ಬೇಂದ್ರೆ ಟ್ರಸ್ಟ್ ಪ್ರಶಸ್ತಿಯ ಅವಘಡಗಳು !

ಬಸವರಾಜ್ ಸುಳೇಭಾವಿ
ಬೇಂದ್ರೆ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ ! ಧಾರವಾಡದಲ್ಲಿರುವ ದ ರಾ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಗೆಳೆಯ ಶಿವರಾಜ ಬೆಟ್ಟದೂರು ಈ ಹೊತ್ತಿನ ಭರವಸೆಯ ಕವಿ. ಅವರು ತಮ್ಮ ಕವನ ಸಂಕಲನಕ್ಕೆ ಸಿಕ್ಕ ಈ ಸಲದ ಬೇಂದ್ರೆ ಟ್ರಸ್ಟಿನ ಪ್ರಶಸ್ತಿಯನ್ನು ನಾಜೂಕಾಗಿ ನಿರಾಕರಿಸಿದ್ದಾರೆ. ತಮಗೆ ಗುಂಗು ಹಿಡಿಸಿದ ಕವಿ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಯಾಕೆ ನಿರಾಕರಿಸಿದೆನೆಂದು ಅದರ ಹಿಂದಿರುವ ಕಾರಣಗಳನ್ನು, ಮುಜುಗರಗಳನ್ನು ನಾಡಿನ ಪ್ರಾಜ್ಞರೆದುರು ತೆರೆದಿಟ್ಟದ್ದಾರೆ. ಪ್ರಶಸ್ತಿ ಕೊಡುವವರ ಅಸೂಕ್ಷ್ಮತೆಗಳನ್ನು ಪ್ರಸ್ತಾಪಿಸಿದ್ದಾರೆ. ಆ ಸಂಗತಿಗಳನ್ನು ಓದಿ ಸುಮ್ಮನೆ ಮುಂದೆ ಸಾಗುವುದು ನನಗಂತೂ ಸಾಧ್ಯವಿಲ್ಲವೆಂದು ಅನ್ನಿಸಿತು.
ಬೇಂದ್ರೆ ಟ್ರಸ್ಟಿನ ಮೊಟ್ಟಮೊದಲ ಅಧ್ಯಕ್ಷರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಎಂ.ಎಂ.ಕಲಬುರ್ಗಿಯವರು. ಯಾವ ಜಾಗದಲ್ಲೇ ಇರಲಿ ಭವಿಷ್ಯತ್ ನ್ನು ರೂಪಿಸುವ ಕನಸುಗಳನ್ನಿಟ್ಟುಕೊಂಡು ಕೆಲಸ ಮಾಡುವ ಕಲಬುರ್ಗಿಯವರು ಯುವ ಸಾಹಿತಿಗಳಿಗೆ ಆಯಾ ಸಾಹಿತ್ಯ ಪ್ರಕಾರಗಳಿಗೆ ಬೇಂದ್ರೆ ಹೆಸರಿನ ಪ್ರಶಸ್ತಿ ನೀಡುವ ಯೋಜನೆಗೆ ಚಾಲನೆ ನೀಡಿದರು. ಅಲ್ಲದೇ ರಾಷ್ಟ್ರ ಮಟ್ಟದ ಕ್ಯಾನ್ವಾಸ ಇಟ್ಟುಕೊಂಡು ನಾಡಿನ ಹಿರಿಯ ಕವಿಗಳಿಗೊಬ್ಬರಿಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಕೊಟ್ಟು ಗೌರವಿಸುವದನ್ನು ಅನುಷ್ಟಾನಗೊಳಿಸಿದರು.ಕನ್ನಡವಲ್ಲದೆ ಬೇರೆ ಭಾಷೆಯ ದಿಗ್ಗಜ ಕವಿಗಳಿಗೆ ಪ್ರಶಸ್ತಿ ನೀಡಿ ಬೇಂದ್ರ ಟ್ರಸ್ಟಿನ ಇರುವಿಕೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಈ ಪ್ರಶಸ್ತಿ ಜ್ಞಾನಪೀಠದಷ್ಟು ಗೌರವ ಪಡಿಯಬೇಕೆಂಬ ಹಂಬಲ ಅವರದಾಗಿತ್ತು. ಅವರಿರುವ ತನಕ ಎಲ್ಲವೂ ಸರಿಯಾಗಿಯೇ ಇತ್ತು.
