ಸಾಹಿತ್ಯ ಸಂಭ್ರಮಕ್ಕೆ ತಕ್ಷಣ ಪ್ರತಿಕ್ರಿಯಾತ್ಮಕ ವಿರೋಧ ಬೇಕು !

ಡಾ. ಸಿದ್ರಾಮ ಕಾರಣಿಕ
‘ಸಾಹಿತ್ಯ ಸಂಭ್ರಮ ಹುಟ್ಟು ಹಾಕಿರುವ ಪ್ರಶ್ನೆಗಳು’ ಎಂಬ ಎಂ.ಡಿ. ಒಕ್ಕುಂದ ಅವರ ಲೇಖನ (ವಿ.ಕ-25-01-2013) ಸಕಾಲಿಕವಾಗಿದೆ. ವ್ಯಾಪಾರೀ ಮನೋಭಾವವನ್ನಿಟ್ಟುಕೊಂಡು ಸಾಹಿತ್ಯವನ್ನು, ಸಾಹಿತ್ಯ ಚರ್ಚೆಯನ್ನು ಮಾಡಲು ಮುಂದಾಗಿದ್ದ ಸಾಹಿತ್ಯ ಸಂಭ್ರಮದ ಟ್ರಸ್ಟು, ಪ್ರಜ್ಞಾವಂತರ ಭಾರೀ ಪ್ರತಿಭಟನೆ ಮತ್ತು ವಿರೋಧದ ಕಾರಣವಾಗಿ ನಿಯಮಾವಳಿಗಳನ್ನು ಸಡಿಲಿಸಿಕೊಂಡಿರುವುದು ಸ್ವಾಗತಾರ್ಹವಾದರೂ ಅದರ ನಡೆಯಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

