ಇಂಗ್ಲಿಷ್ ಸಂವಹನಕ್ಕಾಗಿ ಮಾತ್ರವಲ್ಲ, ಜಗತ್ತಿನ ಜ್ಞಾನ, ಸಾಹಿತ್ಯ ಗ್ರಹಿಸುವ ಕಿಟಕಿ !

                               – ಡಾ. ನಟರಾಜ್ ಹುಳಿಯಾರ್
ಎರಡು ವರ್ಷಗಳ ಕೆಳಗೆ ಗುಲ್ಬರ್ಗ ಸೆಂಟ್ರಲ್ ಯೂನಿವರ್ಸಿಟಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದಾಗ ಒಂದು ಅಂಶವನ್ನು ಗಮನಿಸಿದ್ದೆ: ಇಂಗ್ಲಿಷ್ ಎಂ.ಎ. ಓದುತ್ತಿದ್ದ ಒಟ್ಟು ಅರವತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಕೇವಲ ಇಬ್ಬರು ಮಾತ್ರ ತಪ್ಪಿಲ್ಲದೆ ಇಂಗ್ಲಿಷ್ ಮಾತಾಡಬಲ್ಲವರಾಗಿದ್ದರು.

ಇನ್ನುಳಿದ ವಿದ್ಯಾರ್ಥಿಗಳಿಗೆ ಈ ಸಾಮರ್ಥ್ಯ ಇಲ್ಲದಿರುವುದಕ್ಕೆ ಅವರ ಸಾಮಾಜಿಕ ಹಿನ್ನೆಲೆಯ ಜೊತೆಗೇ ಅವರೆಲ್ಲ ಇಂಗ್ಲಿಷ್ ಕಲಿಕೆಯನ್ನು ತಡವಾಗಿ ಆರಂಭಿಸಿದ್ದು ಕೂಡ ಕಾರಣವಾಗಿತ್ತು. ಈ ಸ್ಥಿತಿಯನ್ನು ನೋಡಿದಾಗ, ಇಂಗ್ಲಿಷ್ ಭಾಷೆಯನ್ನು ತಡವಾಗಿ ಕಲಿಯುತ್ತಿರುವವರ ಕಷ್ಟಗಳು ನನಗೆ ಮನದಟ್ಟಾಯಿತು. ಬಾಲ್ಯದಲ್ಲಿ ಎಲ್ಲ ಮಕ್ಕಳಿಗೂ ಸಾಧ್ಯವಿರುವ ಭಾಷಾಕಲಿಕೆಯ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳದಿರುವುದೇ ಮಕ್ಕಳ ಕಷ್ಟಕ್ಕೆ ಕಾರಣವಾಗಿತ್ತು.

ಈಗಾಗಲೇ ಸಿದ್ಧವಾಗಿರುವ ಹಾಗೆ ಬಾಲ್ಯದಲ್ಲಿ ಸಹಜವಾಗಿ ಇರುವ `ಲಿಂಗ್ವಿಸ್ಟಿಕ್ ಪ್ಲಾಸಿಸಿಟಿ` ಅಥವಾ ಭಾಷಾಕಲಿಕೆಯ ಸಾಮರ್ಥ್ಯದಿಂದಾಗಿ ಮಕ್ಕಳು ನಾಲ್ಕು ಭಾಷೆಗಳನ್ನು ಕಲಿಯಬಲ್ಲರು. ಆದರೆ ಆ ಹಂತ ದಾಟಿದ ನಂತರ ಇಂಗ್ಲಿಷ್ ಕಲಿಕೆಯನ್ನು ಆರಂಭಿಸಿದ ಮಕ್ಕಳು ಅನೇಕ ಬಗೆಯ ಹಿನ್ನಡೆ, ಕೀಳರಿಮೆಗಳನ್ನು ಅನುಭವಿಸುತ್ತಿರುವುದನ್ನು ದಿನನಿತ್ಯ ನೋಡುತ್ತಿದ್ದೇವೆ.