ಬೇಂದ್ರೆಯವರು ಆಳದಲ್ಲಿ ಜಾತಿಪ್ರಜ್ಞೆಯಿಂದ ಹೊರತಾದವರು. ಅವರ ಕಾವ್ಯವನ್ನು ಓದಿಕೊಂಡವರಿಗೆ ಅವರು ಸನಾತನವಾದ , ವೈದಿಕಶಾಹಿಯನ್ನು ಸೂಕ್ಷ್ಮವಾಗಿ ವಿರೋಧಿಸುವ ಅಂಶಗಳು ಕಾವ್ಯದಲ್ಲಿ ಇರುವುದು ಅರಿವಿಗೆ ಬರುತ್ತದೆ. ಅವರ ಹೆಸರಿನ ಟ್ರಸ್ಟಿನ ಕಾರ್ಯನಿರ್ವಹಣೆಗಳು ಡಾ. ಕಲಬುರ್ಗಿಯವರು ಅಧ್ಯಕ್ಷರಾಗಿರುವವರಿಗೆ ಒಂದು ಜಾತಿಗೆ ಒಂದು ಮನೋಧರ್ಮಕ್ಕೆ ಸೀಮಿತವಾಗದಂತೆ ನಡೆಯುತ್ತಿದ್ದವು.
ಈ ವಿಚಾರವನ್ನು ಯಾಕೆ ಪ್ರಸ್ತಾಪ ಮಾಡಬೇಕಾಗಿದೆ ಎಂದರೆ ಈಗ ಟ್ರಸ್ಟಿನ ಕಾರ್ಯನಿರ್ವಹಣೆ ಹಾಗೆ ಉಳಿದಿಲ್ಲ.. ಧಾರವಾಡದಲ್ಲಿ ಇದ್ದು ಟ್ರಸ್ಟಿನ ಕಾರ್ಯಕ್ರಮ ನೋಡಿದವರಿಗೆಲ್ಲ ಹಾಗೆ ಅನಿಸುವುದು ಸಹಜವಾಗಿದೆ. ಬೇಂದ್ರೆಯಂಥ ಮಹಾನ ಕವಿಯ ಪ್ರಶಸ್ತಿಯನ್ನು ಸಂಘಪರಿವಾರದ ಘೋಷಿತ ತಿಂಕ್ ಟ್ಯಾಂಕ್ ಆದ .. ಅದಕ್ಕೆ ಬೇಕಾದ ಬೌದ್ದಿಕ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನೇ ಮಾಡುತ್ತ ಬಂದಿರುವ ಕೆ.ಎಸ್ ನಾರಾಯಣಾಚಾರ್ಯರಿಗೆ ಕಳೆದ ವರ್ಷ ನೀಡಿದಾಗಲೇ ಅದರ ಗುಣಮಟ್ಟ ನೆಲಕಂಡಿತ್ತು.. ಮುಖ್ಯವಾಗಿ ಇದೊಂದು ಕೊಡುಕೊಳೆಯ ವ್ಯವಹಾರದ ಹಾಗೆ. ತಾವು ಅಧ್ಯಕ್ಷರಾಗುವದಕ್ಕೆ ಕಾರಣವಾದ ವ್ಯವಸ್ಥೆಗೆ ಋಣ ಸಂದಾಯ ಮಾಡುವುದು. ಈಗಿನ ಅಧ್ಯಕ್ಷರಾದ ಶ್ಯಾಮಸುಂದರ ಬಿದರಕುಂದಿಯವರ ಸಂಘ ಪರಿವಾರದ ಪ್ರೇಮ ಮೊದಲಿನಿಂದಲೂ ಗುಟ್ಟಾದ ಸಂಗತಿಯೇನಲ್ಲ.. ಆದರೇನು ಅದನ್ನು ತೋರುಗೊಡದೆ ಎಲ್ಲದರಲ್ಲೂ ಮೂಲ ಬೇರು ಬಿಡದೆ ಬೆರೆಯುವಂತವರು.
