ಸೋಲು ಯಶಸ್ಸಿನ ತಳಹದಿ

                                          ಡಾ. ಗುರುರಾಜ  ಕರ್ಜಗಿ
ಸೋಲು ಗೆಲುವಿನ ತಳಹದಿ  ಎಂದು ಹೇಳುತ್ತಾರೆ. ಆದರೆ, ಕೆಲವರು ಮಾತ್ರ ತಾವು ಕಂಡ ಸೋಲನ್ನು ಸರಿಯಾಗಿ ವಿವೇಚಿಸಿ, ಚಿಂತಿಸಿ, ಸೋಲಿಗೆ ಕಾರಣವಾದ ಸಂಗತಿಗಳನ್ನು ಅರಿತುಕೊಂಡು, ತಿದ್ದಿಕೊಂಡು ಗೆಲುವಿನತ್ತ ಮುಖ ಮಾಡುತ್ತಾರೆ.ಬಹಳಷ್ಟು ಜನ, ಸೋಲನ್ನು ನೆನೆಯುತ್ತ ತಮ್ಮ ಕೈಯಿಂದ ಅದು ಆಗಲಾರದು ಎಂದುಕೊಂಡು, ಅದೃಷ್ಟ ಹಳಿದು ಕೈಚೆಲ್ಲಿ ಕೂಡ್ರುತ್ತಾರೆ. 1958ರಲ್ಲಿ ಫ್ರಾಂಕ್ ಮತ್ತು ಡ್ಯಾನ್ ಕಾರ್ನೆ ಎಂಬ ಅಣ್ಣ ತಮ್ಮಂದಿರು ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜು ಶಿಕ್ಷಣಕ್ಕೆ ಹಣ ಬೇಕಲ್ಲ.

ಅವರದೇ ಆದ ಒಂದು ಕಿರಾಣಿ ಅಂಗಡಿಯಿತ್ತು. ಅಲ್ಲಿಯ ವಸ್ತುಗಳ ಮಾರಾಟದಿಂದ ಬರುವ ಆದಾಯ ಅಷ್ಟಕ್ಕಷ್ಟೇ. ಈ ಹುಡುಗರು ಏನು ಮಾಡುವುದೆಂದು ಚಿಂತಿಸಿದರು. ಈಗ ಹೆಚ್ಚಾಗಿ ಚಲಾವಣೆಯಲ್ಲಿರುವ ವಸ್ತು ಯಾವುದು. ಯಾವುದನ್ನು ತಾವು ಮಾರಬಹುದು ಎಂದು ಸ್ನೇಹಿತರನ್ನೆಲ್ಲ ಕೇಳಿ ಅಭಿಪ್ರಾಯ ಸಂಗ್ರಹಿಸಿದರು.

ಆಗ ಹುಡುಗ-ಹುಡುಗಿಯರಿಗೆ ಪಿಜ್ಜಾ ಹುಚ್ಚು ಹೆಚ್ಚಾಗಿತ್ತು. ಫ್ರಾಂಕ್ ಮತ್ತು ಡ್ಯಾನ್ ಪಿಜ್ಜಾ ತಯಾರಿಸುವ ಘಟಕಕ್ಕೆ ಹೋಗಿ ಚೆನ್ನಾಗಿ ತರಬೇತಿ ಪಡೆದರು. ನಂತರ ಬಂದು ತಮ್ಮ ಕಿರಾಣಿ ಅಂಗಡಿಯ ಒಂದು ಭಾಗದಲ್ಲೇ ಅವುಗಳನ್ನು ತಯಾರಿಸಿ  ಮಾರಾಟ ಮಾಡತೊಡಗಿದರು.

ಈ ಮೊದಲು ಇಬ್ಬರೂ ಹತ್ತಿಪ್ಪತ್ತು ಬೇರೆ ವ್ಯವಹಾರಗಳಲ್ಲಿ ಹಣ ಹಾಕಿ ಸೋತಿದ್ದರು. ಅದರ ಪ್ರತಿಯೊಂದು ಸೋಲಿನ ಕಾರಣಗಳನ್ನು ಚೆನ್ನಾಗಿ ಅರಿತುಕೊಂಡಿದ್ದರು. ಈ ಬಾರಿ ಗಟ್ಟಿ ತೀರ್ಮಾನವನ್ನೇ  ಮಾಡಿದ್ದರು. ಇದು ಒಳ್ಳೆಯ ಉದ್ಯೋಗ, ಸಣ್ಣ ಪುಟ್ಟ ಸೋಲಿಗೆ ಹೆದರದೇ ಗಟ್ಟಿಯಾಗಿ ಇದಕ್ಕೇ ಅಂಟಿಕೊಂಡು, ಗುಣಮಟ್ಟ  ಸುಧಾರಿಸಿಕೊಳ್ಳುತ್ತ ಹೋಗಬೇಕು.

