒಂದು ಜಾತಿಗೆ ಒಂದು ಮನೋಧರ್ಮಕ್ಕೆ ಸೀಮಿತವಾಗದಂತೆ ನಡೆಯುತ್ತಿದ್ದವು.
ಈ ವಿಚಾರವನ್ನು ಯಾಕೆ ಪ್ರಸ್ತಾಪ ಮಾಡಬೇಕಾಗಿದೆ ಎಂದರೆ ಈಗ ಟ್ರಸ್ಟಿನ ಕಾರ್ಯನಿರ್ವಹಣೆ ಹಾಗೆ ಉಳಿದಿಲ್ಲ.. ಧಾರವಾಡದಲ್ಲಿ ಇದ್ದು ಟ್ರಸ್ಟಿನ ಕಾರ್ಯಕ್ರಮ ನೋಡಿದವರಿಗೆಲ್ಲ ಹಾಗೆ ಅನಿಸುವುದು ಸಹಜವಾಗಿದೆ. ಬೇಂದ್ರೆಯಂಥ ಮಹಾನ ಕವಿಯ ಪ್ರಶಸ್ತಿಯನ್ನು ಸಂಘಪರಿವಾರದ ಘೋಷಿತ ತಿಂಕ್ ಟ್ಯಾಂಕ್ ಆದ .. ಅದಕ್ಕೆ ಬೇಕಾದ ಬೌದ್ದಿಕ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನೇ ಮಾಡುತ್ತ ಬಂದಿರುವ ಕೆ.ಎಸ್ ನಾರಾಯಣಾಚಾರ್ಯರಿಗೆ ಕಳೆದ ವರ್ಷ ನೀಡಿದಾಗಲೇ ಅದರ ಗುಣಮಟ್ಟ ನೆಲಕಂಡಿತ್ತು.. ಮುಖ್ಯವಾಗಿ ಇದೊಂದು ಕೊಡುಕೊಳೆಯ ವ್ಯವಹಾರದ ಹಾಗೆ. ತಾವು ಅಧ್ಯಕ್ಷರಾಗುವದಕ್ಕೆ ಕಾರಣವಾದ ವ್ಯವಸ್ಥೆಗೆ ಋಣ ಸಂದಾಯ ಮಾಡುವುದು. ಈಗಿನ ಅಧ್ಯಕ್ಷರಾದ ಶ್ಯಾಮಸುಂದರ ಬಿದರಕುಂದಿಯವರ ಸಂಘ ಪರಿವಾರದ ಪ್ರೇಮ ಮೊದಲಿನಿಂದಲೂ ಗುಟ್ಟಾದ ಸಂಗತಿಯೇನಲ್ಲ.. ಆದರೇನು ಅದನ್ನು ತೋರುಗೊಡದೆ ಎಲ್ಲದರಲ್ಲೂ ಮೂಲ ಬೇರು ಬಿಡದೆ ಬೆರೆಯುವಂತವರು.
ಶಿವರಾಜ ಬೆಟ್ಟದೂರ ಅವರಿಗೆ ಪ್ರಶಸ್ತಿ ನೀಡುವಲ್ಲಿ ಆಗಿರುವ ಅವಘಡವನ್ನು ಕೆದಕಿದ ಹಾಗೆ ಹಿಂದೆ ಆಗಿರುವ ಅನೇಕ ಅವಘಡಗಳು ಎದ್ದು ಬರುತ್ತವೆ.ನನಗಾದ ಅನುಭವವೂ ಅಷ್ಟೇ ಕಹಿಯಾದದು. ಟ್ರಸ್ಟಿನಲ್ಲಿದ್ದವರ ವ್ಯಕ್ತಿತ್ವದ ಕನ್ನಡಿಯಾಗುವಂಥದ್ದು. ಇಷ್ಟುದಿನ ಈ ವಿಷಯವನ್ನು ನಾನು ಎಲ್ಲಿಯೂ ಪ್ರಸ್ತಾಪಿಸಲು ಹೋಗಿರಲಿಲ್ಲ. ಈಗ ಹೇಳಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ ಎಂದು ಅದನ್ನಿಲ್ಲಿ ತೆರೆದಿಡುತ್ತಿರುವೆ
ಕಳೆದ ವರ್ಷ ಬೇಂದ್ರೆ ಟ್ರಸ್ಟ್ 2010 ರ ಸಾಲಿನ ಪ್ರಶಸ್ತಿಗಾಗಿ ವಿವಿಧ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಿದಾಗ ನಾನು ಆ ಸಾಲಿನಲ್ಲಿ ನಮ್ಮ ಪ್ರಕಾಶನ ಪ್ರಕಟಿಸಿದ ನನ್ನ ಸಂಗಾತಿ ವಿಭಾ ಅನುವಾದಿಸಿದ ‘ಹರಿವ ನೀರೊಳಗಿನ ಉರಿ’ ಪುಸ್ತಕವನ್ನು ಪ್ರಶಸ್ತಿ ಪರಿಶೀಲನೆಗಾಗಿ ಕಳಿಸಿಕೊಟ್ಟೆ.. ಈ ಪ್ರಶಸ್ತಿ ಇರುವುದು 35 ವಯಸ್ಸಿನ ಒಳಗಿನ ವಯೋಮಾನದ ಸಾಹಿತಿಗಳಿಗೆ. ವ್ಯವಸ್ಥಾಪಕರು ವಯೋಮಾನದ ನಿಖರತೆಗಾಗಿ ವಿಭಾಳ ಲಿವೀಂಗ್ ಸರ್ಟಿಪಿಕೇಟ್ ಕೇಳಿದರು. ನಾನದನು ಅವರಿಗೆ ತಲುಪಿಸಿದೆ. ಪ್ರಶಸ್ತಿ ವಿತರಣೆ ಒಂದು ವಾರವಿದೆ ಎನ್ನುವಾಗ ಅಧ್ಯಕ್ಷರಾದ ಡಾ. ಶ್ಯಾಮಸುಂದರ ಬಿದರಕುಂದಿಯವರು ಫೋನ್ ಮಾಡಿ ಅನುವಾದ ವಿಭಾಗದಲ್ಲಿ ವಿಭಾ ಅವರ ‘ಹರಿವ ನೀರೊಳಿಗಿನ ಉರಿ’ ಕೃತಿಗೆ ಪ್ರಶಸ್ತಿ ಬಂದಿದೆ. ತುಂಬ ಒಳ್ಳೆಯ ಕೃತಿ ಅದು. ಉತ್ತಮವಾಗಿ ಅನುವಾದಿಸಿದ್ದಾರೆ. ವಿಭಾ ಇದ್ದಿದ್ದರೆ ತುಂಬ ಖುಷಿಯಾಗುತ್ತಿತ್ತು. ಇರಲಿ ಅಂದು ಕಾರ್ಯಕ್ರಮಕ್ಕೆ ಬೇಗ ಬನ್ನಿ. ಮಗಳನ್ನು ಕರೆತನ್ನಿ.. ಟ್ರಸ್ಟಿಗೆ ‘ಹರಿವ ನೀರೊಳಗಿನ ಹರಿ’ ಪುಸ್ತಕದ ಇನ್ನು ಎರಡು ಪ್ರತಿ ಬೇಕು. ಅವನ್ನು ಟ್ರಸ್ಟಿಗೆ ತಲುಪಿಸಿ ಎಂದರು. ನಾನು ಆಗಲಿ ಸರ್ ಎಂದೆ. ಆಮೇಲೆ ಆ ವರ್ಷ ಇತರ ಪ್ರಕಾರಗಳಲ್ಲಿ ಪ್ರಶಸ್ತಿ ಪಡೆದ ನನ್ನ ಕಿರಿಯ ಗೆಳೆಯರು ತಮ್ಮ ಸಂತೋಷವನ್ನು ನನ್ನೊಡನೆ ಹಂಚಿಕೊಂಡರು.
ಪ್ರಶಸ್ತಿ ವಿತರಣೆಗೆ ಇನ್ನೊಂದು ದಿನ ಬಾಕಿ ಇತ್ತು. ಹಿಂದಿನ ದಿನ ಫೋನ್ ಮಾಡಿದ ಶ್ಯಾಮಸುಂದರ ಬಿದರಕುಂದಿಯವರು ಮೊದಲಿಗೆ ಕ್ಷಮೆ ಯಾಚಿಸಿದರು. ವಿಭಾ ಪುಸ್ತಕಕ್ಕೆ ಬಂದ ಪ್ರಶಸ್ತಿಯನ್ನು ಹಿಂತೆಗೆದುಕೊಂಡಿದ್ದೇವೆ. ಹಾಗಂತ ಟ್ರಸ್ಟಿನ ನಿರ್ದೇಶಕರ ಸಭೆಯಲ್ಲಿ ತೀರ್ಮಾನ ತಗೆದುಕೊಳ್ಳಲಾಗಿದೆ. ಈ ಪ್ರಶಸ್ತಿಯನ್ನು ಬೆಳೆಯಬೇಕಾದ ಯುವ ಸಾಹಿತಿಗಳಿಗೆ ಕೊಡುವುದು. ನಿಗದಿತ ವಯೋಮಾನದೊಳಗೆ ವಿಭಾ ಇದ್ದರೂ ತೀರಿಕೊಂಡವರ ಕೃತಿಗಳಿಗೆ ಪ್ರಶಸ್ತಿ ಕೊಡುವುದು ಬೇಡ ಎಂದು ನಿರ್ಣಯವಾಗಿದೆ.. ಕೃತಿ ಬಗ್ಗೆ ಎರಡು ಮಾತೇ ಇಲ್ಲ. ಅಷ್ಟೊಲ್ಲೆ ಕೃತಿ ಅದು ಎಂದರು.ಆ ಕ್ಷಣ ತಿರುಗಿ ಅವರಿಗೆ ನನಗೇನು ಹೇಳಬೇಕೆನಿಸಲಿಲ್ಲ. ಮೌನವಾದೆ. ಆನಂತರ ನನ್ನ ಆಪ್ತರಲ್ಲಿ ಈ ಸಂಗತಿ ಚರ್ಚೆಯಾಯಿತು..
ಕೆಲವು ಪ್ರಶ್ನೆಗಳು ಹಾಗೆ ಉಳಿದುಬಿಟ್ಟವು. ಟ್ರಸ್ಟ್ ಈ ಪ್ರಶಸ್ತಿಯನ್ನು ಕೊಡಲು ಆರಂಭಿಸಿದಾಗ ಇಂಥ ನಿಯಮಾವಳಿಯನ್ನು ಸೇರಿಸಿತ್ತೇ? ಡಾ. ಕಲಬುರ್ಗಿಯವರನ್ನು ಆನಂತರ ಕೇಳಿದಾಗ ಅಂಥ ನಿಯಮಾವಳಿ ಮಾಡಿರಲಿಲ್ಲ ಎಂದರು. ಈಗಿನ ಟ್ರಸ್ಟ್ ನಿರ್ದೇಶಕರು ಇಂತಹ ತೀರ್ಮಾನವೇಕೆ ತಗೆದುಕೊಂಡಿರು ಅನ್ನುವದಕ್ಕಿಂತ ಟ್ರಸ್ಟಿನಲ್ಲಿ ಚರ್ಚೆ ಮಾಡಲಾರದೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತೇ? ಯಾಕೆ ಮಾಡಲಾಯಿತು? ಘೋಷಣೆ ಮಾಡುವ ತುರ್ತು ಏನಿತ್ತು? ಪ್ರಶಸ್ತಿ ಘೋಷಣೆ ಮಾಡಿದ ಮೇಲೆ ಹಿಂತೆಗೆದುಕೊಂಡರೆ ಆಗುವ ಪರಿಣಾಮಗಳೇನು? ಈ ಬಗ್ಗೆ ಉತ್ತರಬೇಕಾದವರು ಯಾರು? ಯಾರಿಗೂ ಬಾಯಿ ಇರಲಿಲ್ಲ.
ಈ ಬಗ್ಗೆ ಶ್ಯಾಮಸುಂದರ ಬಿದರಕುಂದಿಯವರೇನು ಹೇಳಲಿಲ್ಲ .. ನನಗೂ ಅವರನ್ನು ಮತ್ತೆ ಕೇಳಬೇಕೆನಿಸಲಿಲ್ಲ.ಸೂಕ್ಷ್ಮ ವಿಷಯಗಳಲ್ಲಿ ಸಣ್ಣ ಮನಸುಗಳೊಡನೆ ಗುದ್ದಾಡುವದರಲ್ಲಿ ಯಾವ ಅರ್ಥವೂ ಇಲ್ಲವೆನಿಸಿತು.
ಈತನಕ ಪ್ರಕಟವಾದ ವಿಭಾಳ ಮೂರು ಕವನ ಸಂಕಲನಗಳು ( ಅದರಲ್ಲಿ ಎರಡು ಅನುವಾದಗಳು) ಅವಳ ಮರಣೋತ್ತರವೆ ಬಂದಿವೆ..ಕಥಾ ಸಂಕಲನ , ಲೇಖನ ಸಂಕಲನ, ವಿಮರ್ಶೆ ಬರೆಹಗಳ ಕೃತಿಗಳು ಪ್ರಕಟವಾಗಬೇಕು ಆ ಕೆಲಸ ನಡೆದಿದೆ . ಪ್ರಕಟವಾದ ಸಂಕಲನಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕ ವಿದ್ಯಾವರ್ದಕ ಸಂಘದ ಮಾತೋಶ್ರಿ ರತ್ನಮ್ಮ ಹೆಗ್ಗೆಡೆ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಹರಿಹರಶ್ರೀ ಕಾವ್ಯ ಪ್ರಶಸ್ತಿ, ಕ ಸಾಪ ದ ಮಲ್ಲಿಕಾ ದತ್ತಿ ನಿಧಿ ಪ್ರಶಸ್ತಿ. ಇತ್ಯಾದಿ.. ಇವೆಲ್ಲವೂ ಸಿಕ್ಕಿರುವುದು ಮರಣೋತ್ತರವಾಗಿ ಪ್ರಕಟವಾದ ಕೃತಿಗಳಿಗೆ. ಈ ಸಂಘ ಸಂಸ್ಥೆಗಳಿಗೆ ಇಲ್ಲವಾದ ಮರಣೋತ್ತರದ ಪ್ರಶ್ನೆ ಬೇಂದ್ರೆ ಟ್ರಸ್ಟಿಗೆ ಬಂದಿತೇಕೆ ಎಂಬ ಪ್ರಶ್ನೆ ನನಗೆ ಈಗಲೂ ಕಾಡುತ್ತಿದೆ. ಪ್ರಶಸ್ತಿಗೆ ಮುಖ್ಯವಾಗುವುದು ಯಾವುದು ಕೃತಿಯೋ .. ಲೇಖಕನೋ..?
ಈ ಸಂಗತಿ ನನ್ನ ಮನಸಿನ ಮೂಲೆಯಲ್ಲಿಯೇ ಉಳಿದುಬಿಟ್ಟಿತು.. ಶಿವರಾಜ ಬೆಟ್ಟದೂರರ ವಿಷಯ ಕೇಳಿ ಮತ್ತೆ ನೆನಪಿಗೆ ಬಂದಿತು. ಇದಕ್ಕೂ ಪೂರ್ವದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿರುವ ಗಣೇಶ ಅಮೀನಗಡ ಅವರ ಕೃತಿಗೆ ಬಂದ ಪ್ರಶಸ್ತಿಯನ್ನು ಘೋಷಣೆ ಮಾಡಿದ ಮೇಲೆ ಅಪದೆವಿಟ್ ಕಾರಣಕ್ಕಾಗಿ ಗಣೇಶ್ ಕೂಡ ಪ್ರಶಸ್ತಿಯನ್ನು ನಿರಾಕರಿಸಿದ ಘಟನೆ ಜರುಗಿಹೋಗಿದೆ.
ಡಾ. ಶ್ಯಾಮಸುಂದರ್ ಬಿದರಕುಂದಿಯವರು ಅಧ್ಯಕ್ಷರಾಗಿರುವ ತನಕ ಇಂಥ ಅವಘಡಗಳು ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಅವರ ಕಾರ್ಯವೈಖರಿಯೇ ಹಾಗೆ..ಆದರೆ ಕವಿ ಬೇಂದ್ರೆಯವರ ಹೆಸರಿನ ಟ್ರಸ್ಟಿನ ಕಾರ್ಯಗಳು ಈ ರೀತಿ ನಡೆಯಬಾರದಿತ್ತು ಎಂದು ಈ ಹೊತ್ತಿನಲ್ಲೂ ಅನಿಸುತ್ತಿದೆ ಅಷ್ಟೇ.
ಘಟನೆ ಮುಗಿದ ಮೇಲೆ ಮೂರ್ಖನೂ ಜಾಣನಾಗುವುದು ಲೋಕರೂಢಿ.. ಕೆಲವರು ಈ ಲೋಕರೂಢಿಗಳನ್ನು ಮುರಿಯುತ್ತಲೇ ಇರುತ್ತಾರೆ
-ಬಸೂ

