ಸಿದ್ಧಲಿಂಗಯ್ಯನವರ ಹೊಗಳು ಭಟ್ಟಂಗಿತನ ಎಲ್ಲಿಯವರೆಗೆ ?

ಬೆಂಕಿಯಲ್ಲಿ ಬೆಂದ ಬಡವರಿಗೆ, ಒಡಲಾಳದ ಉರಿಗೆ ನಲುಗಿಹೋದ ಅಸಹಾಯಕರಿಗೆ ದನಿಯಾದವರು ಸಿದ್ಧಲಿಂಗಯ್ಯ. ಅವರ ನೋವಿಗೆ ಮಿಡಿದವರು ಸಿದ್ಧಲಿಂಗಯ್ಯ. ಅವರ ಬದುಕನ್ನೇ ಬರಹಕ್ಕೆ ಇಳಿಸಿದವರು ಸಿದ್ಧಲಿಂಗಯ್ಯ. ಕುಗ್ಗಿ ಕಾಲಕಸವಾದವರ ಬದುಕಿಗೊಂದು ಆಶಾಕಿರಣವಾದವರು ಸಿದ್ಧಲಿಂಗಯ್ಯ. ವ್ಯವಸ್ಥೆಗೆ ವಿರುದ್ಧವಾಗಿ ಸಿಡಿದೆದ್ದು ನಿಂತವರು ಸಿದ್ಧಲಿಂಗಯ್ಯ. ಕನ್ನಡ ಸಾಹಿತ್ಯಕ್ಕೆ ಬಂಡಾಯದ ಬಿಸಿ ಮುಟ್ಟಿಸಿದವರು ಸಿದ್ಧಲಿಂಗಯ್ಯ. ಬಂಡೆಗಲ್ಲುಗಳೂ ಬಾಯ್ಬಿಡುವಂತೆ ಮಾಡಿದವರು ಸಿದ್ಧಲಿಂಗಯ್ಯ. ಕವನಗಳು ಸಾವಿರಾರು ನದಿಗಳಾಗಿ ಕ್ರಾಂತಿಗೀತೆಗಳ ರೂಪದಲ್ಲಿ ನಾಡಿನ ತುಂಬಾ ಹರಿದಾಡುವಂತಾಗಿದ್ದು ಸಿದ್ಧಲಿಂಗಯ್ಯನವರಿಂದ….
ಎಷ್ಟೆಲ್ಲ ಸಾಧನೆ, ಸಾರ್ಥಕ, ಸಂತೃಪ್ತಭಾವ ಒಬ್ಬ ವ್ಯಕ್ತಿಯ ಒಂದಷ್ಟು ಕವನಗಳಿಂದ!?
ಹಾಗೆಯೇ ಸಿದ್ಧಲಿಂಗಯ್ಯನವರು ಕೂಡ- ಕವಿಯಾದರು- ದಲಿತ ಕವಿಯಾದರು- ಬಂಡಾಯಗಾರರಾದರು. ದಿನ ಬೆಳಗಾಗುವುದರಲ್ಲಿ ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾದರು. ಕವನಗಳು ಕ್ರಾಂತಿ ಕಹಳೆ ಮೊಳಗಿಸಿದವು, ಶಿಷ್ಟ ಸಾಹಿತ್ಯಕ್ಕೆ ಉತ್ಕೃಷ್ಟತೆಯನ್ನು ತಂದುಕೊಟ್ಟವು. ಸಿದ್ಧಲಿಂಗಯ್ಯನವರು ಸಾವಿರಾರು ಯುವ ಕವಿಗಳಿಗೆ ಮಾದರಿಯಾದರು. ಜನಪ್ರಿಯ ವ್ಯಕ್ತಿಯಾದರು. ಹೋದಲೆಲ್ಲ ಸನ್ಮಾನ, ಊರೂರಲ್ಲಿ ಮೆರವಣಿಗೆ.
ದಿನಗಳುರುಳಿದಂತೆ, ಕಾಲಚಕ್ರ ತಿರುಗಿದಂತೆ, ವಯಸ್ಸಾದಂತೆ, ಕರಿ ಕುರುಚಲು ಗಡ್ಡ ಬಿಳಿಯಾದಂತೆ ಸಿದ್ದಲಿಂಗಯ್ಯನವರೂ ಬದಲಾದರು. ಅಧಿಕಾರಿಗಳು ಮತ್ತು ಅಧಿಕಾರಸ್ಥರಿಗೆ ಹತ್ತಿರವಾದರು. ಉಳ್ಳವರ ಒಡ್ಡೋಲಗದಲ್ಲಿ ಓಲಾಡತೊಡಗಿದರು. ಅಧಿಕಾರ ಅರಸಿ ಅಂಗಳಕ್ಕೇ ಬಂತು. ಯಾವುದರ ವಿರುದ್ಧ ಹೋರಾಡಿದ್ದರೋ ಅದರ ಅವಿಭಾಜ್ಯ ಅಂಗವೇ ಆಗಿಹೋದರು. ಯಾರ ವಿರುದ್ಧ ಸಿಡಿದೆದ್ದಿದ್ದರೋ ಅವರ ಕಹಳೆ ಕೊಂಬಾದರು. ಅವರೇ ವ್ಯವಸ್ಥೆಯಾದರು. ಅವ್ಯವಸ್ಥೆಗೆ ಮಾದರಿಯಾದರು. ಬಿಳಿ ಗಡ್ಡ ಕಪ್ಪಗಾಯಿತು. ಮಸಿ ಎಲ್ಲವನ್ನೂ ನುಂಗಿತು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದಲಿತರೆಂದರೆ ಪ್ರೀತಿ. ದಲಿತರ ಪ್ರತಿನಿಧಿಯಂತಿದ್ದ ಸಿದ್ದಲಿಂಗಯ್ಯನವರನ್ನು ಎಂಎಲ್‌ಸಿ ಮಾಡಿದರೆ ದಲಿತೋದ್ಧಾರವಾಗುತ್ತದೆ ಎಂದು ಭ್ರಮಿಸಿದ್ದ ಹೆಗಡೆ, ಕವಿಗೆ ಕುರ್ಚಿಯ ರುಚಿ ಹತ್ತಿಸಿದರು. ಕುರ್ಚಿ ಮೇಲೆ ಕೂತ ಕ್ಷಣದಿಂದಲೇ ಸಿದ್ದಲಿಂಗಯ್ಯ ದಲಿತರನ್ನು ಮರೆತರು. ಬಂಡಾಯಕ್ಕೆ ಬೆಂಕಿ ಹಾಕಿ ಬೂದಿ ಮಾಡಿದರು. ತಮ್ಮ ಹಳೆಯ ಕ್ರಾಂತಿಗೀತೆಗಳನ್ನು ಇಂದಿನ ವ್ಯವಸ್ಥೆಗೆ ಒಗ್ಗುವಂತೆ ತಿದ್ದಿ ಮರು ಮುದ್ರಿಸಿದರು. ಮಠ ಮಾನ್ಯಗಳಿಗೆ ಹೊಕ್ಕಿ ಮಠಾಧೀಶರ ಕಾಲಿಗೆ ಬಿದ್ದರು. ಪಕ್ಷಾತೀತ ವ್ಯಕ್ತಿಯಾದರು, ಪಕ್ಕಾ ರಾಜಕಾರಣಿಯಾದರು, ಅಜಾತಶತ್ರುವಾದರು. ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ, ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯ ಯಡಿಯೂರಪ್ಪ- ಉದ್ದಕ್ಕೂ ಅಧಿಕಾರಸ್ಥರನ್ನು ಓಲೈಸಿಕೊಂಡೇ ಬಂದರು. ಅಧಿಕಾರವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದರು.
ಎಲ್ಲಾ ಕಾಲಕ್ಕೂ, ಎಲ್ಲಾ ಕಡೆಯೂ, ಎಲ್ಲೆಲ್ಲಿಯೂ ಸಿದ್ಧ-ಲಿಂಗಯ್ಯನಾದರು.
ಓದಿ, ಬೆಳೆದು ಬಂದ ಪರಿಶ್ರಮಕ್ಕೆ ಸಿಕ್ಕಿದ್ದು ಬೆಂಗಳೂರು ಯೂಸಿವರ್ಸಿಟಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥನ ಸ್ಥಾನ. ಅಲ್ಲಿದ್ದಷ್ಟು ದಿನವೂ ಪಾಠ ಮಾಡದೆ ದಾಖಲೆ ಬರೆದುಹೋದರು.

ನೋವುಂಡ ಜನರ ಪ್ರತಿನಿಧಿಯಾಗಿ, ಕವಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದಕ್ಕೆ ಸಿಕ್ಕಿದ್ದು ಎಂಎಲ್‌ಸಿ (ಎರಡು ಟರ್ಮ್), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ. ಅಧಿಕಾರದ ಕುರ್ಚಿಯಲ್ಲಿ ಕೂತಷ್ಟು ದಿನವೂ ದಲಿತರನ್ನು ನೆನೆಯದೆ, ಕನ್ನಡವನ್ನು ಕಟ್ಟಿ ಬೆಳೆಸದೆ ಸ್ವಾರ್ಥಿಯಾದರು.
ಇಂತಹ ವ್ಯಕ್ತಿಗೆ ಮತ್ತೆ ಈಗ, ಸಂಘ ಪರಿವಾರದ ಸತ್ರದಲ್ಲಿ ಸನ್ಮಾನ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ!?
ಕೃಪೆ : ಗಾಳಿ ಬೀಜ ಬ್ಲಾಗ್

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s