Gallery

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !

-ಸರೋವರ್ ಬೆಂಕೀಕೆರೆ.

ಭೂಮಿಯಲ್ಲಿ ಎಷ್ಟೋ ಜೀವಿಗಳು ಬದುಕಿವೆ, ಎಲ್ಲ ಪ್ರಾಣಿ ಪಕ್ಷಿಗಳು ಜಾತಿ, ಮತ, ಧರ್ಮ ಎನ್ನದೆ ಸಂತೋಷದಿಂದ ಬದುಕುತ್ತಿವೆ, ಮೊನ್ನೆ ಪತ್ರಿಕೆಯಲ್ಲಿ ಕಂಡೆ ಹಸುವು ತನ್ನ ಕರು ಅಲ್ಲದ, ತನ್ನ ಜಾತಿಗೆ ಸೇರದ ಕೊಳಚೆಯಲ್ಲಿ ವಾಸಿಸುವ ಹಂದಿಮರಿಯೊಂದಕ್ಕೆ ಹಾಲುಣಿಸಿ ಮಾನವೀಯತೆ ಮೆರೆಯಿತೆಂದು ! ನನ್ನಲ್ಲಿ ಪ್ರಶ್ನೆ ಹಾಕಿಕೊಂಡೆ ಮಾನವೀಯತೆ ಹಾಗೆಂದರೆ ? ಓಹ್ ಮಾನವ ಧರ್ಮ !….. ಮಾನವ ಧರ್ಮ ಏನು ? ಹಸುವನ್ನು ದೇವರು ಎನ್ನುವ, ಹಸುವನ್ನು ಪೂಜೆ ಮಾಡುವ ಮಾನವ ಅದರ ಜಾತ್ಯತೀತ ಮನಸ್ಸನ್ನು ಅರಿಯದೆ, ಬಾಯಿ ಮಾತಲ್ಲಿ ದೇವರು ಎಂದು ಸ್ವತಃ ಜಾತಿಯನ್ನು ಕಟ್ಟುತ್ತಾನೆ, ದೇವಸ್ಥಾನದಲ್ಲೆ ಪಂಕ್ತಿ ಭೇದ ಮಾಡುತ್ತಾನೆ, ಮನುಷ್ಯನನ್ನೆ ಅನ್ಯ ಜಾತಿಯ ಪ್ರಾಣಿಯಂತೆ ಕಾಣುತ್ತಾನೆ, ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ಹೀಗೆ……, ಹಾಗಾದರೆ ಇದೇನಾ ಮಾನವೀಯತೆ ಆ ಹಸುವು ಹಂದಿ ಮರಿಗೆ ಹಾಲುಣಿಸಿ ಮೇರೆದ ಮಾನವೀಯತೆ ಅಂದರೆ ಇದೇನಾ?

ಮತ್ತೆ ಅದೇ ಪತ್ರಿಕೆಗಳಲ್ಲಿ ಲೇಖನಗಳು ಓದಿದೆ ; ಡೆಲ್ಲಿಯಲ್ಲಿ ಹುಡುಗಿಯ ಮೇಲೆ ಅತ್ಯಾಚಾರವೆಸಗಿ ಪ್ರಾಣಿಯಂತೆ ವರ್ತಿಸಿದ್ದಾರೆ ಎಂದು ! ಆದರೆ ವಿಚಿತ್ರ ನೋಡಿ, ಪ್ರಾಣಿ ಮಾನವೀಯತೆ ಮೆರೆಯುತ್ತದೆ ಮತ್ತು ಮನುಷ್ಯ ಪ್ರಾಣಿಯಂತೆ ವರ್ತಿಸುತ್ತಾನಂತೆ ? ನಿಜಕ್ಕೂ ಈ ಮಾನವೀಯತೆ ಅನ್ನುವ ಪದವೇ ಬದಲಾಗಬೇಕು ಎಂದು ನನ್ನಲ್ಲಿ ಅನಿಸುತ್ತಿದೆ.