ಶಂಖದಿಂದ ಬಂದರೆ ಮಾತ್ರ ತೀರ್ಥ !

ಸಾಹಿತ್ಯದ ವಿಮರ್ಶೆಯ ಬಗ್ಗೆ ನಾನು ಪದೇ ಪದೇ ಅಂದ್ರೆ ಬಹಳಷ್ಟು ಸಲ ಹೊಸದಾಗಿ ಬರೆಯುವ ನನ್ನ ವಿದ್ಯಾರ್ಥಿಗಳಾದಿಯಾಗಿ ಎಲ್ಲರಿಗೂ ಹೇಳುವ ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಒಂದು ನಾಲ್ಕು ಸಾಲಿನ ಕವಿತೆಯನ್ನು ಕೊಟ್ಟು ಆ ಬಗ್ಗೆ ಬರೆಯುತ್ತೇನೆ. ಆ ಕವಿತೆ ಹೀಗೆಇದೆ ;
ಆತ ಅತ್ತ ಕಡೆಯಿಂದ ಬಂದ
ಆಕೆ ಇತ್ತ ಕಡೆಯಿಂದ ಬಂದಳು
ನಡುವೆ ಒಂದು ವೃತ್ತ
ಇಬ್ಬರೂ ಸಂಧಿಸುವಲ್ಲಿ
ಆತ ಬಲಕ್ಕೆ ಹೊರಳಿದ
ಆಕೆ ಎಡಕ್ಕೆ ಹೊರಳಿದಳು !
ಹೀಗೆ ಬರೆದು ಯಾರಾದರೂ ವಿದ್ವಾಂಸರು, ಬರಹಗಾರರು ಎಂದುಕೊಂಡವರ ಬಳಿಗೆ ನೀವು ‘ಸರ್, ಇದು ನಾನು ಬರೆದ ಕವಿತೆ’ ಎಂದುಕೊಂಡು ಹೋದಿರೋ ಮುಗಿಯಿತು …  ಅವರು ಬುದ್ಧಿವಾದ ಹೇಳುತ್ತಾರೆ. ಇದು ಕವಿತೆಯೇ ಅಲ್ಲ ಎನ್ನುವಂತೆ ಮಾತಾಡುತ್ತಾರೆ ! ಇನ್ನೊಂದಿಷ್ಟು ಗಂಭೀರವಾಗಿ ಬರೆಯುವಂತೆ ಪುಕ್ಕಟೆ ಸಲಹೆಯನ್ನೂ ನೀಡುತ್ತಾರೆ !
ಅದೇ ನೀವು ಇದೇ ಕವಿತೆಯನ್ನು ತೆಗೆದುಕೊಂಡು ಯಾವುದೋ ಒಬ್ಬ ಹೆಸರಾಂತ ಕವಿಯ ಹೆಸರನ್ನು  ಬರೆದು ‘ಇದು ಸರ್ ಇಂಥವರು ಬರೆದ ಕವಿತೆ’ ಅನ್ನಿ. ಆವಾಗ ಸುರುವಾಗುತ್ತೆ ನೋಡಿ ಅವರ ವಿಮರ್ಶಕ ಬುದ್ಧಿ ! ಈ ಕವಿತೆಯನ್ನು ಅವರು ಹೊಗಳುತ್ತಾರೆ. ಪ್ರಕೃತಿ-ಪುರುಷ ಎಂದು ಮೊದಲಾಗಿ ಮಾತನಾಡುತ್ತಾರೆ. ಕೆಲವೊಬ್ಬರು ಅದಕ್ಕೆ ಆಧ್ಯಾತ್ಮಿಕ ಹೋಲಿಕೆಯನ್ನೂ ನೀಡುತ್ತಾರೆ !
ಹಾಗಾದರೆ ಶಂಖದಿಂದ ಬಂದದ್ದು ಮಾತ್ರ ತೀರ್ಥವೇ ?

Mulnivasis-Who and How ?

