ಮತ್ತೇ ನಾವು ಆಂಡಯ್ಯ ಆಗುವುದು ಬೇಡ !

ಕನ್ನಡ ಶಾಸ್ತ್ರಕ್ಕೆ ಯಾರು ಎಂದರೆ ನಾವು ಬಹಳ ಹಿಂದೆ ಶಂಕರಭಟ್ಟರು ಎನ್ನುತ್ತಿದ್ದೇವು ! ಆದರೆ ಇಂದು ಶಂಕರ ಭಟ್ ಅವರು ಬರೆಯುತ್ತಿರುವುದನ್ನು ಕಂಡಾಗ ಯಾಕೋ ನಮಗೇ ಮುಜುಗರು ಆಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ವಾಂಸರು ಬರೆದುದೆನ್ನೆಲ್ಲ ಒಪ್ಪಿಕೊಂಡು ಬಿಟ್ಟರೆ ತಲೆಯಲ್ಲಿ ಪ್ರಶ್ನೆಗಳೇ ಹುಟ್ಟುವುದಿಲ್ಲ ! ಹಾಗೆ ಪ್ರಶ್ನೆಗಳು ಹುಟ್ಟದಿದ್ದರೆ ನಾವು ಮನುಷ್ಯರು ಅನ್ನಿಸಿಕೊಳ್ಳುವುದಕ್ಕೆ, ನಮಗೂ ಒಂದು ವ್ಯಕ್ತಿತ್ವ ಇದೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ಉಜಿರೆಯಲ್ಲಿ ಒಂದು ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಸೇರಿದ ನಮ್ಮಲ್ಲಿ ಒಂದು ಪ್ರಶ್ನೆ ಹೀಗಿತ್ತು. ಶಂಕರ ಭಟ್ಟರು ಬರೆಯುತ್ತಾರೆ. ಅವರಿಗೆ ಕನ್ನಡದ ವ್ಯಾಕರಣ ಮತ್ತು ಶಾಸ್ತ್ರಗಳ ಪರಿಚಯವಿದೆ. ಆದರೂ ಅಸಂಬದ್ಧವಾಗಿ ಬರೆಯತ್ತಾರೆ ಮತ್ತು ಅದಕ್ಕೆ ಉತ್ತರವನ್ನು ಕೇಳಿದರೆ ಅವರು ಏನನ್ನೂ ಹೇಳುವುದಿಲ್ಲ ! ಅಂದರೆ ಅವರು ಬರೆದ ಪುಸ್ತಕದ ಬಗ್ಗೆಯೇ ವಿಮರ್ಶೆ ನಡೆದಾಗಲೂ, ಪ್ರೀತಿಯಿಂದ ಆ ‘ಕಾರ್ಯ’ಕ್ಕೆ ಅವರನ್ನು ಆಹ್ವಾನಿಸಿದರೂ ಅವರು ನಮ್ಮನ್ನು ನಿರಾಸೆಗೊಳಿಸುತ್ತಾರೆ !
ರವಿವಾರದ ವಿಜಯ ಕರ್ನಾಟಕದಲ್ಲಿ (9-9-2012) ಶಂಕರಭಟ್ಟ ಅವರು ಒಂದು ಲೇಖನ ಬರೆದಿದ್ದಾರೆ. ಅದರ ಶೀರ್ಷಿಕೆ ‘ಓದುವ ಹಾಗೆಯೇ ಬರೆಯುವುದು’ ಎಂದಿದೆ. ಅಂದರೆ ಸಂಸ್ಕøತದಿಂದ ಎರವಲು ಪಡೆದ ಪದಗಳನ್ನು ನಾವು ಯಾವ ರೀತಿ ಉಚ್ಚರಿಸುತ್ತೇವೆಯೋ ಅದೇ ರೀತಿಯಲ್ಲಿ ಬರೆಯಬೇಕೆಂದು ಸೂಚಿಸುತ್ತಾರೆ ! ಇದು ಆಂಡಯ್ಯನ ವಾದ ಎಂದರೂ ನಡೆಯುತ್ತದೆ ! ಶಂಕರಭಟ್ಟರು ಹಿರಿಯರು, ವಿದ್ವಾಂಸರು ಎನ್ನುವುದು ಬೇರೆ ಮಾತು. ಆದರೆ ಅದನ್ನೇ ಮುಂದು ಮಾಡಿಕೊಂಡು ಕನ್ನಡಿಗರನ್ನು ಹಾದಿ ತಪ್ಪಿಸುವ ನಡೆಯನ್ನು ಅವರು ಮುಂದುವರಿಸಿರುವುದು ಮಾತ್ರ ಸಮಂಜಸವೆಂದು ತೋರುತ್ತಿಲ್ಲ !