ಆದರೆ ನಮ್ಮ ಸರ್ಕಾರಗಳು ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾದ ನಂತರವೂ ಎಲ್ಲ ಶಾಲೆಗಳಲ್ಲೂ ಕನ್ನಡ ಮಾಧ್ಯಮವನ್ನು ಜಾರಿಗೆ ತರುತ್ತೇವೆಂದು ಹುಸಿ ಭರವಸೆ ಕೊಡುತ್ತಾ ಕಳೆದ ಇಪ್ಪತ್ತು ವರ್ಷಗಳಿಂದ ಕಾಲ ತಳ್ಳುತ್ತಲೇ ಬಂದವು. ಸರ್ಕಾರಿ ಶಾಲೆಗಳ ಮಕ್ಕಳು ಹಿಂದುಳಿಯುತ್ತಲೇ ಬಂದವು. ಆರು ವರ್ಷಗಳ ಕೆಳಗೆ ವಿವಾದ ಕೋರ್ಟಿನಲ್ಲಿದೆ ಎಂಬ ನೆಪವೊಡ್ಡಿ ಕೆಲವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲೂ ಅಡ್ಡಗಾಲು ಹಾಕಲು ಯತ್ನಿಸಿದ್ದರು.

ಇಷ್ಟಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಸುಮಾರಾಗಿಯಾದರೂ ಕಲಿಯಲೆತ್ನಿಸಿರುವ ಮಕ್ಕಳಿಗೆ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರ ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.

ಒಂದು ಅಂದಾಜಿನ ಪ್ರಕಾರ, ರಾಜ್ಯದಲ್ಲಿರುವ ಸುಮಾರು ಇಪ್ಪತ್ತೈದು ಸಾವಿರ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮದ ಶಾಲೆಗಳಿವೆ. ಹತ್ತು ಸಾವಿರಕ್ಕೂ ಹೆಚ್ಚು ಅಧಿಕೃತ, ಅನಧಿಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ.

ಅವುಗಳಲ್ಲೂ ಹಲಬಗೆಯ ಶ್ರೇಣಿಗಳಿವೆ. ಆದರೆ ಕರ್ನಾಟಕದ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಈ ಎರಡು ಬಗೆಯ ಶಾಲೆಗಳ ನಡುವಣ ಸ್ಪರ್ಧೆಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಬಡತನ, ವಾತಾವರಣ ಹಾಗೂ ಇಂಗ್ಲಿಷ್ ಭಾಷೆಯ ಕೊರತೆಯ ಕಾರಣದಿಂದಾಗಿಯೂ ಹಿಂದೆ ಬಿದ್ದ್ದ್ದಿದಾರೆ.

ಮೊನ್ನೆ ತಾನೇ ಫಲಿತಾಂಶ ಪ್ರಕಟವಾಗಿರುವ ಪಿಯುಸಿ ನಂತರದ ಸಿ.ಇ.ಟಿ. ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ತೊಂಬತ್ತರಷ್ಟು ಭಾಗದ ಮಕ್ಕಳು ರ‌್ಯಾಂಕುಗಳನ್ನು ಪಡೆದಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೂಡ ಇಂಗ್ಲಿಷ್ ಮಾಧ್ಯಮದ ಅನುಕೂಲವನ್ನು ಒದಗಿಸುವುದು ಅನಿವಾರ್ಯ.

ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಶೇ.18 ಭಾಗ ಶಿಕ್ಷಕ, ಶಿಕ್ಷಕಿಯರು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ತರಬೇತಿಗೊಂಡಿದ್ದಾರೆ; ಜೊತೆಗೆ, ಈಗಾಗಲೇ ವಿಜ್ಞಾನ ವಿಷಯಗಳನ್ನು ಇಂಗ್ಲಿಷಿನಲ್ಲಿ ಕಲಿಸುತ್ತಿರುವವರು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಡಿ.ಎಡ್ ಪದವಿ ಪಡೆದಿರುವವರು ಕೂಡ ಈ ಕಾರ್ಯಕ್ಕೆ ಸಿದ್ಧವಾಗಿದ್ದಾರೆ. ಆದ್ದರಿಂದ ಇಂಗ್ಲಿಷ್ ಮಾಧ್ಯಮ ಕೇವಲ ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಅಲ್ಲ; ಕರ್ನಾಟಕದಾದ್ಯಂತ ಮಾಧ್ಯಮಿಕ ಹಂತದಲ್ಲಿ ಐಚ್ಛಿಕವಾಗಿಯಾದರೂ ಆರಂಭವಾಗಬೇಕು.