Balvinder Singh Mulnivasi

Some Sanskrit literature of Arya Brahmins, that is available today makes mention of some important aspects, related to Mulnivasis. According to this literature, in the ancient period there was heavy struggle between the Aryas and the Mulnivasis.

This struggle is described in the Sanskrit literature. The terminology used for the Mulnivasis is Anarya, Dass, Dasyu, Asur, Rakshas, Ravan and Naga. These were the names given by Aryan invaders to the Mulnivasis. These are not praise-worthy names, but were used to abuse and condemn them.
Mulnivasi Sangh
Therefore, it is now proved that these Anarya, Dass, Dasyu, Asura, Rakshas and Danav are the original inhabitants of this country, who, are now referred in the constitution as Scheduled Castes and convert from them to religious minorities.
How can we say that these people are Mulnivasis?

This question can be answered in many ways and many reasons can be given, to call these people as Mulnivasis. One, these people were made untouchables and were driven out from the public life and were forced to live a wretched life of animals.
The Second section of the Mulnivasis are tribal people, who were forced to live in jungles and hills. Thus we can see that the Scheduled Castes are not Hindus, because they do not observe religious customs of Arya Brahmins. Arya-Brahmins call them Hindus, but have not granted them any rights of Hindus.

Hindu code bill was not applicable to the Scheduled Castes. Thus there is no similarity of conduct, thoughts, faith, belief, customs, religious tradition, language and way of life between Arya-Brahmins and Scheduled Castes / Scheduled Tribes.

The third big section, whom we call, Other Backward Class(OBC) is also Mulnivasis, because they have been deprived the right of holding power, acquiring property and possessing weapons(As per manusmruti). When these O.B.C. accepted the domination of Arya-Brahmins they granted them religious rights of Hindus, but adopted Puranic system for them, instead of Vedic system. From this, it is proved that this class is not Vedic. We can see that when rights were granted to O.B.C’s as per Mandal Commission, the Arya-Brahmins opposed it most. They tried to hatch a conspiracy against the objectives of the Mandal Commission and were successful in that.

From these SCs, STs and OBCs, who are the Mulnivasis have become Sikhs, Buddhists, Christians and Muslims. It means the 95% people of minorities are from this Mulnivasie castes. Arya-Brahmins call them foreigners, especially Muslims. Muslims are not foreigners, but are original inhabitants of this country. Thus we all are Mulnivasis. This is proved fact.
Struggle for liberation of Mulnivasis

When freedom struggle of our country was going on, we were dual slaves. The Arya Brahmins were slaves of British people and we, Mulnivasis (original inhabitants) were the slaves of the system established by them, in which we were made slaves, socially , culturally and religiously.
On 15th Aug. 1947, these Arya-Brahmins got freedom and became the masters and rulers of the country. And we, who were the slaves of the slaves are still slaves of these Arya-Brahmins. On 15th Aug. 1947, the country got the freedom, but the people of the country did not get this freedom. Only Arya brahmins got freedom and we, Mulnivasis are still their slaves.

Therefore, it is necessary to launch the struggle for the liberation of the Mulnivasis. Pride of the caste is the reason of our slavery and caste are invented by Arya Brahmins, through which they divided the Mulnivasis into 6000 small groups and perpetuated this division into them. Every caste is having its own caste people and there is ladder of high and low, based on graded inequality among these castes, they keep on fighting among themselves, instead of uniting themselves to fight against the common enemy. The Arya-Brahmins encourage and sponsor this fight. Because of this constant division of Mulnivasis of the country, they have become unfit for the resistance.

Along with this, another important aspect is that these Mulnivasis were prohibited from taking education, possessing weapons and acquiring property. Because of this, they became helpless, and hopeless and came to depend upon Arya-Brahmins. The brahmins took advantage of this dependency and made the Mulnivasis, slaves. When they were made slaves under Brahminical system, they could not save the independence of their country and along with them, India, their motherland also became slave.

Therefore, it is necessary to liberate the Mulnivasis and their motherland. It is necessary to free them from the system. Hence to achieve the objective of “Change of System” and to free the country from Arya-Brahmins, it has become necessary to launch the movement of their liberation of the Mulnivasis.
Point of view based on Social system

From the view point based on system, it can be seen that the Scheduled Castes, Scheduled Tribes, Other Backward Classes and Minorities are victims of the brahminical system. Therefore Mahatma Jyotirao Phule, Periyar Ramaswami and Dr. Babasaheb Ambedkar have fixed the objective of their movements to change this social System of inequality.
Therefore those who are suffering from this Social System, can only take active part in the movement of change of System. This is quite natural. There is no point in organising those communities, who were benefited by the System. Thus for changing the System of inequality, it is necessary to organise those communities, who were victims of the system, Therefore the Scheduled Castes, Scheduled Tribes, Other Backward classes and Minorities are being organised.
Aryan Brahmins are foreigners

If Scheduled castes, Scheduled Tribes, Other Backward Class and the minorities converted from them, who have been divided into 6000 castes, are the Mulnivasis of this country, then who are foreigners? We must find out an answer to this question. There is not much difference of opinion among historians on this point, that Aryans are foreigners. The only difference of opinion is on the issue of the country of their origin. On this issue

JAI MULNIVASI!

ನನ್ನ ಅಕ್ಷರ ಮಾಯೆ ಪದ್ಯದ ಸಾಲುಗಳು…

– ಅರುಣ ಜೋಳದಕೂಡ್ಲಗಿ
ಬಿಳಿ ಹಾಳೆಯಲ್ಲಿ
ಅವಳೇ ಬರೆದ ಸಾಲುಗಳ ಮೇಲೆ
ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದಾಳೆ !
ಒಂದಕ್ಷರ ಕದಲಿದರೂ
ಅವಳು ಬೀಳುವುದು ಪ್ರಪಾತಕ್ಕೆ !
ಪ್ರತಿ ಅಕ್ಷರದ ಪಾದಕ್ಕೂ
ನಮಸ್ಕರಿಸಿ ಹೇಳಿದ್ದೇನೆ
ಅವಳ ಪಾದ ಚಲಿಸುವಷ್ಟು ಹೊತ್ತು
ಭಾರ ಹೊರುವ ಶಕ್ತಿ ನೀಡಲು
ನಿಮ್ಮ ತಾಯಂದಿರ ನೆನೆಯಿರಿ ಎಂದು !
ಈಗ ನನ್ನೆಸರಿನ ಮೇಲೆ ಪಾದ ಊರಿದ್ದಾಳೆ
ಮೈ ಬೆವರುತ್ತಿದೆ !

ಇಂಟರ್ ವ್ಯೂಗೆ ಬಂದ ಯುವಕರಿಗೆ…

 

ತಮಿಳು: ಎಂ.ರಾಮಲಿಂಗಂ
ಕನ್ನಡಕ್ಕೆ: ಓ.ಎಲ್. ನಾಗಭೂಷಣ ಸ್ವಾಮಿ.

ಓ ನನ್ನ ಪ್ರಿಯ ಗೆಳೆಯರೆ
ಪರಿತಾಪ ಪಡುವ ಜೀವಿಗಳೆ !

ಕನಸುಗಳ ಭಾರ ಹೊತ್ತ ನಿಮ್ಮ ಕೊರಳನ್ನು
ಯಾಕೆ ಮುಂದೊಡ್ಡಿದ್ದೀರಿ ?

ಈ ಸಂಯುಕ್ತೆ
ನಮಗೆ ಯಾರಿಗೂ

ಮಾಲೆ ಹಾಕುವವಳಲ್ಲ. !

ಒಬ್ಬ ಪೃಥ್ವೀರಾಜ
ಈಗಾಗಲೆ ಅಡಗಿ ನಿಂತಿದ್ದಾನೆ
ಇನ್ ಪ್ಲುಯೆನ್ಸಿನ ಶಿಲಾ ವಿಗ್ರಹದ ಹಿಂದೆ.

ಬನ್ನಿ,
ಈ ಹಗಲು ನಾಟಕಕ್ಕೆ
ಸಾಕ್ಷಿಗಳಾಗಿರುವ ಬದಲು
ಮರೆಯೋಣ ನಮ್ಮೆಲ್ಲಾ ದುಃಖ
ಗಾಂಜಾ ಸೇದಿ

ಅಥವಾ
ಸ್ಪೋಟಿಸೋಣ ಈ ಶಿಲಾ ಪರ್ವತಗಳನ್ನು
ಎಸೆದು ಒಂದು ಬಾಂಬು !
(ಆತ್ಮೀಯ ಡಾ. ಅರುಣ ಜೋಳದಕೂಡ್ಲಗಿ ಅವರು ಕಳುಹಿಸಿದ ಕವಿತೆ)

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ !

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ

 ”ಜಾತಿಯ ಗೋಡೆಯನ್ನು ಕೆಡವಿ”

‘ಜಾತಿಯ ಗೋಡೆಯನ್ನು ಕೆಡವಿ’ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ನವಿ ಪಿಳ್ಳೆ  ಹೊರಡಿಸಿರುವ ಪತ್ರ ಕಠಿಣ ಶಬ್ದಗಳಿಂದ ಕೂಡಿದ್ದು ಹಲವಾರು ದೇಶಗಳಲ್ಲಿ ಸಂಚಲನ ಮೂಡಿಸಿದೆ.  ಜಾತಿಪದ್ಧತಿಯಿಂದುಂಟಾಗುವ  ಮಾನವ ಹಕ್ಕು ಉಲ್ಲಂಘನೆಯನ್ನು  ಅವರು ಗುಲಾಮಗಿರಿ ಹಾಗೂ ಅಪಾರ್ಥೀಡ್‍ಗಳಿಗೆ ಹೋಲಿಸಿದ್ದಾರೆ. ಮಾನವ ಜನಾಂಗದ ಆ ಎರಡು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿದಂತೆಯೇ ಜಾತಿಪದ್ಧತಿಯನ್ನು ಸಹ ನಿರ್ಮೂಲನ ಗೊಳಿಸಬೇಕು ಎಂದು ಕರೆ ನೀಡಿದ್ದಾರೆ.  ಅದಕ್ಕಾಗಿ ಎಲ್ಲ ದೇಶಗಳ ಸಹಕಾರವನ್ನು ಅವರು ಬಯಸುತ್ತಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 260 ಮಿಲಿಯನ್ ಜನರು ಪ್ರಪಂಚದಾದ್ಯಂತ ಜಾತಿ ಪದ್ಧತಿಯ ದೌರ್ಜನ್ಯಗಳಿಂದ ಬಳಲುತ್ತಿದ್ದಾರೆ.  ಭಾರತ ಪ್ರಮುಖವಾಗಿ ಕಾಣಿಸಿಕೊಂಡರೂ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ದಕ್ಷಿಣ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಭಾರತೀಯ ವಸಾಹತು ಸ್ಥಳಗಳಲ್ಲಿ ಜಾತಿಭೇದ ನೀತಿ ಇನ್ನೂ ಚಲಾವಣೆಯಲ್ಲಿದೆ ಎಂದು ನವಿ ಪಿಳ್ಳೆ ಬರೆಯುತ್ತಾರೆ.

