ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ !

                                                      -ಸೂರ್ಯ ಮುಕುಂದರಾಜ್
                                                                

ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಆದೇಶವನ್ನು ಕನ್ನಡದ ಖ್ಯಾತ ಸಾಹಿತಿಗಳೆಲ್ಲ ವಿರೋಧಿಸಿ, ಆದೇಶವನ್ನು ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಒಬ್ಬರು, ಸಾಹಿತ್ಯ ಪರಿಷತ್ತಿನ ಮುಂದೆ ಆಮರಣಾಂತ ಉಪವಾಸ ಕೂಡುವುದಾಗಿ ಪರಿಷತ್ತಿನ ಅಧ್ಯಕ್ಷರು ಹೀಗೆ ತಮಗೆ ತೋಚಿದ ಹೋರಾಟದ ಮಾದರಿಗಳನ್ನೆಲ್ಲಾ ಪ್ರಯೋಗ ಮಾಡುವುದಾಗಿ ಗುಡುಗಿದ್ದಾರೆ. ಇವರೆಲ್ಲರಿಗೂ ಸಾಮಾನ್ಯವಾಗಿ ಎದುರಾಗುವ ಒಂದು ಪ್ರಶ್ನೆಯೆಂದರೆ ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳುಹಿಸಿದ್ದೀರಾ? ಈ ಪ್ರಶ್ನೆಗೆ ಅವರ ಉತ್ತರ ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಅಂತ ಪ್ರತಿ ಪ್ರಶ್ನೆ ಎದುರಾಗುತ್ತದೆ. ಅಂದರೆ ಇವರ ಮಕ್ಕಳು ಮೊಮ್ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು, ಬಡ ಕನ್ನಡಿಗನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಬೇಕು. ಸರ್ಕಾರದ ಮೇಲೆ ಇಷ್ಟೆಲ್ಲಾ ಭೀಕರ ಯುದ್ಧ ಸಾರುವ ಈ ವೀರ ಕನ್ನಡಗರು ಯಾವ ನೈತಿಕತೆಯಿಟ್ಟುಕೊಂಡು ಹೋರಾಟ ಮಾಡುತ್ತಾರೋ ತಿಳಿಯದು.

ಇದಕ್ಕೆ ಸಂಬಂಧಪಟ್ಟಂತೆ ಒಂದು ಘಟನೆಯನ್ನು ಇಲ್ಲಿ ಪ್ರಾಸ್ತಾಪ ಮಾಡುತ್ತೇನೆ. ಕೆಲವು ತಿಂಗಳ ಹಿಂದೆ 5 ಕ್ಕಿಂತ ಕಡಿಮ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಒಂದು ವಿದ್ಯಾರ್ಥಿ ಸಂಘಟನೆ ಶಾಸಕರ ಭವನದಲ್ಲಿ ಸಭೆ ಕರೆದಿತ್ತು. ಆ ಸಭೆಗೆ ಭಾಗವಹಿಸಿದ್ದ ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ನಗರದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಇವರನ್ನು ಎದುರಿಗೆ ಕೂರಿಸಿಕೊಂಡು ನಟ ಕಂ ಚಿಂತಕರೊಬ್ಬರು ನನಗೆ ಈ ವಯಸ್ಸಿನಲ್ಲಿ ರಕ್ತ ಕುದಿತಾ ಇದೆ, ನಿಮಗೆಲ್ಲಾ ಏನೂ ಅನ್ನಿಸ್ತಲ್ಲವಾ? ಅಂತ ಪಾಪದ ಹುಡುಗರ ಮುಂದೆ ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿ ಒಂದೆರೆಡು ನಿಮಿಷ ವೇದಿಕೆಯಲ್ಲಿದ್ದು ನಿರ್ಗಮಿಸಿದರು.

