ಮನುಸ್ಮೃತಿ ಇನ್ನೂ ಸುಟ್ಟಿಲ್ಲ ; ಸುಡಬೇಕಿದೆ !

ಡಾ. ಸಿದ್ರಾಮ ಕಾರಣಿಕ

ಈ ದೇಶದಲ್ಲಿ ಸ್ತ್ರೀಯರನ್ನು ‘ದೇವತೆ’ ಎಂದೇ ತಿಳಿಯಲಾಗುತ್ತದೆ ಎಂದು ಷರಾ ಬರೆಯತ್ತಲೇ ಆ ‘ದೇವತೆ’ಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಇನ್ನೂ ಮೇಲೆರಲು ಸಾಧ್ಯವಾಗಿಯೇ ಇಲ್ಲ. ಯಾಕೆಂದರೆ ಆ ‘ದೇವತೆ’ ಹೀಗೇ ಇರಬೇಕು ; ಇದನ್ನೇ ತೊಡಬೇಕು ; ಇದನ್ನೇ ಉಣ್ಣಬೇಕು ; ಇಂಥದ್ದನ್ನೇ ಮಾಡಬೇಕು ಮತ್ತು ಇಂಥದ್ದನ್ನು ಮಾಡಬಾರದು ಎಂಬ ಬಿಗಿಯಾದ ಕಟ್ಟಳೆಗಳು ಈ ದೇಶದಲ್ಲಿವೆ. ಈ ದೇಶದಲ್ಲಿ ಆ ‘ದೇವತೆ’ಯನ್ನು ಮೂರ್ಖಳು ಎಂದು ಭಾವಿಸಲಾಗುತ್ತದೆ ; ತಿಳುವಳಿಕೆ ಇಲ್ಲದವಳು ಎಂದು ಹಂಗಿಸಲಾಗುತ್ತದೆ ! ಈ ದೇಶದಲ್ಲಿ ಆ ‘ದೇವತೆ’ಯನ್ನು ಕೇವಲ ಹೇರುವ ಯಂತ್ರವನ್ನಾಗಿ ಮಾತ್ರ ನೋಡಲಾಗುತ್ತದೆ ; ಪುರುಷರ ದೈಹಿಕ ಹಸಿವನ್ನು ತೀರಿಸಿಕೊಳ್ಳಲು ಇರುವ ಒಂದು ಸಾಧನವನ್ನಾಗಿ ಪರಿಗಣಿಸಲಾಗುತ್ತದೆ ! ಹೀಗಾಗಿಯೇ ಆ ‘ದೇವತೆ’ಯ ಮೇಲೆ ನಿರಂತರ ಶೋಷಣೆಗಳು ನಡೆಯುತ್ತವೆ ; ಹೇಯವಾದ ಅತ್ಯಾಚಾರಗಳಾಗುತ್ತವೆ ! ಯಾವತ್ತೂ ಪುರುಷರ ಆಧೀನದಲ್ಲಿಯೇ ಆ ‘ದೇವತೆ’ ಇರಬೇಕು ಎಂಬ ಮನೋಭಾವ ತುಂಬಿಕೊಂಡಿದೆ ; ಏನೇ ಆದರೂ ‘ತಾಳಿ’ಕೊಳ್ಳಬೇಕು ಎಂಬ ತತ್ವಗಾರಿಕೆ ಇದೆ ! ಹೀಗಾಗಿಯೇ ಆ ‘ದೇವತೆ’ ಇಂದು ಮಾರಾಟದ ಸರಕಾಗಿದ್ದಾಳೆ ; ಭ್ರೂಣದಲ್ಲಿಯೇ ಸಾಯುತ್ತಿದ್ದಾಳೆ !