ಹುಬ್ಬಳ್ಳಿಯ ಕೆಲವು ಗೆಳೆಯರು ‘ಮಾನವ ಹಕ್ಕು ಪ್ರತಿಪಾದನಾ ಸಂಸ್ಥೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.  ಏಪ್ರಿಲ್ 2008 ರಲ್ಲಿ ನಡೆದ ಅದರ ಉದ್ಛಾಟನಾ ಸಮಾರಂಭದಲ್ಲಿ ನಾನು ಒಂದು ಮಾತು ಹೇಳಿದ್ದೆ.  ‘ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತೆಯ ಆಚರಣೆಯನ್ನು ಅಪರಾಧವೆಂದು ಪರಗಣಿಸಲಾಗಿದೆ.  ಆದರೆ ವಾಸ್ತವದಲ್ಲಿ ಹಳ್ಳಿ, ಪಟ್ಟಣವೆನ್ನದೆ ಅದಿನ್ನೂ ಜೀವಂತವಾಗಿದೆ.  ಅದರ ಮಾತೃಗರ್ಭವಾದ ಜಾತಿ ಪದ್ಧತಿ ಅಳಿಯದ ಹೊರತು ಅಸ್ಪೃಶ್ಯತೆ ನಾಶವಾಗುವುದಿಲ್ಲ. ಆದ್ದರಿಂದ ಜಾತಿ ಪದ್ದತಿಯ ಆಚರಣೆಯನ್ನು ಸಂವಿಧಾನದಲ್ಲಿ ಅಪರಾಧವೆಂದು ಪರಿಗಣಿಸಿ ತಿದ್ದುಪಡಿ ತರಬೇಕು. ಆಗ ಅದರ ಪಾಪದ ಪಿಂಡವಾದ ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನಿಸಬಹುದು’ ಎಂದು. ಆ ಸಂದರ್ಭದಲ್ಲಿ ಉಪಸ್ಥಿತರಾಗಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್.ನಾಯಕ್ ರವರು ಆ ಮಾತನ್ನು  ಅನುಮೋದಿಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಜಾತಿ ಪದ್ದತಿ ಆಚರಣೆಯನ್ನು ಸಂವಿಧಾನ ಮೂಲಕ ಅಳಿಸಿಹಾಕಬೇಕು ಎಂಬ ಕರೆಯನ್ನು ಸಹ ಕೊಟ್ಟಿದ್ದರು.  ಇದರ ನೆನಪು ಈ ಸಂದರ್ಭದಲ್ಲಿ ಪ್ರಸ್ತುತವೆಂದು ಉಲ್ಲೇಖಿಸುತ್ತಿದ್ದೇನೆ.

ಜಾತಿಯಾಧಾರಿತ ತಾರತಮ್ಯ – ಮಾನವ ಹಕ್ಕು ಉಲ್ಲಂಘನೆ:

ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್  ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು  ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಠರಾವು ಪಾಸುಮಾಡಿದೆ. ಅದಕ್ಕೆ ನೇಪಾಳ ಬೆಂಬಲ ನೀಡಿದೆ. ನೇಪಾಳ ದೇಶವು ನೀಡಿದ ಬೆಂಬಲವು ಮಹತ್ವದ್ದು ಎಂಬುದು ವಿಶೇಷ. ಯಾಕೆಂದರೆ ಇತ್ತೀಚಿನವರೆಗೂ ವಿಶ್ವದ ಏಕೈಕ ಹಿಂದೂ ರಾಷ್ಟ್ರ್ರವಾಗಿದ್ದ ನೇಪಾಳದಲ್ಲಿ ಭಾರತದಲ್ಲಿರುವಂತೆಯೆ ಹಿಂದೂಗಳು ಬಹುಸಂಖ್ಯಾತರು ಮತ್ತು ಅಲ್ಲಿಯೂ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳು ಬೇರು ಬಿಟ್ಟು ಸಮಾಜವನ್ನು ಕುರೂಪಗೊಳಿಸಿವೆ.  ವಿಪರ್ಯಾಸವೆಂದರೆ ಭಾರತ ಈ ಠರಾವನ್ನು ವಿರೋಧಿಸುತ್ತಿದೆ.  ಜಾತಿಪದ್ಧತಿ ಎಂಬುದು ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಯಾಗಿದ್ದು ಅದು ದೇಶದ ಆಂತರಿಕ ವಿಚಾರವೆಂದೂ, ಅದರ ನೇತ್ಯಾತ್ಮಕ ಅಂಶಗಳಾದ ಅಸ್ಪೃಶ್ಯತೆ, ಇತ್ಯಾದಿಯನ್ನು ಸಂವಿಧಾನದ ಮೂಲಕ ಹೋಗಲಾಡಿಸಿಕೊಂಡಿದೆಯೆಂದು ವಾದಿಸುತ್ತಾ ಬಂದಿದೆ.

ಭಾರತ ಯಾಕೆ ಈ ನೀತಿ ಅನುಸರಿಸುತ್ತಿದೆ ಎಂಬುದು ಅರ್ಥವಾಗದ ವಿಷಯ. ಜಾತಿ ವೃತ್ತಿ ಸಂಬಂಧಿತವಲ್ಲ ಎಂಬುದು, ಆನುವಂಶಿಕವಲ್ಲ ಎಂಬುದು ಭ್ರಮಾತ್ಮಕವಾದುದು.  ಈ ನಿಲುವು ನೈತಿಕವಾದುದಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.  ಇಂಥ ಧೋರಣೆಯಿಂದ ಭಾರತ ಸಾಧಿಸ ಬೇಕಾಗಿರುವುದಾದರೂ ಏನನ್ನು.? ದೇಶದೊಳಗಿನ ಇಂಥ ಗಂಭೀರ ಸಮಸ್ಯೆಯೊಂದರ ಬಗ್ಗೆ ತನ್ನ ಅಂತರರಾಷ್ಟ್ರೀಯ ನಿಲುವು ಸತ್ಯಕ್ಕೆ ನಿಷ್ಠವಾಗಿರಬೇಕಾದ ಅನಿವಾರ್ಯತೆಯನ್ನು ಮರೆತು ಭಾರತ ವರ್ತಿಸುತ್ತಿದೆಯೆ? ಅದರ ಪರಿಣಾಮಗಳನ್ನು ಯೋಚಿಸಿದೆಯೆ?  ವಿಶ್ವಸಂಸ್ಥೆಯು ಜನಾಂಗೀಯ ಭೇದ ವಿನಾಶ ಸಮಿತಿಯೊಂದನ್ನು (Committee on Elimination of Racial Discrimination – CERD) ರಚಿಸಿದೆ.  ಅದು ಎಲ್ಲಾ ವಿಧದ ಜನಾಂಗೀಯ ಭೇದಗಳ ವಿನಾಶದ ಕುರಿತು 1968 ರಲ್ಲಿ  ಏರ್ಪಟ್ಟ ಅಂತರರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ರಚನೆಯಾಗಿದೆ.  ಆ ಒಡಂಬಡಿಕೆಗೆ ಭಾರತವೂ ಸಹಿ ಮಾಡಿದೆ.  ಆ ಒಡಂಬಡಿಕೆಯ ಪ್ರಕಾರ  ವಿಶ್ವಸಂಸ್ಥೆಯು ಜನಾಂಗ, ವರ್ಣ, ಅನುವಂಶೀಯ ಅಥವಾ ಕುಲಸಂಬಂಧೀ ಭೇದಗಳ ವಿರುದ್ಧ ರಕ್ಷಣೆಯ ಭರವಸೆಯನ್ನು ತನ್ನ ಸದಸ್ಯ ರಾಷ್ಟ್ರೀಯ ಪ್ರಜೆಗಳಿಗೆ ನೀಡುತ್ತದೆ.  1996 ರಲ್ಲಿ  ಜನಾಂಗೀಯ ಭೇದ ವಿನಾಶ ಸಮಿತಿಯು ದಲಿತರ ವಿರುದ್ಧ ನಡೆಸಲಾಗುವ ಭೇದವನ್ನು ಸಹ ಅನುವಂಶೀಯ ಆಧಾರದ ಭೇದ ನಿಷೇಧದ ಅಡಿಯಲ್ಲಿ ಪರಿಗಣಿಸಬಹುದು ಎಂದು ತೀರ್ಮಾನಿಸಿದೆ. ಒಬ್ಬ ಸಹಿದಾರನಾಗಿ ಭಾರತ ಒಡಂಬಡಿಕೆಯಲ್ಲಿ ಭೇದ ನೀತಿಗೊಳಪಡುವವರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ಕಾಲಕಾಲಕ್ಕೆ ವರದಿಗಳ ಮೂಲಕ ನೀಡಬೇಕಾಗಿರುತ್ತದೆ.  ಅದನ್ನು ಸಮಿತಿಯು ಪರಿಶೀಲನಾ ಸಭೆಗಳಲ್ಲಿ ಪರಾಂಬರಿಸಿ ರಚನಾತ್ಮಕ ವಾಗ್ವಾದಗಳನ್ನು ನಡೆಸುತ್ತದೆ ಮತ್ತು ಸುಧಾರಣಾ ಸಲಹೆಗಳನ್ನು ನೀಡುತ್ತದೆ.