ಬೆಳಿಗ್ಗೆ 10ಕ್ಕೆ ಆರಂಭವಾದ ಈ ಸಭೆ ಮಧ್ಯಾಹ್ನ 2.30 ರವರೆಗೂ ಧೀರ್ಘವಾಗಿ ನಡೆಯಿತು. ಅಲ್ಲಿಯವರೆಗೂ ಈ ಬಡ ಹಾಸ್ಟೆಲ್ ವಾಸಿಗಳು ಹಸಿದ ಹೊಟ್ಟೆಯಲ್ಲಿ ಸರ್ಕಾರದ ಆದೇಶದ ಬಗ್ಗೆ ಕಣ್ಣುಗಳಲ್ಲಿ ಕೆಂಡಕಾರುವಂತಹ ಭಾಷಣಗಳನ್ನು ಕೇಳಿ ಹೋರಾಟಕ್ಕೆ ಸಜ್ಜಾಗಿದ್ದರು. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯಕ್ಕೆ ವೇದಿಕೆ ಕರೆದರು. ಅಷ್ಟರೊಳಗೆ ಹಿರಿಯ ಭಾಷಣಕಾರರೆಲ್ಲಾ ವೇದಿಕೆ ತ್ಯಜಸಿದ್ದರು. ನನ್ನ ಸರಣಿ ಬಂದಾಗ ನೇರವಾಗಿ ಆ ವಿದ್ಯಾರ್ಥಿಗಳಿಗೆ ಕೇಳಿದೆ, “ಬೆಳಿಗ್ಗೆ ಮಾತನಾಡಿದ ಚಿಂತಕರು ನಿಮಗೆ ರಕ್ತ ಕುದಿತಾ ಇಲ್ಲವಾ ಅಂತ ರೋಷ ಇಲ್ಲವಾ ಅಂತ ನಿಮ್ಮಗಳನ್ನ ತಿವಿದು ಹೋದರು. ಅಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನಿಮಗ್ಯಾಕಿರಬೇಕು ರೋಷ? ನೀವೆಲ್ಲಾ ನೇರವಾಗಿ ಕೇಳಬೇಕು, ಸಾರ್ ನಿಮ್ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಾ? ಬಡ ರೈತ ಕೂಲಿಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಹೋಗಬೇಕು ಸಮಾನತೆ ಸಮಾಜವಾದ ಮಾತಾಡೋ ನಿಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗ್ಬೇಕು. ನೀವು ನಮಗಲ್ಲ ಹೇಳಬೇಕಾಗಿರೋದು ಈ ಮಾತನ್ನ,” ಅಂತ ಅವರಿಗೆ ಹೇಳಿ ಅಂತಂದು ವೇದಿಕೆಯಿಂದಿಳಿದೆ.

ಇಷ್ಟೆಲ್ಲಾ ಹೋರಾಟ ಮಾಡುವ ಬದಲು ಶಿಕ್ಷಣ ಸಚಿವರಿಗೆ ಗಡುವು ನೀಡುವುದನ್ನ ಬಿಟ್ಟು ಮೊದಲು ಇವರೆಲ್ಲಾ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಕಲಿಸಲಿ. ಇತ್ತೀಚೆಗೆ ಸಾಹಿತ್ಯ ವಲಯದೊಬ್ಬರ ಶಾಲೆಗೆ ಭೇಟಿನೀಡಿದ್ದಾಗ ಅವರ ಶಾಲೆಯಿರುವ ಹಳ್ಳಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಹೇಳುತ್ತಾ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೆ ಒಬ್ಬನೇ ಶಿಕ್ಷಕನಿದ್ದರೆ ಎಲ್ಲಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದು ತರಗತಿಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರಿಗೆ ಶಾಲೆಯ ವಾತಾವರಣ ಇಷ್ಟವಾಗಲು ಸಾಧ್ಯಾನಾ. ಇಂತಹ ಶಾಲೆಗಳಿಗೆ ಸೇರಿಸೋದು ಅಂದರೆ ಸುಸೈಡ್ ಮಾಡಿಕೊಂಡಂತೆ ಅಂತ ಹೇಳಿ, ಇಷ್ಟೆಲ್ಲಾ ಮಾತನಾಡುವ ಸಾಹಿತಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ರೆ ಸಾಕೆಂದು ಅಭಿಪ್ರಾಯಪಟ್ಟರು.