ಶಿವರಾಜ ಬೆಟ್ಟದೂರ ಅವರಿಗೆ ಪ್ರಶಸ್ತಿ ನೀಡುವಲ್ಲಿ ಆಗಿರುವ ಅವಘಡವನ್ನು ಕೆದಕಿದ ಹಾಗೆ ಹಿಂದೆ ಆಗಿರುವ ಅನೇಕ ಅವಘಡಗಳು ಎದ್ದು ಬರುತ್ತವೆ.ನನಗಾದ ಅನುಭವವೂ ಅಷ್ಟೇ ಕಹಿಯಾದದು. ಟ್ರಸ್ಟಿನಲ್ಲಿದ್ದವರ ವ್ಯಕ್ತಿತ್ವದ ಕನ್ನಡಿಯಾಗುವಂಥದ್ದು. ಇಷ್ಟುದಿನ ಈ ವಿಷಯವನ್ನು ನಾನು ಎಲ್ಲಿಯೂ ಪ್ರಸ್ತಾಪಿಸಲು ಹೋಗಿರಲಿಲ್ಲ. ಈಗ ಹೇಳಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ ಎಂದು ಅದನ್ನಿಲ್ಲಿ ತೆರೆದಿಡುತ್ತಿರುವೆ
ಕಳೆದ ವರ್ಷ ಬೇಂದ್ರೆ ಟ್ರಸ್ಟ್ 2010 ರ ಸಾಲಿನ ಪ್ರಶಸ್ತಿಗಾಗಿ ವಿವಿಧ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಿದಾಗ ನಾನು ಆ ಸಾಲಿನಲ್ಲಿ ನಮ್ಮ ಪ್ರಕಾಶನ ಪ್ರಕಟಿಸಿದ ನನ್ನ ಸಂಗಾತಿ ವಿಭಾ ಅನುವಾದಿಸಿದ ‘ಹರಿವ ನೀರೊಳಗಿನ ಉರಿ’ ಪುಸ್ತಕವನ್ನು ಪ್ರಶಸ್ತಿ ಪರಿಶೀಲನೆಗಾಗಿ ಕಳಿಸಿಕೊಟ್ಟೆ.. ಈ ಪ್ರಶಸ್ತಿ ಇರುವುದು 35 ವಯಸ್ಸಿನ ಒಳಗಿನ ವಯೋಮಾನದ ಸಾಹಿತಿಗಳಿಗೆ. ವ್ಯವಸ್ಥಾಪಕರು ವಯೋಮಾನದ ನಿಖರತೆಗಾಗಿ ವಿಭಾಳ ಲಿವೀಂಗ್ ಸರ್ಟಿಪಿಕೇಟ್ ಕೇಳಿದರು. ನಾನದನು ಅವರಿಗೆ ತಲುಪಿಸಿದೆ. ಪ್ರಶಸ್ತಿ ವಿತರಣೆ ಒಂದು ವಾರವಿದೆ ಎನ್ನುವಾಗ ಅಧ್ಯಕ್ಷರಾದ ಡಾ. ಶ್ಯಾಮಸುಂದರ ಬಿದರಕುಂದಿಯವರು ಫೋನ್ ಮಾಡಿ ಅನುವಾದ ವಿಭಾಗದಲ್ಲಿ ವಿಭಾ ಅವರ ‘ಹರಿವ ನೀರೊಳಿಗಿನ ಉರಿ’ ಕೃತಿಗೆ ಪ್ರಶಸ್ತಿ ಬಂದಿದೆ. ತುಂಬ ಒಳ್ಳೆಯ ಕೃತಿ ಅದು. ಉತ್ತಮವಾಗಿ ಅನುವಾದಿಸಿದ್ದಾರೆ. ವಿಭಾ ಇದ್ದಿದ್ದರೆ ತುಂಬ ಖುಷಿಯಾಗುತ್ತಿತ್ತು. ಇರಲಿ ಅಂದು ಕಾರ್ಯಕ್ರಮಕ್ಕೆ ಬೇಗ ಬನ್ನಿ. ಮಗಳನ್ನು ಕರೆತನ್ನಿ.. ಟ್ರಸ್ಟಿಗೆ ‘ಹರಿವ ನೀರೊಳಗಿನ ಹರಿ’ ಪುಸ್ತಕದ ಇನ್ನು ಎರಡು ಪ್ರತಿ ಬೇಕು. ಅವನ್ನು ಟ್ರಸ್ಟಿಗೆ ತಲುಪಿಸಿ ಎಂದರು. ನಾನು ಆಗಲಿ ಸರ್ ಎಂದೆ. ಆಮೇಲೆ ಆ ವರ್ಷ ಇತರ ಪ್ರಕಾರಗಳಲ್ಲಿ ಪ್ರಶಸ್ತಿ ಪಡೆದ ನನ್ನ ಕಿರಿಯ ಗೆಳೆಯರು ತಮ್ಮ ಸಂತೋಷವನ್ನು ನನ್ನೊಡನೆ ಹಂಚಿಕೊಂಡರು.