ಈ ಪಿಜ್ಜಾ  ಮಾರಾಟದಲ್ಲೂ ಅವರಿಗೆ ಯಶಸ್ಸು ಹುಡುಕಿಕೊಂಡು ಬರಲಿಲ್ಲ. ಪ್ರತಿಬಾರಿಯೂ ತಮ್ಮ ತಪ್ಪುಗಳಿಂದ ಕಲಿತರು. ತಮ್ಮ ಅಂಗಡಿಯಲ್ಲಿಯೇ ವ್ಯವಹಾರ ನಡೆಸುತ್ತಿದ್ದ ಅವರಿಗೆ ಈ ಅಂಗಡಿ ಒಂದು ಉತ್ತಮ ಸ್ಥಾನದಲ್ಲಿರುವುದರ ಅಗತ್ಯ ತಿಳಿಯಿತು.

ಅಂತೆಯೇ ನಗರ ಮಧ್ಯದಲ್ಲಿ, ಕಾಲೇಜುಗಳ ಹತ್ತಿರವೇ ಅಂಗಡಿ ತೆರೆದರು, ವ್ಯಾಪಾರ ದ್ವಿಗುಣವಾಯಿತು. ನ್ಯೂಯಾರ್ಕಿನ ಅಂಗಡಿ ಸ್ವಲ್ಪ ಬೆಳವಣಿಗೆಯನ್ನು ಕುಗ್ಗಿಸಿಕೊಂಡಾಗ ಕಾರಣ ಹುಡುಕಿದರು.

ಅಲ್ಲಿಯ ಜನರ ರುಚಿಯಲ್ಲಿ ವ್ಯತ್ಯಾಸವಾಗಿತ್ತು. ಓಕ್ಲೊಹೋಮಾದಲ್ಲಿ ಜನರು ಪಿಜ್ಜಾ ಬಿರುಸಾಗಿರಬೇಕು, ಕುರುಕುರು ಆಗಿರಬೇಕು ಎಂದು ಅಪೇಕ್ಷೆ ಮಾಡಿದರೆ ನ್ಯೂಯಾರ್ಕಿನ ಜನ ಪಿಜ್ಜಾ ತುಂಬ ದಪ್ಪವಾಗಿ, ಮೃದುವಾಗಿರಬೇಕು ಎಂದು ಅಪೇಕ್ಷೆ ಪಡುತ್ತಿದ್ದರು.

ಅದನ್ನು ಗಮನಿಸಿ ದಪ್ಪ ಹಾಗು ಮೃದುವಾದ ಪಿಜ್ಜಾಗಳನ್ನು ತಯಾರು ಮಾಡಿದಾಗ ಜನ ಹುಚ್ಚೆದ್ದು ತಿಂದರು, ಅಂಗಡಿಯಲ್ಲಿ ಸ್ಥಳವಿಲ್ಲದಾಗ ರಸ್ತೆಯ ಬದಿಯಲ್ಲಿ ನಿಂತು ತಿಂದರು. ವ್ಯಾಪಾರ ಗಗನಕ್ಕೇರಿತು. ಹೀಗೆ ಪ್ರತಿಸಲ ವೈಫಲ್ಯ ಬಂದಾಗ ಮತ್ತಷ್ಟು ಛಲದಿಂದ ಪುಟದೆದ್ದು ಯಶಸ್ಸನ್ನು ಪಡೆದರು.

ತಮ್ಮ ಅಂಗಡಿಗಳಿಗೆ  `ಪಿಜ್ಜಾ ಹಟ್`  ಎಂದು ಹೆಸರಿಟ್ಟು ಜಗತ್ತಿನೆಲ್ಲೆಡೆ ಮಳಿಗೆಗಳನ್ನು ನಿರ್ಮಿಸಿ ಅದನ್ನು ಮೂವತ್ತು ಕೋಟಿ ಡಾಲರ್‌ಗಳಿಗೆ ಮಾರಾಟಮಾಡಿ ಕೋಟ್ಯಧೀಶರಾದರು.  ಸೋಲೇ ಗೆಲುವಿನ ತಳಹದಿ  ಎಂದು ಈ ಕಾರ್ನೆ ಸಹೋದರರು ಖಚಿತವಾಗಿ ನಂಬುತ್ತಾರೆ. ಸೋಲು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ.

ಸೋಲನ್ನು ನಮ್ಮ ವಿರುದ್ಧವಾಗಿ ನಿಲ್ಲಿಸಿ, ಕೊರಗಿ ಶಕ್ತಿ ವ್ಯಯ ಮಾಡಿಕೊಳ್ಳುತ್ತೇವೋ ಅಥವಾ ಅದನ್ನು ನಮ್ಮ ಸ್ನೇಹಿತನಂತೆ ನಮ್ಮಡನೆ ಸೆಳೆದುಕೊಂಡು, ಕಾರಣವನ್ನು ವಿಶ್ಲೇಷಿಸಿ ಮತ್ತಷ್ಟು ಶಕ್ತಿ ವೃದ್ಧಿಸಿಕೊಳ್ಳುತ್ತೇವೋ ಎನ್ನುವುದು ನಾವು ಜೀವನದಲ್ಲಿ ಪಡೆಯುವ ಯಶ ಅಥವಾ ಸೋಲನ್ನು ನಿರ್ಧರಿಸುತ್ತದೆ.

ಕ್ರಪೆ : ಪ್ರಜಾವಾಣಿ,   : ಜುಲೈ 3 2012 
Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s