ಆದರೆ, ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಖಾಸಗಿ ಶಾಲೆಗಳಲ್ಲಿರುವಂತೆ ಅವೈಜ್ಞಾನಿಕವಾಗಿ, ಮಾತೃಭಾಷೆಯನ್ನು ಸಂಪೂರ್ಣವಾಗಿ ಹೊರಗಿಟ್ಟು ವಿಷಯಗಳನ್ನು ಕಲಿಸಬಾರದು. ಬದಲಿಗೆ ಮಾತೃಭಾಷೆ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳನ್ನು ಬೆರೆಸಿ ಕಲಿಸುವ ಕ್ರಮವನ್ನು ಆರಂಭಿಸಬೇಕು.

ಇದು ಯಾಂತ್ರಿಕ  ಅನುವಾದ ವಿಧಾನ ಅಲ್ಲ. ಬದಲಿಗೆ ಮಾತೃಭಾಷೆಯಲ್ಲಿ ವಿಷಯವನ್ನು ಗ್ರಹಿಸುವ ಹಾಗೂ ಅದನ್ನು ಎರಡು ಭಾಷೆಗಳಲ್ಲಿ ಮಂಡಿಸುವ ಸಾಮರ್ಥ್ಯವನ್ನು ಕಲಿಸುವ ವಿಧಾನ. ಅದಕ್ಕಾಗಿ ಒಂದು ಪಠ್ಯಪುಸ್ತಕದ ಎಡ ಪುಟದಲ್ಲಿ ಕನ್ನಡ ಅಥವಾ ಇನ್ನಿತರ ಮಾತೃಭಾಷೆಯಲ್ಲಿಯೂ ಹಾಗೂ ಬಲಪುಟದಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೂ ವಿಷಯಗಳನ್ನು ಮುದ್ರಿಸಬೇಕು. ಪುಸ್ತಕ ದೊಡ್ಡದಾಗುತ್ತದೆ ಎಂಬ ಹುಸಿ ನೆಪ ಹೇಳದೆ ಈ ಕೆಲಸ ಮಾಡಬೇಕು.

ಯಾಕೆಂದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಪುಸ್ತಕಗಳ ಗಾತ್ರಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳ ಪುಸ್ತಕಗಳು ತೀರಾ ಕಡಿಮೆ ವಿಷಯಗಳನ್ನು ಒಳಗೊಂಡಿವೆ. ಜೊತೆಗೆ, ಉಚಿತವಾಗಿ ಕೊಡುತ್ತಿದ್ದೇವೆ ಎಂಬ ಅಹಂಕಾರದಿಂದ ಈ ಪುಸ್ತಕಗಳನ್ನು ಆಕರ್ಷಕವಾಗಿ ಮುದ್ರಿಸುತ್ತಲೂ ಇಲ್ಲ. ಸರ್ಕಾರಿ ಶಾಲೆಗಳ ಕಲಿಕೆಯ ವಾತಾವರಣವನ್ನು ಆಕರ್ಷಕವಾಗಿಸಿ, ಮಕ್ಕಳಲ್ಲಿ ಉತ್ಸಾಹ ಉಕ್ಕುವಂತೆ ಮಾಡಬೇಕಾಗಿದೆ.

ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಭಾವುಕವಾಗಿ ವಿರೋಧಿಸುತ್ತಿರುವವರು ತಮಗರಿವಿಲ್ಲದೆಯೇ ಎಲ್ಲ ಜಾತಿಗಳ ಕಡುಬಡವರ ಪ್ರಗತಿಗೆ ವಿರುದ್ಧವಾಗಿದ್ದಾರೆ. ಯಾಕೆಂದರೆ ಇವತ್ತು ಮಕ್ಕಳಿಗಾಗಿ ತಿಂಗಳಿಗೆ ಕನಿಷ್ಠ ಐನೂರು ರೂಪಾಯಿಯನ್ನು ಖರ್ಚು ಮಾಡಬಲ್ಲ ಬಡ ತಂದೆ ತಾಯಂದಿರು ಕೂಡ ತಮ್ಮ ಮಕ್ಕಳನ್ನು ಎಂಥದೋ ಒಂದು ಖಾಸಗಿ ಇಂಗ್ಲಿಷ್ ಶಾಲೆಗೆ ಕಳಿಸುತ್ತಿದ್ದಾರೆ.