ಪ್ರಶಸ್ತಿ ವಿತರಣೆಗೆ ಇನ್ನೊಂದು ದಿನ ಬಾಕಿ ಇತ್ತು. ಹಿಂದಿನ ದಿನ ಫೋನ್ ಮಾಡಿದ ಶ್ಯಾಮಸುಂದರ ಬಿದರಕುಂದಿಯವರು ಮೊದಲಿಗೆ ಕ್ಷಮೆ ಯಾಚಿಸಿದರು. ವಿಭಾ ಪುಸ್ತಕಕ್ಕೆ ಬಂದ ಪ್ರಶಸ್ತಿಯನ್ನು ಹಿಂತೆಗೆದುಕೊಂಡಿದ್ದೇವೆ. ಹಾಗಂತ ಟ್ರಸ್ಟಿನ ನಿರ್ದೇಶಕರ ಸಭೆಯಲ್ಲಿ ತೀರ್ಮಾನ ತಗೆದುಕೊಳ್ಳಲಾಗಿದೆ. ಈ ಪ್ರಶಸ್ತಿಯನ್ನು ಬೆಳೆಯಬೇಕಾದ ಯುವ ಸಾಹಿತಿಗಳಿಗೆ ಕೊಡುವುದು. ನಿಗದಿತ ವಯೋಮಾನದೊಳಗೆ ವಿಭಾ ಇದ್ದರೂ ತೀರಿಕೊಂಡವರ ಕೃತಿಗಳಿಗೆ ಪ್ರಶಸ್ತಿ ಕೊಡುವುದು ಬೇಡ ಎಂದು ನಿರ್ಣಯವಾಗಿದೆ.. ಕೃತಿ ಬಗ್ಗೆ ಎರಡು ಮಾತೇ ಇಲ್ಲ. ಅಷ್ಟೊಲ್ಲೆ ಕೃತಿ ಅದು ಎಂದರು.ಆ ಕ್ಷಣ ತಿರುಗಿ ಅವರಿಗೆ ನನಗೇನು ಹೇಳಬೇಕೆನಿಸಲಿಲ್ಲ. ಮೌನವಾದೆ. ಆನಂತರ ನನ್ನ ಆಪ್ತರಲ್ಲಿ ಈ ಸಂಗತಿ ಚರ್ಚೆಯಾಯಿತು..
ಕೆಲವು ಪ್ರಶ್ನೆಗಳು ಹಾಗೆ ಉಳಿದುಬಿಟ್ಟವು. ಟ್ರಸ್ಟ್ ಈ ಪ್ರಶಸ್ತಿಯನ್ನು ಕೊಡಲು ಆರಂಭಿಸಿದಾಗ ಇಂಥ ನಿಯಮಾವಳಿಯನ್ನು ಸೇರಿಸಿತ್ತೇ? ಡಾ. ಕಲಬುರ್ಗಿಯವರನ್ನು ಆನಂತರ ಕೇಳಿದಾಗ ಅಂಥ ನಿಯಮಾವಳಿ ಮಾಡಿರಲಿಲ್ಲ ಎಂದರು. ಈಗಿನ ಟ್ರಸ್ಟ್ ನಿರ್ದೇಶಕರು ಇಂತಹ ತೀರ್ಮಾನವೇಕೆ ತಗೆದುಕೊಂಡಿರು ಅನ್ನುವದಕ್ಕಿಂತ ಟ್ರಸ್ಟಿನಲ್ಲಿ ಚರ್ಚೆ ಮಾಡಲಾರದೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತೇ? ಯಾಕೆ ಮಾಡಲಾಯಿತು? ಘೋಷಣೆ ಮಾಡುವ ತುರ್ತು ಏನಿತ್ತು? ಪ್ರಶಸ್ತಿ ಘೋಷಣೆ ಮಾಡಿದ ಮೇಲೆ ಹಿಂತೆಗೆದುಕೊಂಡರೆ ಆಗುವ ಪರಿಣಾಮಗಳೇನು? ಈ ಬಗ್ಗೆ ಉತ್ತರಬೇಕಾದವರು ಯಾರು? ಯಾರಿಗೂ ಬಾಯಿ ಇರಲಿಲ್ಲ.
ಈ ಬಗ್ಗೆ ಶ್ಯಾಮಸುಂದರ ಬಿದರಕುಂದಿಯವರೇನು ಹೇಳಲಿಲ್ಲ .. ನನಗೂ ಅವರನ್ನು ಮತ್ತೆ ಕೇಳಬೇಕೆನಿಸಲಿಲ್ಲ.ಸೂಕ್ಷ್ಮ ವಿಷಯಗಳಲ್ಲಿ ಸಣ್ಣ ಮನಸುಗಳೊಡನೆ ಗುದ್ದಾಡುವದರಲ್ಲಿ ಯಾವ ಅರ್ಥವೂ ಇಲ್ಲವೆನಿಸಿತು.