ನನ್ನ ತಂದೆ ಸಾಹಿತಿಯಾಗಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕನಾಗಿ ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದಾಗ ಇದೇ ಸಾಹಿತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಯಾಕೆ ಸೇರಿಸಿದ್ದೀರಾ ಯಾವುದಾದ್ರು ಖಾಸಗಿ ಶಾಲೆಗೆ ಸೇರ್ಸಿ ನಾವು ಸೀಟ್ ಕೊಡಿಸ್ತೀವಿ ಅಂದವರ ಸಂಖ್ಯೆಯೇ ಹೆಚ್ಚು. 5ನೇ ತರಗತಿ ಎಲ್.ಕೆ.ಜಿ. ಮಕ್ಕಳು ಕಲಿಯುವ ‘ಎ’ ಫಾರ್ ಆಪಲ್ ಕಲಿಯೋಕೆ ನನ್ನ ಸಹಪಾಠಿಗಳು ತಿಣುಕಾಡುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ದುಃಖವಾಗುತ್ತೆ. ನಗರದಲ್ಲೇ ಇದ್ದು ಇಲ್ಲಿನ ಇಂಗ್ಲಿಷ್ ಕಾಂಪ್ಲೆಕ್ಸ್‌ಗಳ ಮಧ್ಯೆ ಸಿಲುಕಿ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿದವರ ಸಂಖ್ಯೆ ಹೆಚ್ಚು. ಬೆಳಿಗ್ಗೆಯೆದ್ದು ಪೇಪರ್ ಹಾಕಿ, ತಂದೆಯೊಂದಿಗೆ ಇಡ್ಲಿ ಮಾರಿ, ಮನೆ ಮನೆಗೆ ಹೂ ಮಾರಿ 10 ಗಂಟೆಗೆ ಶಾಲೆಗೆ ಬರುತ್ತಿದ್ದ ಈ ಪ್ರತಿಭಾವಂತರು 5ನೇ ಕ್ಲಾಸಿನ ಇಂಗ್ಲಿಷ್ ಗುಮ್ಮಕ್ಕೆದಿರಿ ಓದಿಗೆ ವಿದಾಯ ಹೇಳಿದರು. ಈ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೆ ತಮ್ಮ ಮಕ್ಕಳ ಸುಖದ ಬಗ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ, ಇವರ ಮಕ್ಕಳು ಬರೆದ ಇಂಗ್ಲಿಷ್ ಕವನಕ್ಕೆ ಚಪ್ಪಾಳೆ ತಟ್ಟಿ ಆನಂದಿಸುವವರು ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ ಸಹಿಸದಿರೋದು ಎಷ್ಟು ಸರಿ.

ಸುಶಿಕ್ಷಿತ ತಂದೆತಾಯಿಗಳ ಮಕ್ಕಳಲ್ಲದ, ಸ್ಲಂಗಳಿಂದ ಬಂದು ವಿದ್ಯೆ ಕಲಿಯುವ ಈ ಮಕ್ಕಳು ಯಾಕೆ ಕೀಳರಿಮೆಯಿಂದ ನರಳಬೇಕು? ಭ್ರಷ್ಟಾಚಾರದ ಬಗ್ಗೆ ಕವಿತೆ ಬರೆಯುವ ಕವಿ ಉಪನ್ಯಾಸಕರೊಬ್ಬರು ತಮ್ಮ ಮಗನನ್ನು ಒಂದನೇ ಕ್ಲಾಸಿಗೆ ಇಂಗ್ಲಿಷ್ ಕಲಿಯಲಿ, ನನ್ನಂತ ಕನ್ನಡ ಎಂ.ಎ. ಮಾಡಿ ಕಷ್ಟ ಪಡಬಾರದು ಅಂತ ಸೇರಿಸಿದ್ದು ಯಾವ ಶಾಲೆಗೆ ಗೊತ್ತಾ? ರಿಂಗ್ ರಸ್ತೆ ಪಕ್ಕದ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿ ಕೇಸು ಹಾಕಿಸಿಕೊಂಡ ಹಾಲಿ ಸಚಿವರೊಬ್ಬರು ನಡೆಸುತ್ತಿರುವ ಶಾಲೆಗೆ. ಸಾಹಿತಿಗಳಲ್ಲೇ ದ್ವಂದ್ವವಿರುವಾಗ ಹೇಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದನ್ನು ವಿರೋಧಿಸುತ್ತಿರುವುದು ಮಾತ್ರ ಅಸಹನೀಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲಿ. ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು. ಹಾಗಾದರೆ ಮಾತ್ರ ಸಾಹಿತಿಗಳು ಹೇಳುವ ಸಮಾನ ನ್ಯಾಯ ಪಾಲನೆಯಾಗುತ್ತದೆ. ಪರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುವ ಮೂಲಕ ಹೊಸ ಮಾದರಿಯ ಹೋರಾಟ ಮಾಡಲಿ.

 

ಕೃಪೆ : ವರ್ತಮಾನ
Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s