ಇತ್ತ ಬಹುತೇಕ ಕಾಲೇಜು, ವಿವಿಗಳ ಶಿಕ್ಷಕ, ಶಿಕ್ಷಕಿಯರು, ಅನೇಕ ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇವರ‌್ಯಾರಿಗೂ ಇಲ್ಲದ ಕನ್ನಡ ರಕ್ಷಣೆ ಜವಾಬ್ದಾರಿಯನ್ನು ಅತಿ ಬಡ ಮಕ್ಕಳು ಮತ್ತು ಅವರ ಪಾಲಕರು ಮಾತ್ರ ಯಾಕೆ ಹೊರಬೇಕು? ಹಲ ಬಗೆಯ ಪ್ರತಿಕೂಲ ವಾತಾವರಣಗಳಲ್ಲಿ ಕಲಿಯುತ್ತಾ, ಕನ್ನಡವನ್ನು ಕಾಪಾಡುತ್ತಿರುವ ಈ ಮಕ್ಕಳಿಗೆ ಆರನೆಯ ತರಗತಿಯಿಂದ ಕೂಡ ಉಳ್ಳವರ ಮಕ್ಕಳ ಜೊತೆ ಸ್ಪರ್ಧಿಸಲು ಅವಕಾಶ ಕೊಡಬಾರದೆಂದು ವಾದಿಸುವುದು ಭಯಾನಕ ಕ್ರೌರ್ಯವಾಗುತ್ತದೆ.

ಹಾಗೆ ನೋಡಿದರೆ, ಈ ಮಕ್ಕಳಿಗೆ ಭಾಷೆಯ ಬಲ ಹಾಗೂ ಆತ್ಮವಿಶ್ವಾಸ ತುಂಬುವ ಸಲುವಾಗಿ ಇಂಗ್ಲಿಷ್ ಬರವಣಿಗೆ ಹಾಗೂ ಅಭಿವ್ಯಕ್ತಿಯನ್ನು ಅತ್ಯಂತ ಸಮರ್ಥವಾಗಿ ಕಲಿಸಿ ಹೊಸ ಜಗತ್ತಿಗೆ ಅಣಿಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ಇಂಗ್ಲಿಷನ್ನು ಸಂವಹನಕ್ಕಾಗಿ ಮಾತ್ರವಲ್ಲದೆ, ಜಗತ್ತಿನ ಜ್ಞಾನ, ಸಾಹಿತ್ಯವನ್ನು ಗ್ರಹಿಸುವ ಕಿಟಕಿಯಾಗಿಯೂ ಕಲಿಸಬೇಕು.

ಅತಿಯಾದ ಉಚ್ಚಾರಣೆಯ ಸಮಸ್ಯೆಯನ್ನು ಮೈಮೇಲೆ ಹಾಕಿಕೊಳ್ಳದೆ, ಜಗತ್ತಿನಲ್ಲಿ ಬಗೆಬಗೆಯ ಇಂಗ್ಲಿಷುಗಳಿವೆ, ಉಚ್ಚಾರಣೆಗಳಿವೆ ಎಂಬ ಅರಿವಿನಲ್ಲಿಯೂ ಇಂಗ್ಲಿಷನ್ನು ಕಲಿಸಬೇಕು. ಇಂಗ್ಲಿಷ್ ಶಿಕ್ಷಣದ ವ್ಯಾಪಾರಿಗಳ ದಂಧೆಗೆ ಕೊನೆ ಹೇಳಲು ಸರ್ಕಾರಿ ಶಾಲೆಗಳಲ್ಲಿ ಅದನ್ನು ಸರಿಯಾಗಿ ಕಲಿಸಬೇಕು.