ಹೀಗೆ ನನಗೊಂದು ಚಿಕ್ಕ ಕಥೆ ನೆನಪಾಗುತ್ತದೆ, ಒಂದು ಹೆಣ್ಣು ನಾಯಿ ಮಧ್ಯ ರಾತ್ರಿ ಹಾದಿಯಲ್ಲಿ ಹೋಗುವಾಗ 5 ಗಂಡು ನಾಯಿ ಆ ಹೆಣ್ಣು ನಾಯಿಯನ್ನು ಬೆನ್ನ ಹತ್ತಿದವು, ಹೆಣ್ಣು ನಾಯಿ ಭಯದಲ್ಲಿ ಓಡಲು ಶುರು ಮಾಡಿತ್ತು, ನಂತರ ಆ 5 ಗಂಡು ನಾಯಿ ಎದುರಿಗೆ ಬಂದು ಹೇಳಿದವು, “ಹೆದರಬೇಡ ನಾವು ನಾಯಿಗಳು ಮನುಷ್ಯರಲ್ಲ!” ಇದನ್ನು ಓದಿದ ನನಗೆ ನಗು ಬರುವ ಬದಲು, ಮೊದಲ ಬಾರಿಗೆ ಅಯ್ಯೋ ನಾನು ಕೂಡ ಮನುಷ್ಯನಲ್ಲವೆ ಎಂದು ಚಡಪಡಿಸಿದೆ, ಪ್ರಾಣಿ ಪಕ್ಷಿಗಳು ಎಂದು ಕೊಲೆ ಮಾಡುವುದಿಲ್ಲ, ಅತ್ಯಚಾರದ ದೂರು ಕೂಡ ಎದುರಿಸಿಲ್ಲ. ನಾನು ಪ್ರಾಣಿ ಆಗಿದ್ದರೆ ?
ಇದನ್ನೆಲ್ಲ ನೆನೆಯಲು ಒಂದು ಕಾರಣವಿದೆ, ನಮ್ಮ ಕಾಲೇಜಿನಲ್ಲಿ ನನ್ನ ನೆಚ್ಚಿನ ಶಿಕ್ಷಕರು ಇದ್ದರು, ಅವರು ನನ್ನನ್ನು ಯಾವಾಗಲೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ನನಗೂ ಅವರೆಂದರೆ ತುಂಬಾ ಗೌರವ, ಅವರ ಮನೆ ನಮ್ಮ ಹಾಸ್ಟಲ್ ಹತ್ತಿರ ಇದ್ದರಿಂದ, ಅವರ ಮನೆಗೆ ಮನೆ ಪಾಠಕ್ಕೆಂದು ಕರೆದಿದ್ದರು. ನಾನು ಮನೆ ಪಾಠಕ್ಕೆಂದು ದಿನವೂ ಹೋಗುತ್ತಿದ್ದೆ, ಒಂದು ದಿನ ಅವರ ಮನೆ ಮುಂದೆ ಕೆಲವು ಮಕ್ಕಳು ಆಟವಾಡುತ್ತಿದ್ದರು, ಅವರಲ್ಲಿ ನಮ್ಮ ಶಿಕ್ಷಕರ ಅಕ್ಕನ ಮಗೂ ಕೂಡ ಆಡುತ್ತಿತ್ತು, ಆ ಮಗುವೊಂದು ಬಿಟ್ಟು, ಉಳಿದ ಮಕ್ಕಳು ಅಲ್ಲೆ ಗಾರೆ ಕೆಲಸ ಮಾಡುವವರ ಮಕ್ಕಳಾಗಿದ್ದರು, ಅವರು ಯಾರೂ ಶಾಲೆಗೆ ಹೋಗದವರಾಗಿದ್ದರು. ನಮ್ಮ ಶಿಕ್ಷಕರ ಮನೆಯಿಂದ ಕೂಗು ಬಂದಿತು, ‘ಏ ಸೋನು ( ನಮ್ಮ ಶಿಕ್ಷಕರ ಅಕ್ಕನ ಮಗು), ನೀನು ಅವರೊಡನೆ ಆಡಬಾರದು. ಬಾ ಇಲ್ಲಿ’ ಎಂದು ಆ ಮಗುವನ್ನು ಕರೆದುಕೊಂಡು ಹೋದರು. ಆಡುತ್ತಿದ್ದ ಸೋನುವಿನ ಗಮನ ಆ ಮಕ್ಕಳ ಕಡೆಗೆ ಇತ್ತು. ಚಿಕ್ಕ ಗುಡಿಸಲಿನ ಮುಂದೆ ಆಡುತ್ತಿದ್ದ ಮಕ್ಕಳ ಕಣ್ಣು ಆ ದೊಡ್ಡ ಮನೆಯ ಕಡೆಯೇ ಹರಿದಿತ್ತು.