‘ಸಾಹಿತ್ಯಿಕ ವಾತಾವರಣ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಯತ್ನ ನಡೆಯುತ್ತಿದೆ. ಸಾಹಿತ್ಯದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲದೇ ಇರಬಹುದು. ಆದರೆ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗಿದೆ’ ಎನ್ನುವ ಟ್ರಸ್ಟಿನ ಗೌರವಾಧ್ಯಕ್ಷ ಡಾ. ಎಂ. ಎಂ. ಕಲಬುರ್ಗಿಯವರು ಹೇಳಿದ್ದು ಮತ್ತು ಟ್ರಸ್ಟಿನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ್ ಅವರು ಹೇಳಿರುವ ‘ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗ. ಚಳುವಳಿಗಳು ಇಲ್ಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಚರ್ಚಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ’ ಎನ್ನುವ ಮಾತುಗಳು ಕಾರ್ಯಕ್ರಮದ ಹೊಸ ಸಾಧ್ಯತೆಗಳ ಬಗ್ಗೆ ತಿಳಿಸುವ ಪರಿಯಲ್ಲಿದ್ದರೂ ಆ ಮಾತುಗಳ ಹಿಂದೆ ಚಳುವಳಿಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯದ ಬಗ್ಗೆ ಅವರಿಗಿರುವ ನಿಷ್ಕಾಳಜಿಯನ್ನು ವ್ಯಕ್ತಿಸುತ್ತವೆ. ಗೋಷ್ಟಿಗಳಲ್ಲಿ ಇರುವ ವಿಷಯಗಳು ಅಂಥ ಹೊಸ ಕಲ್ಪನೆಗಳನ್ನೇನೂ ಹುಟ್ಟು ಹಾಕುವುದಿಲ್ಲ. ಕತೆ ಹುಟ್ಟುವ ರೀತಿ, ಕತೆ ಹೇಳುವ ಕಲೆ, ಆತ್ಮಕತೆಗಳ ಓದು, ಪ್ರಶಸ್ತಿಗಳ ಹಾವಳಿ ಪ್ರಾಚೀನ ಕಾವ್ಯವಾಚನ, ಅಂತರ್ ಜಾಲ ಕನ್ನಡ, ಕನ್ನಡ ವಿಮರ್ಶೆ, ಕನ್ನಡ ಸಾಹಿತ್ಯ ಮತ್ತು ಕಾರ್ಪೊರೇಟ್ ಜಗತ್ತು ಮೊದಲಾದವುಗಳ ಬಗ್ಗೆ ಮೇಲಿಂದ ಮೇಲೆ ಚರ್ಚೆಗಳು ನಡೆಯುತ್ತಲೇ ಇವೆ. ‘ಹಾಗಿರಬಾರದು; ಹೀಗೆ ಇರಬೇಕು; ಹೀಗೆಯೇ ಇರಬೇಕು’ ಎಂಬುದರತ್ತಲೇ ಹೆಚ್ಚಿನ ಒತ್ತು ನೀಡುವ ಇದು ಸಂಭ್ರಮವಾದರೂ ಹೇಗಾದೀತು ? ತಮ್ಮ ಬದ್ಧತೆಗಳನ್ನೇ ಎಲ್ಲರೂ ಅನುಸರಿಸಬೇಕು ಎಂಬ ಯಜಮಾನಿಕೆಯ ಗತ್ತುಗಾರಿಕೆ ಇಲ್ಲಿ ಕಂಡು ಬರುತ್ತದೆ. ನಮ್ಮ ನಾಡಿನ ಗಮನ ಸೆಳೆಯುವ ಬರಹಗಾರರು, ವಿದ್ವಾಂಸರು, ಸಂಶೋಧಕರು, ವಿಮರ್ಶಕರು ಎಂದುಕೊಂಡಿದ್ದ ಮಂದಿಯೇ ಇಂಥ ಯಜಮಾನಿಕೆ ನಡೆಸಲು ಮುಂದಾಗಿರುವುದು ತುಂಬ ವಿಪರ್ಯಾಸ ಎನ್ನುವುದಕ್ಕಿಂತ ನಂಬಿಕೆಯನ್ನೇ ಬುಡಮೇಲಾಗಿಸುವ ಮನೋಭಾವ ಎನ್ನಬಹುದೇನೋ ! ಇಂದು ನಡೆದ ಕಾರ್ಯಕ್ರಮವನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಭಾ ಭವನದ ಹೊರಗೆ ನಾಲ್ಕೈದು ಸೆಕ್ಯೂರಿಟಿ ಗಾರ್ಡುಗಳು, ಒಳಗೆ ಇನ್ನೊಂದಿಷ್ಟು ಸೆಕ್ಯುರಿಟಿ ಗಾರ್ಡುಗಳು ಟಿಪ್‌ಟಾಪ್ ಆಗಿ ನಿಂತಿದ್ದರು. ಒಳಗೆ ಮಾತನಾಡಿದರೆಲ್ಲಿ ಹೊರ ಹಾಕುತ್ತಾರೋ ಎಂದುಕೊಂಡು ಉಸಿರಾಡಿಸಲೂ ಕಷ್ಟಪಡುತ್ತಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು, ಹೊರಗಡೆ ಇನ್ನೂ ಪುಸ್ತಕಗಳ ಕಟ್ಟನ್ನೇ ಬಿಚ್ಚಿಡುತ್ತಿದ್ದ ನಾಲ್ಕೈದು ಪುಸ್ತಕ ವ್ಯಾಪಾರಿಗಳು, ಗಂಟು ಹಾಕಿಕೊಂಡಂತಿದ್ದ ಮುಖಗಳು ತುಂಬ ನಿರಾಸೆಯನ್ನುಂಟು ಮಾಡಿದವು. ಐನೂರು ಕೊಟ್ಟು ಬಂದವರು ಯಾವ ಸಾರ್ಥಕತೆ ಪಡೆಯುತ್ತಾರೋ ಗೊತ್ತಿಲ್ಲ. ಆದರೆ ಸಂಭ್ರಮಕ್ಕೆ ಆಗಮಿಸಿರುವ ದೊಡ್ಡ ದೊಡ್ಡ ಸಾಹಿತಿಗಳ ಜೊತೆಗೆ ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು ಎಂಬ ಅವರ ಹಂಬಲ ಮಾತ್ರ ಈಡೇರಬಹುದೇನೋ !