ಈ ಸನ್ನಿವೇಶವನ್ನು ಸರಿಯಾಗಿ ಗ್ರಹಿಸಲು ಒಂದು ಉದಾಹರಣೆ ನೋಡಿ: ಹಿಂದುಳಿದ ಪ್ರದೇಶವೊಂದರಲ್ಲಿ ಎಕನಾಮಿಕ್ಸ್ ಎಂ.ಎ. ಕಲಿಯುತ್ತಿರುವ  ಬಡ ವಿದ್ಯಾರ್ಥಿಯೊಬ್ಬ ತನ್ನ ಎರಡು ವರ್ಷಗಳ ಎಂ.ಎ.ಕೋರ್ಸಿಗೆ ವಿಶ್ವವಿದ್ಯಾಲಯಕ್ಕೆ ಪಾವತಿಸುತ್ತಿರುವ ಬೋಧನಾ ಶುಲ್ಕ 1000 ರೂಪಾಯಿ; ಆದರೆ  ಖಾಸಗಿ ಸಂಸ್ಥೆಯೊಂದರಲ್ಲಿ ಎರಡು ತಿಂಗಳ ಇಂಗ್ಲಿಷ್ ಕಲಿಕೆಯ ಕೋರ್ಸಿಗೆ ಕೊಟ್ಟ ಶುಲ್ಕ 5000 ರೂಪಾಯಿ! ಅಲ್ಲಿ ಕೂಡ ಅವನು ಸಾಂದರ್ಭಿಕವಾಗಿ ಬಳಸುವ ಇಂಗ್ಲಿಷನ್ನು ತಕ್ಕಮಟ್ಟಿಗೇ ಕಲಿತನೇ ಹೊರತು ಚೆನ್ನಾಗಿಯೇನೂ ಕಲಿಯಲಿಲ್ಲ. ಬಾಲ್ಯದಲ್ಲೇ ಶಾಲೆಯಲ್ಲಿ  ಇಂಗ್ಲಿಷ್ ಭಾಷೆ ಕಲಿತಿದ್ದರೆ ಆ ಸಮಸ್ಯೆಯಿಂದ ಪಾರಾಗುತ್ತಿದ್ದನೇನೋ.

ಇದೇ ಸಂದರ್ಭದಲ್ಲಿ ಉರ್ದು ಮಾಧ್ಯಮದಲ್ಲಿ ಓದುತ್ತಿರುವ ಬಡ ಮುಸ್ಲಿಂ ಮಕ್ಕಳ ಕಷ್ಟವನ್ನು ಕೊಂಚ ವಸ್ತುನಿಷ್ಠವಾಗಿ ಗಮನಿಸಬೇಕು. ಈ ಮಕ್ಕಳಿಗೆ ಏಳನೆಯ ತರಗತಿಯ ನಂತರ ಯಾವ ವಿಷಯಗಳನ್ನೂ ಉರ್ದುವಿನಲ್ಲಿ ಕಲಿಸುತ್ತಿಲ್ಲ. ಹಾಗಾದರೆ ಈ ಮಕ್ಕಳು ಎಲ್ಲಿಗೆ ಹೋಗಬೇಕು? ಈ ಮಕ್ಕಳು ಹೈಸ್ಕೂಲ್ ಹೊತ್ತಿಗೆ ಸ್ಕೂಲು ಬಿಡುತ್ತಿವೆ ಅಥವಾ ಅನಿವಾರ್ಯವಾಗಿ ಎಲ್ಲೋ ವಿರಳವಾಗಿಯಷ್ಟೇ ಇರುವ ಇಂಗ್ಲಿಷ್ ಮಾಧ್ಯಮವನ್ನು ಹುಡುಕಿಕೊಂಡು ಹೋಗುತ್ತಿವೆ.