ಸ್ವಲ್ಪ ಹೊತ್ತಿಗೆ ನನಗೆ ಪಾಠ ಶುರುವಾಗಿದ್ದರಿಂದ ನಾನು ಮನೆಯೊಳಗೆ ಹೋದೆ, ಪಾಠ ಮುಗಿಸಿಕೊಂಡು ಹೊರಗೆ ಬಂದೆ, ಮನೆಯ ಬಾಗಿಲಲ್ಲಿ ಆ ಗುಡಿಸಲಿನ ಮಕ್ಕಳು ಕೂತು ಪಿಳಿ ಪಿಳಿ ಕಣ್ಣು ಬಿಡುತ್ತಾ ಟಿ.ವಿ ನೋಡುತ್ತಿದ್ದರು, ನಾನು ಮನೆಗೆ ಹೊಸಬನಾಗಿದ್ದರಿಂದ ನನ್ನ ಗೆಳೆಯನಿಗೆ ಕೇಳಿದೆ, ‘ಇವರು ಹೊರಗೆ ಏಕೆ ಕೂತಿದ್ದಾರೆ ?’ ನನ್ನ ಸ್ನೇಹಿತ ಹೇಳಿದ, ‘ಅವರು ಕೆಳ ಜಾತಿಯವರಲ್ಲವೆ ಅದಕ್ಕೆ’ ಎಂದ ! ನಾನು ಒಳಗೆ ಇಣುಕಿದೆ, ನಾಯಿ ಮರಿ ಮನೆಯಲ್ಲೇ ಆಡುತ್ತಿತ್ತು, ಆದರೆ ಮನುಷ್ಯರ ಜಾತಿಯಲ್ಲೇ ಹುಟ್ಟಿದ ಕೆಳ ವರ್ಗದ ಮಕ್ಕಳು ಮಾತ್ರ ಚಪ್ಪಲಿ ಬಿಡುವ ಸ್ಥಳದಲ್ಲಿ ಕೂತಿದ್ದರು. ಇದರಿಂದ ನನಗೆ ತಿಳಿದಿದ್ದು ನಾಯಿಗೆ ಕೂಡ ಮನೆಯಲ್ಲಿ ಪ್ರವೇಶವಿದೆ ; ಆದರೆ ಕೆಳ ಜಾತೀಯ ಮನುಷ್ಯರಿಗಿಲ್ಲ.!