ಇಂತಹ ಸಾಂಸ್ಕೃತಿಕ ದಿವಾಳಿತನಕ್ಕೆ ಎಡೆ ಮಾಡಿಕೊಟ್ಟಿರುವ ಈ ‘ಸಂಭ್ರಮ’ ವನ್ನು ವಿರೋಧಿಸಿ ಧಾರವಾಡದ ಪ್ರಗತಿಪರ ಬರಹಗಾರರ ಹಾಗೂ ಸಂಘಟನೆಗಳ ವೇದಿಕೆ ‘ಜನತೆಯತ್ತ ಸಾಹಿತ್ಯ’ ಹೆಸರಿನಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದರೂ ಅದನ್ನು ‘ಸಂಭ್ರಮ ಸಂಘಟಕರ’ ಮಾತು ಕೇಳಿ ಮುಂದೆ ಹಾಕಿದ್ದಾದರೂ ಯಾಕೆ ಎಂದು ತಿಳಿಯುತ್ತಿಲ್ಲ. ರಾಜಿಯಾಗುವ ಮನೋಧರ್ಮ ಇನ್ನೂ ಬದಲಾಗಿಲ್ಲ ಎಂದರೆ ಧಾರವಾಡದಲ್ಲಿ ಇನ್ನು ಮುಂದೆ ‘ಸಂಭ್ರಮ’ ಮಾದರಿಯ ಕಾರ್ಯಕ್ರಮಗಳು ಯಾರ ಮುಲಾಜಿಗೂ ಕಾಯದೆ ಕಾರ್ಯಪ್ರವತ್ತರಾಗಬಲ್ಲವು ! ‘ಸಂಭ್ರಮ’ ಆರಂಭದ ದಿನವೇ ಒಂದು ಸಣ್ಣ ಪ್ರತಿಭಟನೆಯನ್ನೋ ಪರ್ಯಾಯವಾಗಿ ಒಂದು ಸಣ್ಣ ಕಾರ್ಯಕ್ರಮವನ್ನೋ ಅದು ಬೀದಿಯಲ್ಲಾದರೂ ಸರಿ ಮಾಡಿದ್ದರೆ ಪ್ರತಿಭಟನೆಗೆ ಒಂದು ಅರ್ಥ ಬರುತ್ತಿತ್ತು. ಮಾರ್ಚಿನಲ್ಲಿ ‘ಸಂಭ್ರಮ’ ವನ್ನು ವಿರೋಧಿಸಿ ಮಾಡುವ ಕಾರ್ಯಕ್ರಮ ಪರ್ಯಾಯ ಎನಿಸಿಕೊಳ್ಳಲಾರದು. ಎಂ.ಡಿ. ಒಕ್ಕುಂದ ಅವರು ಹೇಳುವಂತೆ ‘ಕರ್ನಾಟಕದ ಚರಿತ್ರೆಯಲ್ಲಿ ಸಾಹಿತ್ಯ ಮತ್ತು ಕಲೆಗಳನ್ನು ಆಸ್ಥಾನೀಕರಿಸುವ, ಅಗ್ರಹಾರೀಕರಿಸುವ ಪ್ರಯತ್ನಗಳು ನಡೆದಾಗಲೆಲ್ಲ ತೀವ್ರವಾದ ಪ್ರತಿಭಟನೆಗಳು ಸಜನಶೀಲವಾದ ಪರ‌್ಯಾಯಗಳು ರೂಪ ತಾಳಿವೆ’ ಎಂಬುದೇ ನಿಜವಾದರೆ ಇನ್ನೂ ಕಾಲ ಮಿಂಚಿಲ್ಲ; ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಎದುರಿನಲ್ಲೇ ನಡೆಯುತ್ತಿರುವ ವೈಚಾರಿಕ ಬದ್ಧತೆಯಿಲ್ಲದ ‘ಸಂಭ್ರಮ’ ದ ಕೊನೆಯ ದಿನವಾದರೂ ಪರ್ಯಾಯ ಮಾದರಿಯಲ್ಲಿ ವಿಶ್ವವಿದ್ಯಾಲಯ ವೃತ್ತದಲ್ಲಿ ಅಥವಾ ಇನ್ನೆಲ್ಲಿಯಾದರೂ ಒಂದು ಕಾರ್ಯಕ್ರಮ ಮಾಡಬೇಕು. ಈ ನಿಟ್ಟಿನಲ್ಲಿ ಧಾರವಾಡದ ಪ್ರಜ್ಞಾವಂತ ಗೆಳೆಯರು ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.

ಕೃಪೆ: ವಿಜಯ ಕರ್ನಾಟಕ

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s