ಶಂಕರ ಭಟ್ಟರು ನಮ್ಮನ್ನು ಒಂದು ರೀತಿಯಲ್ಲಿ ಕನ್‍ಫ್ಯೂಜ್ ಮಾಡುತ್ತಿದ್ದಾರೆ ಎಂದೆನಿಸುತ್ತದೆ ನನಗೆ ! ಜನಸಾಮಾನ್ಯರಿಗೆ ಏನು ಬೇಕು ಎನ್ನುವುದನ್ನು ಅರಿತುಕೊಳ್ಳದ ಮತ್ತು ಆ ಬಗ್ಗೆ ಅನುಭವ ಇಲ್ಲದಿರುವ ಅವರು ತಮ್ಮ ಗೂಡಿನೊಳಗೆ ಕುಳಿತುಕೊಂಡು ತಮಗೆ ತೋಚಿದಂತೆ ವಿಚಾರಗಳನ್ನು ಹರಿಯಬಿಡುತ್ತಿರುವುದು ಸರ್ವಥಾ ಸರಿಯಲ್ಲ. ಯಾಕೆಂದರೆ ಅವರು ಉಪಯೋಗಿಸುವ ಕನ್ನಡ ಪದಗಳೇ ಒಮ್ಮೊಮ್ಮೆ ಕನ್ನಡಿಗರಿಗೆ ಅರ್ಥವಾಗಲಾರವು ! ‘ತಿಳಿವಿಗರು’, ‘ಹೊರಪಡಿಕೆಗಳು’, ‘ಎತ್ತುಗೆ’, ‘ಬರಿಗೆ’  ಮೊದಲಾದ ಪದಗಳು ಜನಸಾಮಾನ್ಯರಿಗೆ ಹೇಗೆ ಅರ್ಥವಾಗುತ್ತವೆ ? ನಿಮ್ಮ ಬುದ್ಧಿಶಕ್ತಿ ಅಪಾರವಾಗಿರಬಹುದು. ಆದರೆ ಅದನ್ನು ದಯವಿಟ್ಟು ಜನಸಾಮಾನ್ಯರ ಮೇಲೆ ಹೇರಬೇಡಿ !
ಇಡೀ ಲೇಖನವನ್ನು ಕಂಡಾಗ ಸಂಸ್ಕøತ ಭಾಷೆಯ ಅಕ್ಷರಗಳನ್ನು ಬಳಕೆ ಮಾಡುವುದರ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದಾರೆ. ಆದರೆ ತಾವೇ ತಮಗೇ ಗೊತ್ತಿಲ್ಲದಂತೆ ಅವುಗಳನ್ನು ಬಳಸುತ್ತಾರೆ ! ‘ಸುಲಭ>ಸುಲಬ, ಖುಷಿ>ಕುಶಿ, ಪೂಜ್ಯಭಾ>ಪೂಜ್ಯಬಾವ ಮೊದಲಾಗಿ ಬಳಸಿದ್ದಾರೆ. ಇದು ಕನ್ನಡ ಪ್ರೇಮವೇ ? ‘… ಮಾರ್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು’ ಎನ್ನುವ ಅವರಿಗೆ ತಾವು ಮಾಡುತ್ತಿರುವುದೂ ತೊಡಕಿನ ಸೃಷ್ಟಿಯೇ ಅಂತ ಯಾಕೆ ಅನ್ನಿಸುತ್ತಿಲ್ಲ ? ಮಹಾಪ್ರಾಣವನ್ನು ತಿರಸ್ಕರಿಸುವ ಮೂಲಕ ಬಳಕೆಯಲ್ಲಿರುವ ಕನ್ನಡ ಪದಗಳ ಅರ್ಥವ್ಯತ್ಯಾಸವಾಗುವುದಿಲ್ಲವೆ ? ನಾನು ಬದಲಾವಣೆಯ ಗಾಳಿ ಬೀಸುತ್ತಿದ್ದೇನೆ ಎಂದು ಅವರು ತಿಳಿದುಕೊಂಡಿದ್ದರೆ ಯಾಕೋ ಸಮಂಜಸವೆನಿಸಲಾರದು ! ಆಡುಭಾಷೆಯನ್ನು ಹದಗೆಡಿಸಿ ಕ್ಲಿಷ್ಟ ಮಾಡುವ ಪರಿ ಒಂದು ರೀತಿಯಲ್ಲಿ ನಗುವನ್ನೂ ತರುತ್ತದೆ !