ಈ ಮಕ್ಕಳು ತಮ್ಮ ಆರ್ಥಿಕ ಬೆಳವಣಿಗೆಗಾಗಿಯಾದರೂ ವಿಷಯಗಳನ್ನು ಅತ್ಯಂತ ಸಮರ್ಥವಾಗಿ ಇಂಗ್ಲಿಷಿನಲ್ಲಿ ಕಲಿಯುವುದು ಅನಿವಾರ್ಯವಾಗಿದೆ. ಇನ್ನು ಇವತ್ತಿನ ಖಾಸಗಿ ಉದ್ಯೋಗಗಳ ಜಗತ್ತಿನಲ್ಲಿ ಇಂಗ್ಲಿಷನ್ನು ಚೆನ್ನಾಗಿ ಬಳಸುವ ಸಾಮರ್ಥ್ಯವನ್ನು ರಾಜ್ಯದ ಒಳಹೊರಗೆ ಬಗೆಬಗೆಯ ಉದ್ಯೋಗಗಳನ್ನು ಹುಡುಕುವ ಎಲ್ಲ ವರ್ಗದವರೂ ಪಡೆಯಬೇಕಾಗಿದೆ; ಇದು ಹೊಟ್ಟೆಪಾಡಿಗೆ ಸಂಬಂಧಿಸಿದ ಪ್ರಶ್ನೆ ಕೂಡ.

ಭಾಷೆಯೇ ಒಂದು ಆಸ್ತಿಯಾಗಿರುವ ಈ ಕಾಲದಲ್ಲಿ ಹೆಣ್ಣುಮಕ್ಕಳ ಉದ್ಯೋಗದ ಸಾಧ್ಯತೆಗಳು ಹಾಗೂ ಆತ್ಮವಿಶ್ವಾಸ ಹೆಚ್ಚಿರುವುದರಲ್ಲಿ ಇಂಗ್ಲಿಷಿನ ಪಾಲೂ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು.

ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಜಾರಿಯನ್ನು ವಿರೋಧಿಸುತ್ತಿರುವವರು  ಹಾಗೂ ಅದನ್ನು ಕನ್ನಡ ವಿರೋಧಿ ಎಂದು ತಿಳಿದವರು ನಿಜಕ್ಕೂ ಕನ್ನಡವನ್ನು ಉಳಿಸಬೇಕಾಗಿರುವುದು ಖಾಸಗಿ ಶಾಲೆಗಳಲ್ಲಿ. ಕನ್ನಡವನ್ನು ಒಂದು ಭಾಷೆಯಾಗಿ ಕೂಡ ಕಲಿಯಲು ಅವಕಾಶ ಕೊಡದ ಅನೇಕ ಶಾಲೆಗಳು ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕಲಿಸುತ್ತಿರುವುದರಿಂದ ಹಾಗೂ ಈ ಧೋರಣೆಗೆ ಕನ್ನಡ ತಂದೆತಾಯಿಗಳೇ ಕುಮ್ಮಕ್ಕು ಕೊಡುತ್ತಿರುವುದರಿಂದ ಕನ್ನಡಕ್ಕೆ ಹೆಚ್ಚಿನ ಧಕ್ಕೆಯಾಗುತ್ತಿದೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರತಿ ತರಗತಿಗೆ ಎರಡು ಕನ್ನಡ ಭಾಷಾಪಠ್ಯಗಳನ್ನಿಟ್ಟು ಈ ಮಕ್ಕಳು ಕನ್ನಡವನ್ನು ದಕ್ಷವಾಗಿ ಕಲಿಯುವಂತೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಹಾಗೆಯೇ ಕನ್ನಡ ಮಾಧ್ಯಮದ ಮಕ್ಕಳು ಕಲಿಯುತ್ತಿರುವ ಇಂಗ್ಲಿಷಿನ ಕ್ರಮವನ್ನು ಇನ್ನಷ್ಟು ಸುಧಾರಿಸಬೇಕು.

ಹಾಗೆಯೇ ಐದನೇ ತರಗತಿಯವರೆಗೆ ಹಾಗೂ ಆನಂತರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ಹುದ್ದೆಗಳನ್ನು ಹಾಗೂ ಹೆಚ್ಚು ಶೈಕ್ಷಣಿಕ ಅವಕಾಶಗಳನ್ನು ಮೀಸಲಿಟ್ಟು, ಪ್ರೋತ್ಸಾಹ ವೇತನಗಳನ್ನು ಕೂಡ ನೀಡಿ ಈ ಬಡ ಮಕ್ಕಳ ಭವಿಷ್ಯವನ್ನು ರೂಪಿಸಬೇಕು.

ಕೃಪೆ : ಪ್ರಜಾವಾಣಿ – ಅಂತರಾಳ

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s