ಇಂತಹ ಒಂದು ಠರಾವನ್ನು 1996 ರಿಂದಲೂ ಭಾರತ ವಿರೋಧಿಸುತ್ತಾ ಬಂದಿದೆ.  ಭಾರತವು ಹತ್ತು ವರ್ಷಗಳ ನಂತರ ಫೆಬ್ರವರಿ 2007 ರಲ್ಲಿ ಈ ಠರಾವಿಗೆ ಉತ್ತರ ನೀಡಿದೆ.  ವಿಚಿತ್ರವೆಂದರೆ, ಅದರಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಒಂದು ಚಕಾರವೂ ಇಲ್ಲ. ಪ್ರತಿ ಘಂಟೆಗೆ ಇಬ್ಬರು ದಲಿತರನ್ನು ಥಳಿಸಲಾಗುತ್ತದೆ. ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಪಡುತ್ತಾರೆ.  ಇಬ್ಬರು ದಲಿತರು ಕೊಲ್ಲಲ್ಪಡುತ್ತಾರೆ  ಎರಡು ದಲಿತರ ಮನೆಗಳನ್ನು ಸುಡಲಾಗುತ್ತದೆ, ಎಂಬ ಅಂಕಿಅಂಶಗಳು ಅಧಿಕೃತವಾಗಿ ಲಭ್ಯವಿವೆ.  ಸಫಾಯಿ ಕರ್ಮಚಾರಿ ಆಂದೋಲನವು ಮೇ 2009 ರಲ್ಲಿ ದೆಹಲಿಯೊಂದರಲ್ಲೇ 1085 ಬರಿಗೈ ಜಾಡಮಾಲಿಗಳು ಇರುವರೆಂಬ ವಸ್ತುಸ್ಥಿತಿಯನ್ನು  ಮಾಹಿತಿ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಡೆದು ಸರ್ವೊಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು.  ಸರ್ಕಾರದ ಕಡತಗಳಲ್ಲೆ ಕಂಡು ಬರುವ ಇಂಥ ಬರ್ಬರ ಸತ್ಯಗಳನ್ನು  ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹೇಗೆ ಅಲ್ಲಗಳೆಯಲಾಗಿದೆ ಎಂಬುದು ಸೋಜಿಗವೂ, ವಿಷಾದನೀಯವೂ ಆಗಿದೆ.

ಕೇವಲ ವಿಶ್ವಸಂಸ್ಥೆಯಷ್ಟೆ ಅಲ್ಲ, ಭಾರತದ ಜಾತಿಯಾಧಾರಿತ ಭೇದವನ್ನು ಖಂಡಿಸಿ ಯೂರೋಪು ಒಕ್ಕೂಟವೂ ಠರಾವು ಪಾಸು ಮಾಡಿದೆ.  ಯೂರೋಪು ಸಂಸದೀಯ ಮಾನವ ಹಕ್ಕು 2000, 2002, 2003 ಮತ್ತು 2005ರ ವರದಿಗಳಲ್ಲಿ ಜಾತಿಭೇದದ ಕುರಿತು, ದಲಿತರ ಸ್ಥಿತಿಗತಿ ಕುರಿತು ಉಲ್ಲೇಖಗಳಿವೆ.  ಈ ವರದಿಗಳು ವ್ಯಾಪಕವಾಗಿ ವಿತರಿಸಲ್ಪಡುತ್ತವೆ.  ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಷ್ಟೆ ಅಲ್ಲದೆ ಯೂರೋಪು ಸದಸ್ಯ ರಾಷ್ಟ್ರಗಳು, ಐಎಲ್ಓ, ಯುನಿಸೆಫ್,  ಮುಂತಾದ ಸಂಸ್ಥೆಗಳನ್ನು ವರದಿ ತಲುಪುತ್ತದೆ.  ಆದರೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ದಲಿತರ ದಮನವನ್ನು  ಮರೆಮಾಚಲು ಭಾರತ ಪ್ರಯತ್ನಿಸುತ್ತಲೇ ಇದೆ.

ಭಾರತದ ಅಲಿಖಿತ ಸಂವಿಧಾನ – ಜಾತಿ ಪದ್ಧತಿ :

ಉತ್ತರ ಭಾರತದ ಹಳ್ಳಿಗಳಲ್ಲಿ ಕೆಲವು ಅಂತರ್ಜಾತೀಯ  ವಿವಾಹಗಳು ಇಂದಿಗೂ ಕೊಲೆಯಲ್ಲಿ ಪರ್ಯವಸಾನವಾಗುತ್ತವೆ. ಅಸಮಾನತೆಯೆ ತತ್ವವಾಗಿರುವ ಜಾತಿ ಪದ್ಧತಿ ಮತ್ತು ಸಮಾನತೆ ಹಾಗೂ ಭ್ರಾತೃತ್ವವನ್ನು ಬೋಧಿಸುವ  ಪ್ರಜಾಪ್ರಭುತ್ವ ಪರಸ್ಪರ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ ವಿರೋಧೀ ಭಾವಗಳು. ಆದ್ದರಿಂದ ಭಾರತದ ಆತ್ಮ ಅಲಿಖಿತ ಸಂವಿಧಾನವಾಗಿರುವ ಜಾತಿಪದ್ದತಿಯೆಂದರೆ ತಪ್ಪಾಗಲಾರದು. ದುರದೃಷ್ಟವಶಾತ್ ಭಾರತದ ಒಳಗಡೆ ಚರ್ಚೆಗೊಳಗಾಗುವ ವಿಷಯ ಜಾತಿಪದ್ಧತಿ ಒಡಲುಗೊಂಡಿರುವ ಅಸ್ಪೃಶ್ಯತೆಯನ್ನು ಕುರಿತು ಮಾತ್ರ. ಇದು ಮಾನವತೆಗೆ ಅಂಟಿಕೊಂಡ ದೊಡ್ಡ ಕಳಂಕ ಎಂದು ವರ್ಣಿಸಿ ಎಲ್ಲ ಜಾತಿಯವರು ಖಂಡಿಸಲು ಇಚ್ಛಿಸುತ್ತಾರೆ. ಆದರೆ ಹುಟ್ಟುತ್ತಲೇ ಮೇಲು ಕೀಳನ್ನು ನಿರ್ಧರಿಸಿ ಬಿಡುವ ಜಾತಿಯೆ ಮಾನವತೆಗೆ ದೊಡ್ಡ ಕಳಂಕ ಎಂದು ಖಂಡಿಸಲು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವರ್ಣಾಶ್ರಮಕ್ಕೆ ಸಿಕ್ಕ ಗಾಂಧೀಜಿಯವರ ಬೆಂಬಲ ಜಾತಿಪದ್ಧತಿಗೂ ಪರೋಕ್ಷವಾಗಿ ಸಿಕ್ಕಿತೆಂಬ ನಂಬಿಕೆ. ಜಾತಿ ಪದ್ಧತಿಯ ಎಲ್ಲಾ ಅವಘಡಗಳನ್ನು ಭಾರತ ದಿನನಿತ್ಯ ಅನುಭವಿಸುತ್ತಲೇ ಸಾಮಾಜಿಕವಾಗಿ, ರಾಜಕೀಯವಾಗಿ ಕುಬ್ಜವಾಗಿದೆ. ದೇಶ ಆರ್ಥಿಕವಾಗಿ ಬಲಿಷ್ಠವಾಗಿದೆ ಎಂದು ಯಾವ ಸಮಾಜವಾದಿಯೂ ಹೇಳಲಾರ. ಅಂಬೇಡ್ಕರರನ್ನು ಹೊರತುಪಡಿಸಿ ಜಾತಿ ಪದ್ಧತಿಯ ಅನಿಷ್ಟಗಳನ್ನು ತಳ ಸ್ಪರ್ಶಿಯಾಗಿ ಅಭ್ಯಸಿಸಿದವರು ರಾಮಮನೋಹರ ಲೋಹಿಯಾ. ಜಾತಿ ಪದ್ಧತಿಯಿಂದ ಆಡಳಿತ ರಂಗ ಕಲುಷಿತಗೊಳ್ಳುತ್ತಿದೆ ಎಂಬ ಒಳ ನೋಟವಿದ್ದ ಲೋಹಿಯಾ ‘ಶೂದ್ರ ದ್ವಿಜರ ನಡುವೆ ಮದುವೆಯಾಗುವುದು ಆಡಳಿತ ರಂಗ, ಸಶಸ್ತ್ರ ಪಡೆಗಳ ನೇಮಕಾತಿಗೆ ಉಳಿದವುಗಳೊಂದಿಗೆ ಒಂದು ಅರ್ಹತೆಯೆಂದೂ, ಜೊತೆಗೂಡಿ ಊಟ ಮಾಡಲು ನಿರಾಕರಿಸುವುದನ್ನು ಒಂದು ಅನರ್ಹತೆಯೆಂದೂ ಕಟ್ಟಳೆಯಾದ ದಿನವೇ ಜಾತಿ ವಿರುದ್ಧ ಪ್ರಾಮಾಣಿಕ ಹೋರಾಟ ಪ್ರಾರಂಭವಾಗುತ್ತದೆ. ಆ ದಿನ ಇನ್ನೂ ಬರಬೇಕಿದೆ’ ಎನ್ನುತ್ತಾರೆ.

ಜಾತಿ ಶ್ರಮವನ್ನು ಮಾತ್ರ ವಿಭಜಿಸುವುದಿಲ್ಲ ಶ್ರಮಿಕರನ್ನೂ ವಿಭಜಿಸುತ್ತದೆ ಎಂದು ಡಾ.ಅಂಬೇಡ್ಕರ್ ಹೇಳುತ್ತಾರೆ. ಇದು ಅಕ್ಷರಷಹಃ ಸತ್ಯ. ವಿಭಜಿತ ಜಾತಿಗಳು ತಮ್ಮದೇ ಗೋಡೆಗಳನ್ನು ನಿರ್ಮಿಸಿಕೊಂಡು ಕೂಪ ಮಂಡೂಕಗಳಾಗಿವೆ. ಹಳ್ಳಿಗಳಲ್ಲಿ ಇನ್ನೂ ಒಂದು ಜಾತಿಯ ಜೀವನ ಪದ್ಧತಿ ಇನ್ನೊಂದು ಜಾತಿಗೆ ಅಪರಿಚಿತವಾಗಿದೆ. ಸಮಾಜ ನಿರ್ಮಾಣ ಸಮರೂಪವಾಗಿರಲು ಇದು ಅಡಚಣೆಯಾಗುತ್ತದೆ. ಕೊಡು ಕೊಳ್ಳುವಿಕೆ ಇಲ್ಲದೆ ಸಂಸ್ಕೃತಿ ಬೆಳೆಯಲಾರದು. ಕುರುಬ ಜಾತಿಯ ಮಿತ್ರರೊಬ್ಬರು ‘ನಾವು ಸ್ಪೃಶ್ಯ ದಲಿತರು’ ಎಂದು ಹೇಳುತ್ತಿದ್ದುದು ನೆನಪಿಗೆ ಬರುತ್ತದೆ. ಊರಿನ ಜಾತ್ರೆಯಲ್ಲಿ ಪಲ್ಲಕ್ಕಿ ಹೊರಲು ಇವರು ಬೇಕಾಗಿದ್ದರಂತೆ. ಡೊಳ್ಳು ಬಾರಿಸಲು, ವಾದ್ಯ ಊದಲು, ಪಂಜು ಹಿಡಿಯಲು, ಹಲಗೆ ಬಡಿಯಲು ಒಂದೊಂದು ಜಾತಿಗಳಿವೆ.   ದೇಗುಲ, ಮಠ ಯಾವುದೇ ಆದರೂ ಕೈ ಸೇವೆಗಳ ಅಗತ್ಯವಿರುವುದರಿಂದ ಸ್ಪೃಶ್ಯ ಕೆಳ ಜಾತಿಗಳ ಅವಶ್ಯಕತೆಯಿದೆ. ಶೋಷಣೆಯೇ ಜಾತಿ ಪದ್ಧತಿಯ ಜೀವಾಳ. ಸಾಮಾಜಿಕ ಅಸಮಾನತೆಯಿಂದ ಅವಮಾನವನ್ನೂ ಆರ್ಥಿಕ ಅಸಮಾನತೆಯಿಂದ ಹಸಿವನ್ನೂ ಕೆಳಜಾತಿಗಳು ಅನುಭವಿಸುತ್ತಿವೆ.