ಹೌದು, ಇದು ನನ್ನದು ಎಂದು ಹೇಳಿಕೊಳ್ಳುತ್ತಿರುವ ದೇಶದಲ್ಲಿಯೇ ನಡೆಯುತ್ತದೆ ! ಯಾಕೆಂದರೆ ಮನುಷ್ಯ ಸಂಬಂಧಗಳನ್ನೇ ಪರಗಣಿಸದ ವೈದಿಕಶಾಹಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ; ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಅಂದು ಸುಟ್ಟು ಹಾಕಿದ ಮನುಸ್ಮೃತಿ ಇನ್ನೂ ಬೂದಿಯಾಗಿಯೇ ಇಲ್ಲ ; ಅದು ಈ ದೇಶದಲ್ಲಿ ಇನ್ನೂ ಉರಿಯುತ್ತಲೇ ಇದೆ ! ಸಾಮಾಜಿಕ ಅಸಮಾನತೆಗೆ ಕಾರಣವಾಗಿ, ಬ್ರಾಹ್ಮಣ್ಯಶಾಹಿಯನ್ನು ಈ ದೇಶದ ಜನರ ಮೇಲೆ ಹೇರಿ ಯಜಮಾನಿಕೆ ವಿಕೃತಿಯನ್ನು ಮುಂದುವರಿಸುವ ಮೂಲವೇ ಮನುಸ್ಮೃತಿ ! ಇದನ್ನು ಅರಿತುಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‍ರು 1927 ಡಿಸೆಂಬರ್ 20 ರಂದು ಆ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದರು ; ಇಡೀ ಜಗತ್ತು ಒಂದಾಗಿ ಬದುಕಬೇಕಾದ ಸಂದೇಶವನ್ನು ರವಾನಿಸಿದರು. ಆದರೆ ಡಾ. ಬಾಬಾಸಾಹೇಬ ಅಂಬೇಡ್ಕರ್‍ರ ನಂತರ ಕೆಲವೇ ದಿನಗಳಲ್ಲಿ ಆ ಮನುಸ್ಮೃತಿ ಮತ್ತೇ ಚಿಗಿತುಕೊಳ್ಳತೊಡಗಿತ್ತು ! ಯಾಕೆಂದರೆ ಅದಾಗಲೇ ಈ ದೇಶದ ಎಲ್ಲರ ತಲೆಯಲ್ಲಿ ಬೀಜವನ್ನು ಬಿತ್ತಿ ರಾಶಿ ಮಾಡುವ ಹವಣಿಕೆಯಲ್ಲಿತ್ತು ! ಹೀಗಾಗಿಯೇ ಮರಾಠಿಯ ಪ್ರಗತಿಪರ ಬರಹಗಾರ ಪ್ರದೀಪ ದೇಶಪಾಂಡೆ ಹೇಳುತ್ತಾರೆ ; ‘ಮನುಸ್ಮೃತಿ ಅಜೂನಹೀ ಜಾಳತೇಚ ಆಹೆ !’ (ಮನುಸ್ಮೃತಿ ಇಂದಿಗೂ ಉರಿಯುತ್ತಲೇ ಇದೆ !)
ಈ ಮಾತನ್ನು ಸ್ಪಷ್ಟೀಕರೀಸಲು ಮನುಸ್ಮೃತಿಯಲ್ಲಿ ಹೇಳಿದ ಕೆಲವು ಮಾತುಗಳನ್ನು ಇಲ್ಲಿ ಉದ್ದರಿಸುತ್ತಿರುವೆ. (ಧಾರವಾಡದ ಸಮಾಜ ಪುಸ್ತಕಾಲಯ 2003 ರಲ್ಲಿ ಮೂರನೇ ಮುದ್ರಣವಾಗಿ ಪ್ರಕಟಿಸಿರುವ ಶೇಷ ನವರತ್ನ ಅವರು ಅನುವಾದಿಸಿರುವ ಮನುಸ್ಮೃತಿಯಿಂದ ಇಲ್ಲಿಯ ಉದ್ಧರಣೆಗಳನ್ನು ನೀಡಲಾಗಿದೆ) ಮನುಸ್ಮೃತಿಯ ಎರಡನೇ ಅಧ್ಯಾಯದ 213 ಮತ್ತು 214ನೇ ಶ್ಲೋಕಗಳು ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ವ್ಯಾಖ್ಯಾನ ಮಾಡುತ್ತವೆ ;