ನನಗೆ ಒಳ ಒಳಗೆ ಭಯ ಶುರುವಾಗಿತ್ತು, ನಾನು ಕೂಡ ಕೆಳ ಜಾತಿಯವನು, ಮಾಂಸ ತಿನ್ನುವ ಕುಲದವನು ಎಂದು ತಿಳಿದರೆ ನನಗೂ ಮನೆಯ ಒಳಗೆ ಪ್ರವೇಶವಿಲ್ಲ! ನಂತರ ನನಗೆ ನಾನೇ ಸಮಾಧಾನಿಸಿಕೊಂಡು, ಚಿಂತಿಸಿದೆ…… ನಾನು ಯಾರಲ್ಲಿಗೆ ಪಾಠ ಕಲಿಯಲು ಬರುತ್ತಿರುವೆ? (ನಿಜ ಹೇಳಬೇಕೆಂದರೆ ಆ ಶಿಕ್ಷಕರು ತುಂಬಾ ಚೆನ್ನಾಗಿಯೆ ಪಾಠ ಮಾಡುತ್ತಿದ್ದರು) ಇವರು ನಿಜವಾಗಿಯೂ ಗುರುಗಳೇ ? ಇವರಲ್ಲಿ ನಾನು ಕಲಿತು ಜೀವನ ರೂಪಿಸಿಕೊಳ್ಳಲು ಸಾಧ್ಯವೆ ? ಹಾಗಾದರೆ ನನ್ನ ಪಾಠಗಳು ಯಾವವು? ನಾನು ಓದುತ್ತಿರುವುದು ಏನನ್ನು ? ಮಾನವೀಯತೆ ಇಲ್ಲದ ಈ ಶಿಕ್ಷಕರು ನನಗೇನು ಹೇಳಿಕೊಟ್ಟಾರು ? ನನ್ನ ಶಿಕ್ಷಕ ಹಾಗೂ ಮಾನವೀಯತೆಯ ಪಾಠ ಹೇಳಿ ಕೂಡದ ನನ್ನ ಶಿಕ್ಷಣದ ಮೇಲೆ ಇಲ್ಲದ ಕೋಪ ಹುಟ್ಟಿತು.

ಹಾಗಾದರೆ ಇದೇ ಕೆಳ ಜಾತಿಯ ಮಕ್ಕಳ ಜೊತೆ ಆಟವಾಡುತ್ತಿದ್ದ ಸೋನು ಮುಂದೆ ಹೇಗಿರುತ್ತಾಳೆ ? ಅವಳ ಮಾನವೀಯತೆ ? ಆ ಮಗುವು ನಮ್ಮ ಶಿಕ್ಷಕರ ಮನೆಯ ವಾತಾವರಣದಲ್ಲಿ ಬೆಳೆಯುತ್ತಿದೆ. ಮುಂದೊಂದು ದಿನ ಅವಳ ಮನೆಯಲ್ಲಿ ಕೆಳ ಜಾತಿಯವರಿಗೆ ಪ್ರವೇಶ ಇಲ್ಲ ಎಂದಾಯಿತು.
ಇದೆಲ್ಲ ಮಾನವ ಧರ್ಮ, ಮಾನವೀಯತೆ ಎಂದಾದರೆ, ಪ್ರಾಣಿಗಳು ಇಂತಹ ಮಾನವೀಯತೆ ತೋರದಿರಲಿ, ಮಾನವ ಧರ್ಮಕ್ಕಿಂತ ಪ್ರಾಣಿಧರ್ಮವೆ ಮೇಲು ಅಲ್ಲವೆ!.

ಉದ್ಯೋಗ, ಸಂಬಳಕ್ಕೇಂದೇ ಇರುವ ಇಂತಹ ಡಿಪ್ಲೋಮ, ಇಂಜನಿಯರಿಂಗ್, ಪದವಿಗಳಿಗಿಂತ ಪ್ರಾಣಿಗಳಿಂದ ಸಿಗುವ ಪಾಠ ಎಷ್ಟು ಉತ್ತಮವಲ್ಲವೆ, ಇಂತಹ ವೃತ್ತಿಪರ ಶಿಕ್ಷಣದ ಜೊತೆಗೆ ಜಾತ್ಯಾತೀತತೆ, ಸೌಹಾರ್ದತೆ, ಪ್ರೀತಿಯನ್ನು ಕಲಿಸುವ ಪ್ರಾಣಿಯತೆಯ! (ಮಾನವೀಯತೆಯ ಮೌಲ್ಯಗಳು) ಪಠ್ಯವು ಸೇರಿಸಬೇಕೆಂದು ಅನ್ನಿಸುತ್ತಿದೆ.

ಮನುಷ್ಯರನ್ನು ಮನುಷ್ಯರಂತೆ ಕಾಣೋಣ !

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s