ಶಂಕರ ಭಟ್ಟರ ಲೇಖನವಷ್ಟೇ ಅಲ್ಲ. ಸಿದ್ಧರಾಜು ಬೋರೇಗೌಡ ಅವರ ಲೇಖನ ‘ಬಾರತದವರು ಅಮೆರಿಕಾದವರಿಂದ ಆಳಗ್ಗಳೆ ಮತ್ತು ಆಳೀಳಿಗೆಯ ಪಾಟ’ (ವಿಜಯ ಕರ್ನಾಟಕ : 19-09-2012) ಕೂಡ ಇದೇ ರೀತಿಯ ಗೊಂದಲಗಳನ್ನು ಹುಟ್ಟು ಹಾಕುವಂತಿದೆ. ಯಾಕೆಂದರೆ ಲೇಖಕರು ಕನ್ನಡ ಲಿಪಿ ಸುದಾರಣೆಯಲ್ಲಿ ನುಡಿಯರಿಗೆ ಶಂಕರ ಬಟ್ಟರ ಶಾಲೆಗೆ ಸೇರಿದವರು. ಅಮೆರಿಕಾದ ಸ್ಕ್ರಿಪ್ಟ್ಸ್ ಅರಕೆ ಸಂಸ್ತೆಯಲ್ಲಿ ಬುಡಕಣಗಳ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ ! ಇವರು ಬಳಸುವ ಪದಗಳು ಕೂಡ ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ಇಲ್ಲ. ಶೀರ್ಷಿಕೆಯಲ್ಲಿಯೇ ಇರುವ ಆಳಗ್ಗಳೆ, ಆಳೀಳಿಗೆ ಹಾಗೂ ಲೇಖನದಲ್ಲಿ ಬಂದಿರುವ ಒಪ್ಪುಕೂಟ, ಮೇಟಿಯಾಳ್ಕೆ, ಆಳ್ಕೆ, ಈಳಿಗೆ, ಬೇರ್ಮೆ ಹಲತನ, ಹೆಗ್ಗಳ, ಮಿಂಬಲೆ ಮೊದಲಾದ ಪದಗಳನ್ನು ಒತ್ತಾಯಪೂರ್ವಕವಾಗಿಯೋ ಇಲ್ಲವೆ ಹಾಗೆ ಬರೆಯಲೇ ಬೇಕು ಎಂಬ ಹಠದಿಂದಲೋ ಉಪಯೋಗಿಸಿದ್ದಾರೆ !
ಸಿದ್ಧರಾಜು ಅವರೇ ಲೇಖನದಲ್ಲಿ ಒಂದು ಕಡೆ ‘ಹೆಚ್ಚೆಣಿಕೆಯವರ ತೀಟೆಗಾಗಿ ಕೊರೆಯೆಣಿಕೆಯವರನ್ನು ತೊಂದರೆಗೀಡು ಮಾಡುವುದು ಆಳಾಳ್ಕೆಯಾಗದು’ ಎನ್ನುತ್ತಾರೆ. ಹಾಗಾದರೆ ಶಂಕರಭಟ್ಟರು ಮತ್ತು ಅವರ ಅನುಯಾಯಿಗಳಾದ ಸಿದ್ಧರಾಜು ಅವರು ಮಾಡುತ್ತಿರುವುದದರೂ ಏನು ? ಕನ್ನಡದ ಬಗ್ಗೆ ತುಂಬ ಕಾಳಜಿ ಇದೆ. ಅದು ಉಳಿಯಬೇಕು, ಬೆಳೆಯಬೇಕು ಎಂಬುದು ಎಲ್ಲ ಕನ್ನಡಿಗರ ಆಶಯವಾಗಿರುತ್ತದೆ. ಆದರೆ ಅದನ್ನು ಹೀಗೇ ಇರಬೇಕು ಎಂದು ನಿರ್ದೇಶನ ಮಾಡಿ ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ ! ಶಂಕರ ಭಟ್ಟರಂತೂ ‘ಅಕ್ಷರ’ವನ್ನು ‘ಬರಿಗೆ’ ಎಂದೇ ಕರೆಯಲು ಆರಂಭಿಸಿದ್ದಾರೆ ! ಭಾಷೆಯೊಂದರಲ್ಲಿ ಕಡಿಮೆ ಅಕ್ಷರಗಳಿದ್ದಷ್ಟೂ ಆ ಭಾಷೆ ಬೆಳವಣಿಗೆ ಹೊಂದುತ್ತದೆ ಎಂಬ ವಿಚಾರವನ್ನು (ವಿ.