ಸ್ವಭಾವ ಏಷ ನಾರೀಣಾಮಿಹ ದೂಷಣಂ I
ಅತೋರ್ಥಾನ್ನ ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ’ II213 II

ಎಂದರೆ ಪುರುಷರ ಮನಸ್ಸನ್ನು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ. ಆದ್ದರಿಂದ ತಿಳುವಳಿಕೆಯುಳ್ಳ ಪ್ರಾಜ್ಞರು ಸ್ತ್ರೀಯರ ವಿಷಯದಲ್ಲಿ ಎಚ್ಚರ ತಪ್ಪಿ ನಡೆಯುವುದಿಲ್ಲ ಎನ್ನುವುದು ಇಲ್ಲಿಯ ಅರ್ಥ !

‘ಅವಿದ್ಯಾಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ I
ಪ್ರಮದಾ ಹ್ಯುತ್ಪಥಂ ನೇತು ಕಾಮಕ್ರೋಧವಶಾನುಗಂ’ II214 II

ಅಂದರೆ ಕಾಮ ಕ್ರೋಧಗಳಿಂದ ವಶನಾದ ಮನುಷ್ಯನನ್ನು ಅವನು ಪಂಡಿತನೇ ಇರಲಿ, ಪಾಮರನೇ ಇರಲಿ, ದಾರಿ ತಪ್ಪಿಸಲು ಸ್ತ್ರೀಯರು ಸಮರ್ಥರಾಗಿರುತ್ತಾರೆ ಎನ್ನಲಾಗಿದೆ !

‘ಸ್ತ್ರೀಯೋ ರತ್ನಾನ್ಯಥೋ ವಿದ್ಯಾ ಧರ್ಮಃ ಶೌಚ ಸುಭಾಷಿತಂ I
ವಿವಿಧಾನಿ ಚ ಶಿಲ್ಪ ಸಮಾದೇಯಾನಿ ಸರ್ವತಃ’ II229 II

ಸ್ತ್ರೀಯರು, ರತ್ನಗಳು, ಧರ್ಮ, ಶೌಚ, ಸುಭಾಷಿತ, ಶಿಲ್ಪಗಳು ಇವು ಎಲ್ಲಿದ್ದರೂ ಸಹ ಅವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂಬುದು ಮೇಲಿನ ಶ್ಲೋಕಕ್ಕೆ ನೀಡಿರುವ ಅರ್ಥವಾಗಿದೆ.

ಇವೆಲ್ಲವುಗಳನ್ನೂ ಹೇಳಿದ ಮೇಲೆ ಮೂರನೇ ಅಧ್ಯಾಯದಲ್ಲಿ,

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ I
ಯತ್ರೈತಾಸ್ತು ನ ಪೂಜಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ’ II56 II

ಎಲ್ಲಿ ಸ್ತ್ರೀಯರಿಗೆ ಗೌರವ ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ-ಪೂಜೆಗಳು ನಿಷ್ಫಲವಾಗುತ್ತವೆ !’ ಎಂದು ಹೇಳಿಕೊಂಡಿರುವುದು ಇದು ತಿಪ್ಪೆ ಸಾರಿಸುವ ಕೆಲಸವಲ್ಲದೆ ಮತ್ತೇನೂ ಅಲ್ಲ ! ಇಂಥ ಮನುಸ್ಮೃತಿ ಈ ದೇಶದ ಜನರೆಲ್ಲರ ಮನಸ್ಸನ್ನು ಕೆಡಿಸಿ ಹಾಕಿದೆ.