ಪ್ರತಿಯೊಂದು ಜಾತಿಗೂ ಒಂದು ಅಘೋಷಿತ ಸಾರ್ವಜನಿಕ ನಡವಳಿಕೆಯಿದೆ. ಅದು ಅನೀತಿಯದಾಗಿದೆ. ಜಾತಿಯೆ ಅನೀತಿಯ ಕಟ್ಟಳೆಯಾಗಿರುವಾಗ ಅದರ ಪರಿಣಾಮಗಳು ಅನೀತಿಯುತವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ರಾಷ್ಟ್ರಾಧ್ಯಕ್ಷರೊಬ್ಬರು ಕಾಶಿಯಲ್ಲಿ ಸಾರ್ವಜನಿಕವಾಗಿ 200 ಜನ ಬ್ರಾಹ್ಮಣರ ಪಾದಗಳನ್ನು ತೊಳೆದರು. ಅದನ್ನು ಲೋಹಿಯಾ ಚಿತ್ತಭ್ರಮೆ, ಅಸಭ್ಯತನ ಎಂದು ಬಹುವಾಗಿ ಖಂಡಿಸಿದರು, ಆದರೆ ನೆಹರೂ ಅದನ್ನು ಸಮರ್ಥಿಸಿಕೊಂಡರು, ಇನ್ನೊಬ್ಬ ರಾಷ್ಟ್ರಪತಿಗಳು ತಿರುಪತಿಯಲ್ಲಿ ತಲೆಬೋಳಿಸಿಕೊಂಡರು. ಈಗ ಮಂತ್ರಿಗಳು ತಮ್ಮ ಚೇಂಬರಿನೊಳಗೆ ಹೋಮ, ಹವನ ಮಾಡಿಸುತ್ತಾರೆ. ಕೆಳಜಾತಿಗಳು ಮಾರಮ್ಮನಿಗೆ ಕೊಡುವ ಕೋಣನ ಬಲಿಗೆ ಅವರದೇ ಆದ ಸಮರ್ಥನೆಗಳಿರುತ್ತವೆ. ಇವೆಲ್ಲವೂ ಸಂವಿಧಾನದ ಜಾತ್ಯತೀತ ನಿಲುವಿಗೆ ಒಗ್ಗುವುದಿಲ್ಲವಾದರೂ ಧರ್ಮದ ಕವಚ ತೊಟ್ಟುಕೊಳ್ಳುವುದರಿಂದ ಅಧಿಕಾರಸ್ಥರು ಖಂಡಿಸಲಾರರು. ಇಂದಿಗೂ ಸಹ ಆಡಳಿತದ ಎಲ್ಲ ರಂಗಗಳಲ್ಲಿಯೂ ಇಂಥ ಅಪಸರಣಗಳನ್ನು (aberrations) ನೋಡಬಹುದು. ಒಂದು ಕಛೇರಿಯಲ್ಲಿ ಶುಕ್ರವಾರದ ಪೂಜೆಯನ್ನು ಮಾಡುವ  ನೌಕರ ಬ್ರಾಹ್ಮಣನೇ ಯಾಕಾಗಬೇಕು? ಇಂಥ ಅಲಿಖಿತ ಕಟ್ಟಳೆಗಳನ್ನು ವಿಸ್ತರಿಸಿಕೊಂಡು ಹೋಗಲು ಲೇಖನದ ಮಿತಿಯೊಳಗೆ ಸಾಧ್ಯವಾಗಲಾರದು. ನನ್ನ ಜಾತಿಯವರು ಹೆಚ್ಚು ಸಮಾನರು ಎಂಬುದೇ ಜಾತಿಪದ್ಧತಿಯ ಧೋರಣೆ. ಇಲ್ಲದಿದ್ದರೆ ಒಬ್ಬ ಕುಲಪತಿ ತನ್ನ ಆಧಿಕಾರಾವಧಿಯಲ್ಲಿ ತನ್ನ ಜಾತಿಯ ಸಿಬ್ಬಂದಿಯನ್ನೆ ಹೆಚ್ಚು ನೇಮಕ ಮಾಡುವುದು, ಒಬ್ಬ ಪ್ರಾಧ್ಯಾಪಕ ತನ್ನ ಜಾತಿಯ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡುವುದು ಸಾಧ್ಯವಾಗುವುದಿಲ್ಲ. ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಒಬ್ಬ ಕಡು ಭ್ರಷ್ಟನೂ ಸಹ ಕಡತ ತನ್ನ ಜಾತಿಯವನಿಗೆ ಸಂಬಂಧಿಸಿದ್ದರೆ ಅದನ್ನು ಸ್ವಲ್ಪ ಅನುಕಂಪದಿಂದಲೇ ನೋಡುತ್ತಾನೆ. ಪಕ್ಷಪಾತ ನೀತಿಗೆ ಬಲಿಷ್ಠ, ದುರ್ಬಲ ಜಾತಿ ಎಂಬುವುದಿಲ್ಲ. ಕುರ್ಚಿ ದಕ್ಕಿದಾಗ ಬಲಿಷ್ಠ ದುರ್ಬಲನ ವಿರುದ್ಧವೂ, ದುರ್ಬಲ ಬಲಿಷ್ಠನ ವಿರದ್ಧವೂ ಸೇಡು ತೀರಿಸಿಕೊಳ್ಳುತ್ತಿರುತ್ತಾನೆ.

ರಾಜಕೀಯ ವ್ಯವಸ್ಥೆಯಲ್ಲಿ ‘ನನ್ನ ಜಾತಿಯವನು ಗೆಲ್ಲಲಿ’ ಎಂಬ ವಾಂಛೆ ಬಲಿಷ್ಠ ಜಾತಿಗಳ ಒಗ್ಗೂಡುವಿಕೆಗೆ ಕಾರಣವಾಗಿದೆ. ಅದೊಂದು ಸಾಂಕೇತಿಕ ಒಗ್ಗೂಡುವಿಕೆ ಅಷ್ಟೆ. ಆ ಕಾರಣದಿಂದಾಗಿ ಆ ಜಾತಿಯ ಎಲ್ಲರೂ ಫಲಾನುಭವಿಗಳಾಗಲು ಸಾಧ್ಯವಿಲ್ಲ ಅಥವಾ ಕನಿಷ್ಠ ಪ್ರತಿಫಲ ಪಡೆಯಲು (ರುಸುವತ್ತು ಹೊರತು) ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ ಪ್ರತಿಭೆ (ಮೆರಿಟ್) ಯನ್ನು ಮೆಟ್ಟಿ ಜಾತಿ ಸಮೂಹ  ತನ್ನ ನಾಯಕನನ್ನು ಆರಿಸುತ್ತದೆ. ಶತಮಾನಗಳಿಂದ ಅವಕಾಶ ವಂಚಿತ ಜಾತಿಗಳಿಗೆ ಕಾನೂನಿನ ಮೂಲಕ ನೀಡಿರುವ ಮೀಸಲಾತಿಯನ್ನು ಮೆರಿಟ್‍ನ ನೆಪವೊಡ್ಡುತ್ತಾ ವಿರೋಧಿಸುವ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪಂಡಿತರು ಜಾತಿಪದ್ಧತಿಯಿಂದ ನಿರಂತರವಾಗಿ ಹತವಾಗುತ್ತಿರುವ ಪ್ರತಿಭೆಯ ಬಗ್ಗೆ ಮಾತಾಡುವುದಿಲ್ಲ, ಜಾಣ  ಮೌನವಹಿಸುತ್ತಾರೆ.  ಪ್ರಾಯಶಃ ಇಂದು ಎಲ್ಲ ಪಕ್ಷಗಳು ವಂಶಾಡಳಿತಕ್ಕೆ ಜೋತು ಬಿದ್ದಿರುವುದು ಜಾತಿಪದ್ಧತಿಯಲ್ಲಿ ಪೂರ್ವಗ್ರಹವಿಲ್ಲದ(ದೆ) ಒಬ್ಬ ನಿಜ ನಾಯಕನನ್ನು ಆರಿಸಲು ಸಾಧ್ಯವಾಗದಿರುವ ಕಾರಣದಿಂದ ಎಂದು ಕಾಣುತ್ತದೆ.

ಇಂಥ ವ್ಯವಸ್ಥೆಯಲ್ಲಿ ಬಹು ಸಂಖ್ಯಾತರಾಗಿರುವ ಅಸಂಘಟಿತ ಸಣ್ಣ ಜಾತಿಗಳಿಗೆ ಆಗುತ್ತಿರುವ ಅನ್ಯಾಯ ಹೇಳತೀರದು. ಜಾತಿ ಲೆಕ್ಕಾಚಾರದಂತೆಯೆ ರಾಜಕೀಯ ನೇತೃತ್ವ ಪಡೆಯುತ್ತಿರುವ ಈ ದೇಶದಲ್ಲಿ ಅವರು ಹೆಚ್ಚೆಂದರೆ ಕೆಳಮಧ್ಯಮ ವರ್ಗದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಸ್ವಾತಂತ್ರ್ಯಾನಂತರದ 62 ವರ್ಷಗಳಲ್ಲಿ ದಲಿತ, ಹಿಂದುಳಿದ ಜಾತಿಗಳು ಬಂಡವಾಳ ಶಾಹಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ಸಾಧ್ಯವಾಗದಿರುವುದಕ್ಕೆ ಕಾರಣ ಜಾತಿ ಪದ್ಧತಿಯೆಂಬ  ದುರಂತ ವ್ಯವಸ್ಥೆ. ಈ ಭಸ್ಮಾಸುರ ಸ್ವರೂಪೀ ಜಾತಿಯ ಸೃಷ್ಟಿಗೆ ಕಾರಣವಾದ ‘ವೈದಿಕತೆ’ ಇಂದು ಎಷ್ಟು ಅಸಹಾಯಕವಾಗಿದೆ ಎಂದರೆ ತನ್ನನ್ನು ಓಲೈಸಿ ಬಂದ ಕಾರಣಗಳಿಗೆ ಬೇಡಿದ ವರವನ್ನು ದಯಪಾಲಿಸಿ ತಾನೇ ಪೇಚಿಗೆ ಸಿಕ್ಕಿ ಪರದಾಡುವ ಪರಶಿವನಂತಾಗಿದೆ.

ಕೇವಲ ಆಂತರಿಕ ಸಮಸ್ಯೆಗಳೆ? :

ಭಾರತ ಸರ್ಕಾರವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಗಳನ್ನು  ಕೇವಲ ಆಂತರಿಕ ಸಮಸ್ಯಗಳೆಂದು ತಿಳಿದರೆ ಸಾಲದು.  ಈ ಸಮಸ್ಯೆಗಳು ಜನರ ಮನದಾಳದಲ್ಲಿ ಸ್ಥಾಪಿತವಾಗಿರುವುದು ಶತಶತಮಾನಗಳಿಂದ ಸ್ವಾರ್ಥ ಹಿತಾಸಕ್ತಿಗಳು ಭಿತ್ತಿದ ಮೌಢ್ಯದಿಂದ  ಮತ್ತು ಅದು ಗಟ್ಟಿಗೊಳ್ಳುತ್ತಿರುವುದು ಧಾರ್ಮಿಕ ಒತ್ತಾಸೆಯಿಂದ.  ಇದು ದೇಶಕ್ಕೂ ಮತ್ತು ಧರ್ಮಕ್ಕೂ ಒಂದು ಕಳಂಕವಾಗಿರುವುದು ಸತ್ಯ. ಆದ್ದರಿಂದ ಅದನ್ನು ತೊಳೆದುಕೊಳ್ಳುವುದಕ್ಕೆ ದೇಶವು ಮತ್ತು ಧರ್ಮವು ಕಟು ಬದ್ಧವಾಗಬೇಕು.  ಅದಕ್ಕಾಗಿ ವಿಶ್ವಸಂಸ್ಥೆಯಂಥ ಹೊರಗಿನ ಸ್ವಾಯತ್ತ ಸಂಸ್ಥೆಗಳ ಸಹಾಯ ಪಡೆಯುವುದಕ್ಕೆ ಹಿಂಜರಿಯಬಾರದು.  ರೋಗಿಯೊಬ್ಬನು ವೈದ್ಯನ ಮುಂದೆ ತನ್ನ ರೋಗನ್ನು ಹೇಳಿಕೊಳ್ಳಲೇಬೇಕು. ಆಗಲೇ ಚಿಕಿತ್ಸೆ ಸಾಧ್ಯ ಹಾಗೂ ಸುಲಭ.  ಸಂಕೋಚಪಟ್ಟುಕೊಂಡರೆ ರೋಗವು ಉಲ್ಬಣಿಸುತ್ತದೆ, ರೋಗಿಯನ್ನೆ ತಿನ್ನುತ್ತದೆ.  ವಿಶ್ವಸಂಸ್ಥೆ ಇರುವುದೇ ಜಾಗತಿಕ ನೆಲೆಯಲ್ಲಿ ಸಮಸ್ಯೆಗಳನ್ನು  ಎತ್ತಿಕೊಂಡು ನೊಂದ ದೇಶಗಳಿಗೆ ಸಹಾಯ ಹಸ್ತ ಚಾಚುವುದು.  ಮಾನವನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಭಾರತದಲ್ಲಾಗುತ್ತಿರುವ ಕುಲಸಂಬಂಧೀ (ethnic) ಒಳ ಹಿಂಸೆಗಳು ಅಪಾರ ಮತ್ತು ಅನನ್ಯ. ವಂಶ ಪಾರಂಪರ್ಯವಾಗಿ ಕೆಲವು ಕೆಳಜಾತಿಗಳು  ಮಾಡುತ್ತಿರುವ ಕೆಲಸಗಳು ಖಂಡನೀಯವು ಮತ್ತು ಅಮಾನವೀಯವೂ ಆಗಿವೆ.

ದೇಶದಾದ್ಯಂತ ಇಂದಿಗೂ ಬರಿಗೈಯಲ್ಲಿ ಕಕ್ಕಸು ತೊಳೆಯುವ, ತಲೆಯ ಮೇಲೆ ಮಲ ಹೊರುವವರ ಸಂಖ್ಯೆ 3.40 ಲಕ್ಷಕ್ಕೂ ಅಧಿಕವಾಗಿದೆ ಎಂದು ಹೇಳಲಾಗಿದೆ.  ದೇಶದ ರಾಜಧಾನಿಯೂ ಸೇರಿದಂತೆ ಮುಂದುವರೆದ ಅನೇಕ ರಾಜ್ಯಗಳಲ್ಲಿ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸತ್ತ ದನವನ್ನು  ಸುಲಿಯುವುದಕ್ಕೆ, ಚರ್ಮ  ಹದ ಮಾಡುವುದಕ್ಕೆ, ಚಪ್ಪಲಿ ಹೊಲಿಯುವುದಕ್ಕೆ ಒಂದೊಂದು ಜಾತಿಗಳಿರುವುದು ಅವು ಇನ್ನೂ ಅನೂಚಾನವಾಗಿ ಮುಂದುವರೆದಿರುವುದು ಗುಟ್ಟಿನ ವಿಷಯಗಳಲ್ಲ.  ಇಂಡಿಯಾದ ಸಂಸತ್ತು ಮತ್ತು ವಿಧಾನ ಸಭೆಗಳು ಕಣ್ಣುಮುಚ್ಚಿ ಬಿಡುವುದರೊಳಗೆ ಮಾನವ ಹಕ್ಕುಗಳನ್ನು ಕುರಿತ ಮಸೂದೆಗಳನ್ನು ಮಂಡಿಸಿ ಪಾಸುಮಾಡಿ ಕಾನೂನು ಹೊರಡಿಸುತ್ತವೆ.  ಆದರೆ ಅವು ಜಾರಿಯಾಗುವ ಸಾಧ್ಯತೆಗಳು ಕಡಿಮೆ.  ಮಾಹಿತಿ ತಂತ್ರಜ್ಞಾನದ ಮೂಲಕ ಅತಿ ಶೀಘ್ರವಾಗಿ ಅಂಗೈ ಪರದೆಯಲ್ಲಿ ಮೂಡುವ ಸತ್ಯ ದರ್ಶನಗಳನ್ನು ಅಲ್ಲಗಳೆಯಲು ಇನ್ನೂ ಸಾಧ್ಯವಿಲ್ಲ.  ಆದ್ದರಿಂದ ಸಂಕೋಚಗಳನ್ನು, ಮುಜುಗರಗಳನ್ನು ಬದಿಗಿಟ್ಟು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳಿಂದ ನಲುಗುತ್ತಿರುವ ಭಾರತ ಠರಾವನ್ನು ಬೆಂಲಿಸುವ ಜಾಣ್ಮೆ ತೋರಬೇಕು. ನೇಪಾಳದಂತಹ ನೆರೆರಾಜ್ಯ ಸಮಿತಿಯ ಠರಾವನ್ನು ಬೆಂಬಲಿಸಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಬೆಂಬಲ ನೀಡದಿರುವುದಕ್ಕೆ ಕಾರಣ ರಹಿತವಾಗಿರುವ ಭಾರತ ವಿಶ್ವದ ಇತರ ರಾಷ್ಟ್ರಗಳ ಎದುರು ತಲೆ ತಗ್ಗಿಸುವಂತಾಗುತ್ತದೆ.  ಆದ್ದರಿಂದ ಈಗ ಒತ್ತಡ ಹೆಚ್ಚಾಗಿದೆ.  ಜಾತಿ ಪದ್ಧದತಿಯ ಮೂಲ ಹಿಂದೂ ಧರ್ಮವೇ ಎಂಬುದು ಕಹಿಯಾದರೂ ಸತ್ಯ.  ಒಂದು ಜಾತಿ ಇನ್ನೊಂದು ಜಾತಿಯ ಮೇಲೆ ಅಥವಾ ಕೆಳಗೆ ಇರುವುದರಿಂದ ಭೇದ ನೀತಿಯನ್ನು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ವಿಶ್ವಸಂಸ್ಥೆಯು  ಜನಾಂಗೀಯ ಭೇದ ವಿನಾಶ ಸಮಿತಿಯನ್ನು ರಚಿಸಿರುವ ಉದ್ದೇಶವೇ ತಾರತಮ್ಯ ನೀತಿಯನ್ನು ಗುರುತಿಸಿ ನಿರ್ಮೂಲನ ಮಾಡುವ  ಕಾರಣವಾಗಿರುವುದರಿಂದ ಇದನ್ನು ಕೈಬಿಡಲು ಅಥವಾ ಮರೆಮಾಚಲು ಸಹ ಸಮಿತಿಗೆ ಸಾಧ್ಯವಾಗುವುದಿಲ್ಲ.