ಕ. 21-10-2012) ಪ್ರತಿಪಾದಿಸತೊಡಗಿದ್ದಾರೆ. ಇಲ್ಲಿ ಹೊಸದೇನೂ ಇಲ್ಲ. ಕನ್ನಡದ್ದೇ ಎನ್ನುವ ಪದಗಳನ್ನು ಬಿಟ್ಟರೆ ವಿಚಾರವೆಲ್ಲ ಹಳೆಯದೇ. ಕೇಶಿರಾಜ ಕೂಡ ಅಕ್ಷರಗಳನ್ನು ಕಡಿಮೆ ಮಾಡಲು ಹೆಣಗಾಡಿದ್ದಾನೆ ; ಭಾಷಾಶಾಸ್ತ್ರಜ್ಞರೂ ಈ ಬಗ್ಗೆ ಈಗಾಗಲೇ ಚರ್ಚೆ ನಡೆಯಿಸಿದ್ದಾರೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಭಾಷೆಯ ಜಾಯಮಾನಕ್ಕೆ ತಕ್ಕಂತೆ ಅಕ್ಷರಗಳು ರೂಪುಗೊಂಡಿರುತ್ತವೆ. ಈ ವಿಚಾರವನ್ನು ಶಂಕರ ಭಟ್ಟರು ಯಾಕೆ ಮರೆತಿದ್ದಾರೋ ತಿಳಿಯದು. ಸಮಸ್ಕøತದಲ್ಲಿ ಕಡಿಮೆ ಅಕ್ಷರಗಳಿರುವುದನ್ನು ಹೇಳಿರುವ ಅವರು ಅದೇ ದೇವನಾಗರಿ ಲಿಪಿಯನ್ನು ಬಳಸಿಕೊಂಡು ಬೆಳೆದು ಬಂದಿರುವ ಹಿಂದಿ, ಮರಾಠಿ ಬಗ್ಗೆ ಮಾತನಾಡುವುದಿಲ್ಲ. ಮರಾಠಿ ಅಥವಾ ಹಿಂದಿಯಲ್ಲಿ ‘ಇ, ಈ, ಉ, ಊ’ ಇವೆಯಾದರೂ ‘ಎ, ಒ’ಗಳು ಇಲ್ಲ. ಹೀಗಾಗಿಯೇ ಮರಾಠಿಗರು ಮಾತನಾಡುವಾಗ ‘ಹೆಡ್ಮಾಸ್ಟರ್’ ಎನ್ನುವುದನ್ನು ‘ಹೇಡಮಾಸ್ಟರ್’ ಎಂದೇ ಉಚ್ಛರಿಸುತ್ತಾರೆ. ಹಾಗೆಯೇ ‘ಒದರುವ’ ಎಂಬುದನ್ನು ‘ಓದರುವ’ ಎಂದೇ ಮಾತಿನಲ್ಲೂ ಬರವಣಿಗೆಯಲ್ಲೂ ಬಳಸುತ್ತಾರೆ. ಹೀಗಾದಾಗ ಆಯಾ ಪ್ರದೇಶದ ಭಾಷೆಗಳ ಮಿತಿಯನ್ನು ತಿಳಿದುಕೊಂಡಿರಬೇಕು. ಕೇವಲ ಆಡುಮಾತುಗಳನ್ನೇ ಇಟ್ಟುಕೊಂಡು ವಾದಕ್ಕೆ ಇಳಿಯುವ ಶಂಕರ ಭಟ್ಟರು ಇಂಥ ಸೂಕ್ಷ್ಮಗಳನ್ನೂ ಅರಿತಿರಬೇಕಾಗುತ್ತದೆ. ಅಕ್ಷರಗಳು ಹೆಚ್ಚೋ, ಕಡಿಮೆಯೋ ಎಂಬುದು ಭಾಷಾ ಬೆಳವಣಿಗೆಗೆ ಪೂರಕವಾದ ಸಂಗತಿಯಲ್ಲ ಎಂಬುದನ್ನು ಮೊದಲು ಅವರು ಗಮನಿಸಬೇಕು. ಚೀನಿ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಂತ ಚೀನಿ ಭಾಷೆ ನಶಿಸಿದೆಯೆ ? ಇಲ್ಲ. ಇವತ್ತು ಆ ದೇಶದ ಪ್ರತಿಯೊಂದು ಉತ್ಪನ್ನಗಳ ಮೇಲೆ ಆ ಭಾಷೆಯ ಬಳಕೆ ಇದೆ. ಕನ್ನಡಕ್ಕೆ ಕುತ್ತು ಇರುವುದು ಇಂಥಲ್ಲಿಯೇ ! ವಿನಃ ಶಂಕರ ಭಟ್ಟರು ಅಥವಾ ಅವರ ಅನುಯಾಯಿಗಳು ಹೇಳುವ ಕಾರಣಗಳಿಂದಲ್ಲ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ. ಒಂದು ನಾಡಿನ ಭಾಷೆಯೊಂದು ಅನ್ನ ಕೊಡುವ ತಾಕತ್ತು ಹೊಂದಿರಬೇಕು ; ಆ ನಾಡಿನಲ್ಲಿ ಉತ್ಪನ್ನವಾಗುವ ಎಲ್ಲ ವಸ್ತುಗಳ ಮೇಲೆ ಅಲ್ಲಿಯ ಭಾಷೆಯೇ ಪ್ರಮುಖವಾಗಿ ಕಾಣಿಸಬೇಕು. ಅಂದಾಗ ಮಾತ್ರ ಆ ನಾಡಿನ ಭಾಷೆ ಉಳಿಯುತ್ತದೆ ; ಬೆಳೆಯುತ್ತದೆ. ಒಣ ವೇದಾಂತಕ್ಕಿಂತ ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ.
ಇದೆಲ್ಲ ಬಿಟ್ಟು ಅಕ್ಷರಗಳನ್ನು ಕಡಿಮೆ ಮಾಡಬೇಕು. ಪದಗಳನ್ನು ‘ಹೀಗೆ’ ಪರಿವರ್ತಿಸಿಕೊಳ್ಳಬೇಕು ಎಂಬುದೆಲ್ಲ ಪ್ರಚಾರಕ್ಕಾಗಿ ಮಾಡುವ ಒಂದು ಗಿಮಿಕ್ಕಾಗಿ ತೋರುತ್ತದೆ ! ಇದರಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ‘ಎಲ್ಲರ ಕನ್ನಡ’ ಎಂದು ಹೇಳುತ್ತಲೇ ಕನ್ನಡವನ್ನು ತೀರ ಸಂಕೀರ್ಣಗೊಳಿಸಿ ಹಾಳು ಮಾಡುತ್ತಿರುವ ಕೆಲಸ ನಿಲ್ಲಬೇಕು. ಅಂಥವರಿಗೆ ವೇದಿಕೆ ಒದಗಿಸುವ ವೇದಿಕೆಗಳೂ ಕೂಡ ನಿಷ್ಪಕ್ಷಪಾತದಿಂದ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ಕೊಡಬೇಕು.
ಹೀಗೇ ಇರಬೇಕು. ಹೀಗೆಯೇ ಬರಬೇಕು ; ಬರೆಯಬೇಕು ಎಂಬ ವಿಚಾರಗಳನ್ನೇ ಇಟ್ಟುಕೊಂಡಿದ್ದ ಆಂಡಯ್ಯ ಕೂಡ ಕಬ್ಬಿಗರ ಕಾವ ಬರೆದ. ಆದರೆ ಅದರ ಪ್ರಭಾವ ಏನಾಯಿತು ? ಏನಾದರೂ ಬದಲಾವಣೆ ಸಾಧ್ಯವಾಯಿತೇ. ಈಗ ‘ಕಬ್ಬಿಗರ ಕಾವ’ ಅರ್ಥ ಮಾಡಿಕೊಳ್ಳುವವರೆಷ್ಟು ಇದ್ದಾರೆ ? ಇಂಥ ವಿಷಯಗಳನ್ನೆಲ್ಲ ಮನಗಾಣದೇ ವಿಚಾರಗಳನ್ನು, ಅಭಿಪ್ರಾಯಗಳನ್ನು ಹೇರುವುದು ಸರ್ವಥಾ ಸರಿಯಲ್ಲ. ಬಹುಶಃ ಆಂಡಯ್ಯನ ಅನುಯಾಯಿಗಳು ಇನ್ನೂ ಇದ್ದಾರೆ ಎನ್ನುವುದೇ ಸೋಜಿಗ ! ಮತ್ತೇ ನಾವು ಆಂಡಯ್ಯ ಆಗುವುದು ಬೇಡ !
Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s