ಸಂವಿಧಾನಬದ್ಧವಾಗಿರುವ ಈ ದೇಶದ ಆಡಳಿತ ಕೂಡ ಮನುಸ್ಮøತಿಯ ನೆರಳಿನಲ್ಲಿಯೇ ಇಂದಿಗೂ ಸಾಗಿ ಬಂದಿರುವುದು ನಮ್ಮ ದೇಶದ ದುರಂತವೇ ಸರಿ. ಬರೀ ಆಡಳಿತಗಾರರು, ಸನಾತನಿ ಪುರೋಹಿತಶಾಹಿಗಳು ಮಾತ್ರವಲ್ಲ ಈ ದೇಶದ ಪ್ರತಿಶತ ತೊಂಬತ್ತರಷ್ಟು ಜನ ಮನುಸ್ಮೃತಿಯ ಪ್ರಕಾರವೇ ಬದುಕು ನಡೆಸುತ್ತಿದ್ದಾರೆ. ಇಂದಿಗೂ ಭಾರತೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ಬದುಕು ಮನುಸ್ಮೃತಿಯ ಚೌಕಟ್ಟಿನಲ್ಲಿಯೇ ಬಂಧಿಯಾಗಿದೆ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ! ಹೀಗಾಗಿಯೇ ಈ ದೇಶದ ದೀನ-ದಲಿತರು, ಮಹಿಳೆಯರು ಪ್ರತಿನಿತ್ಯ ಶೋಷಣೆಗೆ ಈಡಾಗಿ ನೋವು ಉಣ್ಣುತ್ತಿದ್ದಾರೆ ! ದಲಿತರ ಮೇಲೆ ನಡೆಯುವ ದೌರ್ಜನ್ಯಗಳು, ಬಹಿಷ್ಕಾರಗಳು, ಮಹಿಳೆಯರ ಮೇಲೆ ನಡೆಯುವ ಹಲ್ಲೆಗಳು, ಅತ್ಯಾಚಾರಗಳು, ಅನಾಗರಿಕ ವರ್ತನೆಗಳು ಈ ಕಾರಣಕ್ಕಾಗಿಯೇ ಇಂದು ಹೆಚ್ಚಾಗುತ್ತಲೇ ಇವೆ !

ಈ ದೇಶದ ಹೆಣ್ಣುಮಕ್ಕಳು ಇಂದು ಎಲ್ಲ ರಂಗಗಳಲ್ಲಿಯೂ ಮುಕ್ತವಾಗಿ ಭಾಗವಹಿಸುವ ಆಸಕ್ತಿಯನ್ನು ಹೊಂದಿದ್ದಾರೆ. ಶಿಕ್ಷಣದ ಮೂಲಕ ಹೊಸ ಹೊಸ ಅವಕಾಶಗಳೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಹವಣಿಕೆಯಲ್ಲಿ ಇದ್ದಾರೆ. ಕೆಲವು ಜನ ಇದರಲ್ಲಿ ಯಶಸ್ಸನ್ನೂ ಪಡೆದಿದ್ದಾರೆ. ಭಾರತೀಯ ಸಮಾಜ ಇಂದು ಬದಲಾಗಿದೆ ಎಂದು ಎದೆ ತಟ್ಟಿಕೊಂಡು ಭಾಷಣ ಬಿಗಿಯುವ ಮಂದಿಯೂ ನಮ್ಮ ನಡುವೆಯೂ ಇದ್ದಾರೆ. ಆದರೆ ಬದಲಾವಣೆ ಎನ್ನುವುದು ಹೊರಗಿನ ರೂಪ ಮಾತ್ರ ! ಹೆಣ್ಣುಮಕ್ಕಳ ವಿಷಯದಲ್ಲಿ ಇಂದಿಗೂ ಅದೇ ಹಳೆಯ ಮನೋಭಾವಗಳು ನಮ್ಮಲ್ಲಿ ಇಂದಿಗೂ ಜೀವಂತವಾಗಿವೆ ! ಯಾಕೆಂದರೆ ಈ ದೇಶದಲ್ಲಿ ಮನುಸ್ಮೃತಿ ಪೂರ್ಣವಾಗಿ ಸುಟ್ಟು ಹೋಗಿಲ್ಲ !