ಈತನಕ ಪ್ರಕಟವಾದ ವಿಭಾಳ ಮೂರು ಕವನ ಸಂಕಲನಗಳು ( ಅದರಲ್ಲಿ ಎರಡು ಅನುವಾದಗಳು) ಅವಳ ಮರಣೋತ್ತರವೆ ಬಂದಿವೆ..ಕಥಾ ಸಂಕಲನ , ಲೇಖನ ಸಂಕಲನ, ವಿಮರ್ಶೆ ಬರೆಹಗಳ ಕೃತಿಗಳು ಪ್ರಕಟವಾಗಬೇಕು ಆ ಕೆಲಸ ನಡೆದಿದೆ . ಪ್ರಕಟವಾದ ಸಂಕಲನಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕ ವಿದ್ಯಾವರ್ದಕ ಸಂಘದ ಮಾತೋಶ್ರಿ ರತ್ನಮ್ಮ ಹೆಗ್ಗೆಡೆ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಹರಿಹರಶ್ರೀ ಕಾವ್ಯ ಪ್ರಶಸ್ತಿ, ಕ ಸಾಪ ದ ಮಲ್ಲಿಕಾ ದತ್ತಿ ನಿಧಿ ಪ್ರಶಸ್ತಿ. ಇತ್ಯಾದಿ.. ಇವೆಲ್ಲವೂ ಸಿಕ್ಕಿರುವುದು ಮರಣೋತ್ತರವಾಗಿ ಪ್ರಕಟವಾದ ಕೃತಿಗಳಿಗೆ. ಈ ಸಂಘ ಸಂಸ್ಥೆಗಳಿಗೆ ಇಲ್ಲವಾದ ಮರಣೋತ್ತರದ ಪ್ರಶ್ನೆ ಬೇಂದ್ರೆ ಟ್ರಸ್ಟಿಗೆ ಬಂದಿತೇಕೆ ಎಂಬ ಪ್ರಶ್ನೆ ನನಗೆ ಈಗಲೂ ಕಾಡುತ್ತಿದೆ. ಪ್ರಶಸ್ತಿಗೆ ಮುಖ್ಯವಾಗುವುದು ಯಾವುದು ಕೃತಿಯೋ .. ಲೇಖಕನೋ..?
ಈ ಸಂಗತಿ ನನ್ನ ಮನಸಿನ ಮೂಲೆಯಲ್ಲಿಯೇ ಉಳಿದುಬಿಟ್ಟಿತು.. ಶಿವರಾಜ ಬೆಟ್ಟದೂರರ ವಿಷಯ ಕೇಳಿ ಮತ್ತೆ ನೆನಪಿಗೆ ಬಂದಿತು. ಇದಕ್ಕೂ ಪೂರ್ವದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿರುವ ಗಣೇಶ ಅಮೀನಗಡ ಅವರ ಕೃತಿಗೆ ಬಂದ ಪ್ರಶಸ್ತಿಯನ್ನು ಘೋಷಣೆ ಮಾಡಿದ ಮೇಲೆ ಅಪದೆವಿಟ್ ಕಾರಣಕ್ಕಾಗಿ ಗಣೇಶ್ ಕೂಡ ಪ್ರಶಸ್ತಿಯನ್ನು ನಿರಾಕರಿಸಿದ ಘಟನೆ ಜರುಗಿಹೋಗಿದೆ.
ಡಾ. ಶ್ಯಾಮಸುಂದರ್ ಬಿದರಕುಂದಿಯವರು ಅಧ್ಯಕ್ಷರಾಗಿರುವ ತನಕ ಇಂಥ ಅವಘಡಗಳು ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಅವರ ಕಾರ್ಯವೈಖರಿಯೇ ಹಾಗೆ..ಆದರೆ ಕವಿ ಬೇಂದ್ರೆಯವರ ಹೆಸರಿನ ಟ್ರಸ್ಟಿನ ಕಾರ್ಯಗಳು ಈ ರೀತಿ ನಡೆಯಬಾರದಿತ್ತು ಎಂದು ಈ ಹೊತ್ತಿನಲ್ಲೂ ಅನಿಸುತ್ತಿದೆ ಅಷ್ಟೇ.
ಘಟನೆ ಮುಗಿದ ಮೇಲೆ ಮೂರ್ಖನೂ ಜಾಣನಾಗುವುದು ಲೋಕರೂಢಿ.. ಕೆಲವರು ಈ ಲೋಕರೂಢಿಗಳನ್ನು ಮುರಿಯುತ್ತಲೇ ಇರುತ್ತಾರೆ
-ಬಸೂ
Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s