ಸಮಾನತೆ ಇಲ್ಲದೆಡೆಯಲ್ಲಿ ಸಮಾನ ಅವಕಾಶಗಳು ಇರಲಾರವು.  ಹುಟ್ಟಿನ ಮೂಲದ ಆಧಾರದ ಮೇಲೆ ಸಮಾನ ಅವಕಾಶಗಳಿಂದ ವಂಚಿತರಾದವರು ಮಾನವ ಹಕ್ಕುಗಳ ವಂಚಿತರು ಅಷ್ಟೇ ಅಲ್ಲ, ದೌರ್ಜನ್ಯಕ್ಕೆ ಒಳಗಾದವರೂ ಆಗಿರುತ್ತಾರೆ.  ಆದ್ದರಿಂದ ವಿಶ್ವಸಂಸ್ಥೆಯ ನಿಲುವನ್ನು ಒಪ್ಪಲೇ ಬೇಕಾಗುತ್ತದೆ.  ಜಾತಿಭೇದ ನೀತಿಯನ್ನು ಖಂಡಿಸಲೇಬೇಕಾಗುತ್ತದೆ.  ಇದನ್ನು ಭಾರತ ಅರಿಯಬೇಕಾಗಿದೆ. 2001 ರಲ್ಲಿ ದರ್ಬಾನ್‍ನಲ್ಲಿ ನಡೆದ ಜನಾಂಗೀಯ ಮತ್ತು ಇತರ ಭೇದ ನೀತಿ ಕುರಿತ ವಿಶ್ವ ಸಮ್ಮೇಳನದಲ್ಲಿ  ಶ್ರುತಪಡಿಸಿದ  ಡರ್ಬಾನ್  ಪ್ರಕಟಣೆಯ ಕಾರ್ಯಸೂಚಿಯಲ್ಲಿದು ಸ್ಪಷ್ಟವಾಗಿದೆ. 2001 ರ ಡರ್ಬಾನ್  ಸಮ್ಮೇಳನದಲ್ಲಿ ಜಾತಿ ತಾರತಮ್ಯವನ್ನು ಚರ್ಚೆಗೆ ತರಲು ಸಾಧ್ಯವಾಗಲಿಲ್ಲ.  ಆದರೂ ಅದು  ದಲಿತರು ನಡೆಸಿದ ಸಂಘಟಿತ ಒತ್ತಡ ತಂತ್ರದಿಂದ  ಅನುವಂಶೀಯ ವೃತ್ತಿ ತಾರತಮ್ಯ ಎಂಬ ಹೆಸರಿನಲ್ಲಿ ತುಸು ಚರ್ಚೆಗೊಳಾಯಿತು. ಈಗ ಚರ್ಚೆ ಗೆತ್ತುಕೊಂಡಿರುವುದು ಅದರ ಅನುಸರಣಾ ವರದಿ.

ಶೌಚಾಲಯದ ಮುರುಕು ಗೋಡೆಯ ಇಟ್ಟಿಗೆಯ ಚೂರು:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿರುವ ನವಿ ಪಿಳ್ಳೆ, ತಮಿಳು ಮೂಲದ ದಕ್ಷಿಣ ಆಫ್ರಿಕಾದವರು. ಅವರಿಗೆ ಜಾತಿಪದ್ಧತಿಯ ಉಪದ್ರವಗಳು ಮತ್ತು ದಕ್ಷಿಣ ಏಷಿಯಾ ದೇಶಗಳ ಸಾಮಾಜಿಕ ನೀತಿ ಚೆನ್ನಾಗಿ ತಿಳಿದಿದೆ. ಅವರು ಠರಾವಿಗೆ ಬೆಂಬಲ ನೀಡಿದ  ನೇಪಾಳದ ವಿದೇಶಾಂಗ ಸಚಿವರನ್ನು ಅಭಿನಂದಿಸಿ ಇದು ಜಾತಿಪದ್ಧತಿಯ ಸಮಸ್ಯೆಗಳನ್ನು ಸ್ವತಃ  ಹೊತ್ತಿರುವ ದೇಶ ಇಟ್ಟ ಮಹತ್ವದ ಹೆಜ್ಜೆ, ಇದನ್ನು ಇತರರು ಪಾಲಿಸಬೇಕು ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಅಂತಃ ಸತ್ವವೆಂದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆ ಮತ್ತು  ಸಮಾನ ಅವಕಾಶಗಳು ಇರುವಂತೆ ನೋಡಿಕೊಳ್ಳುವುದು. ಜಾತಿಪದ್ಧತಿ ಈ ಮೂಲ ಹಕ್ಕುಗಳನ್ನೆ ನಿರಾಕರಿಸುತ್ತದೆ. ಆದ್ದರಿಂದ ಅದು ಮಾನವ ಹಕ್ಕಿನ ಉಲ್ಲಂಘನೆಯ ಪರಿಧಿಯೊಳಗೆ ಬರುತ್ತದೆ. ವಿಶ್ವಸಂಸ್ಥೆಯ ಜನಾಂಗೀಯ ಭೇದ ವಿನಾಶ ಸಮಿತಿ ತೆಗೆದುಕೊಂಡಿರುವ ನಿಲುವು ಸರಿಯಾಗಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ನವಿ ಪಿಳ್ಳೆ ‘ಜಾತಿ ಎಂಬ ನಾಚಿಕೆಗೇಡು ಪರಿಕಲ್ಪನೆಯನ್ನು ನಾಶ ಮಾಡುವ ಕಾಲ ಕೂಡಿಬಂದಿದೆ’ ಎಂದು ಆವೇಶ ಭರಿತರಾಗಿ ಹೇಳುತ್ತಾರೆ. ಇದಕ್ಕೆ ಕಾರಣ ಜಾತಿಯಿಂದ ನೊಂದ ಕೆಲವು ಜನರು ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮುರಿದು ಬಿದ್ದ ಶೌಚಾಲಯದ ಗೋಡೆಯ ಇಟ್ಟಿಗೆಯ ಚೂರೊಂದನ್ನು ಕೊಟ್ಟರಂತೆ.  ಆ ಇಟ್ಟಿಗೆ ಚೂರು ಬರಿಗೈಯಲ್ಲಿ ಕಕ್ಕಸು ತೊಳೆಯುವ ಕೆಳಜಾತಿ ಜನರ ಜಾಗತಿಕ ಹೋರಾಟದ ಸಂಕೇತವಾಗಿ ಅವರಿಗೆ ಕಂಡಿತಂತೆ.  ಇದು ಆ ಜನ ತಾವು ಬಯಸಿ ಮಾಡುತ್ತಿರುವುದಲ್ಲ.  ಕೆಳಜಾತಿಯ ಹುಟ್ಟಿನ ಕಾರಣದಿಂದ ಮಾಡುತ್ತಿರುವುದು. ಅದನ್ನು ತಮ್ಮ  ಪೂರ್ವಜರಿಂದ ಬಳುವಳಿಯಾಗಿ  ಪಡೆದದ್ದು, ಈ ಕಾರಣಕ್ಕಾಗಿಯೆ ಜೀವನ ಪರ್ಯಂತ ‘ಮೈಲಿಗೆ’ ಅನುಭವಿಸುತ್ತಿರುವುದು ಮತ್ತು ಹೊರಗೆ ಹಾಕಲ್ಪಟ್ಟು  ಮುಟ್ಟಿಸಿಕೊಳ್ಳಬಾರದವರಾಗಿರುವುದು.

ಕಾಂಗ್ರೆಸ್‍ನ ಯುವ ನೇತಾರ ಚುನಾವಣೆಗಳ ಗೆಲುವಿನ ಶಿಲ್ಪಿ ಎಂದೇ ಖ್ಯಾತರಾಗಿರುವ  ರಾಹುಲ್ ಗಾಂಧಿ ಇತ್ತೀಚೆಗೆ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.  ಅಕ್ಟೋಬರ್ 2, ಗಾಂಧಿ ಜಯಂತಿಯಂದು ಉತ್ತರ ಪ್ರದೇಶದಲ್ಲಿ ಇಡೀ ಪಕ್ಷದ ಜನ ಪ್ರತಿನಿಧಿಗಳಿಗೆ ರಾಜ್ಯಾದಾದ್ಯಂತ ಹಳ್ಳಿಗಳ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಲು  ಕರೆ ನೀಡಿದ್ದರು. ಅದು ವಿಫಲವಾಯಿತೆಂಬುದು ಬೇರೆ ಮಾತು.  ಆದರೆ ಅವರ ಉದ್ದೇಶ ಮತ್ತು ದಲಿತರ ಬಗೆಗೆ ತೋರುತ್ತಿರುವ ಕಳಕಳಿ ಅವರ ವೈರಿಗಳ ಪ್ರಶಂಸೆಯನ್ನು ಗಳಿಸುತ್ತಿದೆ. ಅವರೊಮ್ಮೆ ಭಾರತಕ್ಕೆ ಹಲವು ಸಲ ಭೇಡಿ ನೀಡಿದ್ದ ಇಂಗ್ಲೆಂಡಿನ ಪತ್ರಕರ್ತ ಮಿತ್ರರೊಬ್ಬರನ್ನು ಉತ್ತರ ಪ್ರದೇಶದ ಹಳ್ಳಿಯೊಂದಕ್ಕೆ ಕರೆದೊಯ್ದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಆ ಮಿತ್ರರು ಈ ಭಾರತದ ಪರಿಚಯವೇ ನನಗಿರಲಿಲ್ಲ ಎಂದು ಉದ್ಗರಿಸಿದ್ದರು! ಈ ಹೊತ್ತಿನಲ್ಲಿ ರಾಹುಲ್ ಗಾಂಧಿಯವರಿಗೆ ದಲಿತೋದ್ಧಾರದ ನೈಜ ಕಳಕಳಿ ಇದ್ದಲ್ಲಿ ವಿಶ್ವಸಂಸ್ಥೆಯ ಠರಾವನ್ನು ಬೆಂಬಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಸಂಸ್ಕೃತಿಯ ಕುರೂಪತೆಯನ್ನು ತೊಡೆದು ಹಾಕಲು ರಾಜಕೀಯ ಬೆರೆಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಜಾತಿ ಎನ್ನುವುದು ಕೇವಲ ದಲಿತರ ಸಮಸ್ಯೆಯಾಗಿ ಉಳಿದರೆ ಜಾತಿ ನಾಶವಾಗಲಾರದು. 1936 ರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‌‌‌‌‌‌ರವರು ಲಾಹೋರ್‌‌‌‌‌‌‌ನಲ್ಲಿ  ‘ಜಾತ್ ಪಾತ್ ತೋಡಕ್ ಸಮಿತಿ’ ಏರ್ಪಡಿಸಿದ್ದ ಸಭೆಗಾಗಿ ಸಿದ್ಧಪಡಿಸಿದ  ಜಾತಿ ವಿನಾಶ ಕುರಿತ ಐತಿಹಾಸಿಕ ಭಾಷಣ ಹಿಂದೂ ಮುಖಂಡರುಗಳನ್ನು ತಲ್ಲಣಗೊಳಿಸಿತು. ಅದು ದಲಿತೇತರ ಹಿಂದುಗಳನ್ನು  ಕುರಿತು ಬರೆದ ಭಾಷಣ.  ಗಾಂಧೀಜಿಯವರು ಸಹ ಜಾತಿ ಭೇದವನ್ನು ಅಳಿಸಲು ಮೇಲುಜಾತಿಯ ಮನಸ್ಸುಗಳ ಬದಲಾವಣೆಯನ್ನು ಬಯಸಿದ್ದರು.  ಆದ್ದರಿಂದ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿ ಜನರವರೆಗೆ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆಯ ನಾಶ ಸಾಧ್ಯವಾಗಬಹುದು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ : ವರ್ತಮಾನ