‘ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯಿಂದ ಬಿಗಿಯಲ್ಪಟ್ಟ ಬಂಧನದಲ್ಲಿಯೇ ಇಂದಿಗೂ ನಾವು ಬದುಕು ನಡೆಸುತ್ತಿದ್ದೇವೆ … … ಸ್ಥಳಾಂತರದ ಜೊತೆಗೆ ವೃತ್ತಿಯಾಂತರವನ್ನೂ ಮಾಡಲಾಗಿದೆ ಎಂಬುದೇನೋ ನಿಜ. ಆದರೆ ಮದುವೆ ಮಾಡುವಾಗ ಮಾತ್ರ ಇಂದಿಗೂ ಜಾತಿಯೇ ಪ್ರಧಾನ ಪಾತ್ರವಹಿಸುತ್ತದೆ. ಈ ದೃಷ್ಟಿಕೋನ ಮನುಸ್ಮೃತಿಯ ಪ್ರಭಾವದಿಂದಲೇ ಚಾಲ್ತಿಯಲ್ಲಿದೆ’ ಎನ್ನುವ ಪ್ರದೀಪ ದೇಶಪಾಂಡೆಯವರ ಮಾತುಗಳನ್ನು ಗಮನಿಸಿದಾಗ ಮನುಸ್ಮೃತಿಯ ಬೇರುಗಳು ಎಷ್ಟೊಂದು ಆಳಕ್ಕಿಳಿದು ನಮ್ಮನ್ನು ಆಳುತ್ತಿವೆ ಎಂಬುದರ ಅರಿವಾಗುತ್ತದೆ.

ಪ್ರದೀಪ ದೇಶಪಾಂಡೆಯವರ ಮಾತುಗಳನ್ನೇ ಮುಂದುವರಿಸಿ ಹೇಳುವುದಾದರೆ ಹೆಣ್ಣುಮಕ್ಕಳನ್ನು ತಮ್ಮ ಆಧೀನ ಎಂದುಕೊಳ್ಳುವ ಪ್ರವೃತ್ತಿ ಇಂದು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದೆ. ‘ಗಂಡು’ ಶ್ರೇಷ್ಠ – ಹೆಣ್ಣು ಕನಿಷ್ಠ ಎನ್ನುವ ವಿಚಾರಗಳು ನಮ್ಮ ತಲೆಯಲ್ಲಿಯೂ ಹಾಗೆಯೇ ಉಳಿದುಕೊಂಡಿವೆ. ಮದುವೆಯ ಸಂದರ್ಭದಲ್ಲಿ ಮದುಮಗನ ಕಡೆಯವರೇ ಎಲ್ಲ ಗೌರವಕ್ಕೂ ಅರ್ಹರು ; ಹೆಣ್ಣಿನ ಕಡೆಯವರು ಗೌಣ ! ಮದುವೆಯಾದ ನಂತರ ವಧುವಿನ ಹೆಸರು ಬದಲಾಗುತ್ತದೆ ; ಅಡ್ಡಹೆಸರೂ ಬದಲಾಗುತ್ತದೆ ! ಮಕ್ಕಳಾದಾಗಲೂ ಹೀಗೆಯೇ ನಮ್ಮ ವರ್ತನೆ ಇರುತ್ತದೆ – ಗಂಡು ಹುಟ್ಟಿದರೆ ಫೇಡೆ ಹಮಚುತ್ತೇವೆ ; ಹೆಣ್ಣುಮಗುವಾಗಿದ್ದರೆ ಜಿಲೇಬಿ ಅಥವಾ ಬರ್ಫಿ ಹಂಚುತ್ತೇವೆ (ಕೆಲವು ಸಲ ಅದೂ ಇಲ್ಲ !) ಮನೆಯಲ್ಲಿ ಹೆಂಡತಿಯಾದಾಕೆ ಗಂಡನನ್ನು ‘ರೀ’ ಎಂದೇ ಕರೆಯಬೇಕು ; ಗಂಡನಾದವನು ಮಾತ್ರ ಹೆಂಡತಿಯನ್ನು ‘ಏಯ್’ ಎಂದೇ ಮಾತನಾಡಿಸುತ್ತಾನೆ !
ಗಂಡಸರು ಏನು ಮಾಡಿದರೂ ‘ಅಂವಾ ಗಂಡ್ಸು ; ಮಾಡಿದರ ನಡೀತದ ಬಿಡ’ ಅನ್ನುವ ಮಾತು ಸಾಮಾನ್ಯ ; ಅದೇ ಹೆಂಗಸು ಒಂದು ಸಣ್ಣ ತಪ್ಪು ಮಾಡಿದರೂ ಕೂಡ ‘ಗಂಡುಭೀರಿ’ ಎನಿಸಿಕೊಳ್ಳುತ್ತಾಳೆ ; ವ್ಯಭಿಚಾರಿಣಿ ಪಟ್ಟ ಕಟ್ಟಲಾಗುತ್ತದೆ ! ಅನೈತಿಕ ಸಂಬಂಧ ಮಾಡಿದ ಕೆಟ್ಟ ಹುಳು ಎಂದು ದೂರೀಕರಿಸುತ್ತೇವೆ ! ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಶವ ಸಂಸ್ಕಾರ ಮಾಡುವಂತಿಲ್ಲ ; ವಿಧವೆಯಾದರೆ ಪೂಜೆ-ಪುನಸ್ಕಾರ-ಮದುವೆ-ಮುಂಜಿ-ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ; ಎರಡನೆಯ ಮದುವೆಗೂ ನೂರಾರು ವಿಘ್ನ ! ಗಂಡಸಾದರೆ ಆತ ವಿಧುರನಾದರೂ ಎಲ್ಲದರಲ್ಲೂ ಭಾಗವಹಿಸಬಹುದು ; ಎರಡನೆಯ ಮದುವೆಯನ್ನೂ (ಯಾಕೆ ಮೂರನೆಯ ಮದುವೆಯನ್ನೂ) ಮಾಡಿಕೊಳ್ಳಬಹುದು – ಇದಕ್ಕೆ ಯಾವುದೇ ತಕರಾರುಗಳು ಇಲ್ಲ ! ಮನೆಯಲ್ಲಿ ಗಂಡನಾದವನು ಆರಾಮಾಗಿ ಕುಳಿತಾಗ ಹೆಂಡತಿಯಾದವಳು ಮನೆಯ ಕೆಲಸವನ್ನೆಲ್ಲ ಅಚ್ಚಕಟ್ಟಾಗಿ ಮಾಡಿ ಮುಗಿಸಬೇಕು ; ಹೆಚ್ಚು-ಕಡಿಮೆಯಾದರೆ ಬೈಗುಳಗಳ ಸುರಿಮಳೆ ; ಬುದ್ಧಿಯಿಲ್ಲದವಳು ಎಂಬ ತೆಗಳಿಕೆ !

ಈ ಎಲ್ಲ ಕಾರಣಗಳಿಂದಲೇ ಕೆಲವು ಮುಖಂಡರು, ಸನ್ಯಾಸಿಗಳು ಹೆಣ್ಣಿನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡತೊಡಗಿದ್ದಾರೆ. ಯಾರೋ ಒಬ್ಬರು ಹೆಣ್ಣುಮಕ್ಕಳು ಹೊರಗೆ ಹೋಗಬಾರದು ; ತಗ್ಗಿ-ಬಗ್ಗಿ ನಡೆಯಬೇಕು. ಯಾವುದೇ ಅಲಂಕಾರ ಮಾಡಿಕೊಳ್ಳಬಾರದು ; ಹೊಸ ಬದುಕಿಗೆ ಹಾತೊರೆಯಬಾರದು ; ಬಟ್ಟೆಗಳನ್ನು ಮೈ ತುಂಬ ಧರಿಸಬೇಕು ಎಂದು ಮೊದಲಾಗಿ ಒದರಿ, ಹೆಣ್ಣುಮಕ್ಕಳು ಹೀಗಿದ್ದರೆ ಅವರ ಮೇಲೆ ಅತ್ಯಾಚಾರಗಳು ನಡೆಯುವುದಿಲ್ಲ ಎಂದು ಭವಿಷ್ಯ ನುಡಿದರು. ನಗರಗಳಲ್ಲಿ ಹೆಣ್ಣುಮಕ್ಕಳು ವಿದೇಶಿ ಸಂಸ್ಕೃತಿಯಿಂದ ಪ್ರಭಾವಿತರಾಗಿರುವುದರಿಂದ ಚೆಲ್ಲು ಚೆಲ್ಲಾಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಅತ್ಯಾಚಾರ ಪ್ರಮಾಣ ಹೆಚ್ಚು ಎಂದು ಕರಬುತ್ತಾರೆ ! ಯಾಕೆ ಹಳ್ಳಿಗಳಲ್ಲಿಯೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುವುದಿಲ್ಲವೆ ! ಅಲ್ಲಿ ಪ್ರಚಾರ ಸಿಗುವುದಿಲ್ಲ ; ನಗರಗಳಲ್ಲಿ ಸುದ್ದಿ ಬಹುಬೇಗ ಹಬ್ಬುತ್ತದೆ ಅಷ್ಟೆ ! ಹಾಗೆ ನೋಡಿದರೆ ಇಂಥ ಎಲ್ಲಿ ವಿಕೃತಿ ಇರುತ್ತದೆಯೋ ಅಂಥಲ್ಲೆಲ್ಲ ಇವು ನಡೆಯುತ್ತಲೇ ಇರುತ್ತವೆ.

ಇನ್ನೊಬ್ಬರು ಬಾಯಿ ಬಾಯಿ ಪಡೆದುಕೊಂಡು ಅತ್ಯಾಚಾರಿಗಳು ಎದುರಿಗೆ ಬಂದಾಗ ಹೆಣ್ಣುಮಕ್ಕಳು ಅವರಿಗೆ ಕೈ ಮುಗಿದು. ‘ಅಣ್ಣಾ, ಅಪ್ಪಾ’ ಎನ್ನಬೇಕು. ಆಗ ಅತ್ಯಾಚಾರಿಗಳ ಮನಃಪರಿವರ್ತನೆಯಾಗುತ್ತದೆ ಎಂಬುದಾಗಿ ಪ್ರವಚನ ಹೇಳತೊಡಗಿದರು ! ಹೆಣ್ಣನ್ನು ಎಷ್ಟೊಂದು ಹೀನಾಯವಾಗಿ ನಡೆಯಿಸಿಕೊಳ್ಳುತ್ತದೆಯಲ್ಲ ಈ ದೇಶ ! ವಿಕೃತ ಮನಸ್ಸಿನವರ ಮುಂದೆ ಕೈ ಕಾಲು ಹಿಡಿದು ಕಾಪಾಡಿ ಎಂದರೆ ರಕ್ಷಣೆ ಸಿಗಲು ಸಾಧ್ಯವೆ ! ಇಂಥ ಮಾತುಗಳೆಲ್ಲ ಹೆಣ್ಣುಮಕ್ಕಳನ್ನು ಇನ್ನೊಂದಿಷ್ಟು ಭ್ರಮಾವಲಯದಲ್ಲಿ ಕೆಡವಲು ಮಾಡುವ ಹುನ್ನಾರಗಳೇ ಆಗಿವೆ ! ಇದಕ್ಕೆಲ್ಲ ಮೂಲ ಕಾರಣ ಮನುಸ್ಮೃತಿ ಇನ್ನೂ ಉರಿಯುತ್ತಲೇ ಇದೆ ! ಅದನ್ನು ಮತ್ತೊಮ್ಮೆ ನಾವೆಲ್ಲ ಸೇರಿ ನಮ್ಮ ಮನೆಗಳಿಂದ-ಮನಗಳಿಂದ ಹೊರ ತಂದು ಸಂಪೂರ್ಣವಾಗಿ ಸುಡಬೇಕಿದೆ ; ಸುಟ್ಟು ಇನ್ನೆಂದೂ ಚಿಗಿಯದಂತೆ ಬೂದಿ ಮಾಡಬೇಕಿದೆ.

*****

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s