ಅವಧಿಗೆ ಮುನ್ನವೇ ಕಂಡ ಮಕರಜ್ಯೋತಿ !

ತಿರುವನಂತಪುರ: ಮಕರ ಸಂಕ್ರಮಣದ ದಿನ ಸಾಂಪ್ರದಾಯಕವಾಗಿ ಗೋಚರಿಸುತ್ತಿದ್ದ ಮಕರಜ್ಯೋತಿ ಮುನ್ನಾ ದಿನವಾದ ಶನಿವಾರ ಸಂಜೆ ಏಳು ಗಂಟೆಗೆ ಶಬರಿಮಲೆ ದೇವಸ್ಥಾನದ ಬಳಿಯ ಪೊನ್ನಂಬಲಮೇಡುವಿನಲ್ಲಿ ಕಾಣಿಸಿದ್ದರಿಂದ ಭಕ್ತರು ಮತ್ತು ಅಧಿಕಾರಿಗಳು ಆತಂಕಗೊಂಡ ಘಟನೆ ನಡೆದಿದೆ. ಈ ಬಗ್ಗೆ ಕೇರಳದ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಮಕರ ಸಂಕ್ರಾಂತಿಯನ್ನು ಭಾನುವಾರ ಆಚರಿಸಲಾಗುತ್ತಿದ್ದು, ಶನಿವಾರ ಗೋಚರವಾಗಿರುವ ಜ್ಯೋತಿಯನ್ನು ಮಕರಜ್ಯೋತಿ ಎಂದು ಭಾವಿಸಬಾರದು ಎಂದು ತಿರುವಾಂಕೂರು ದೇವಸ್ಥಾನ ಮಂಡಲಿ ಸ್ಪಷ್ಟಪಡಿಸಿದೆ. ಭಾರಿ ಬಂದೋಬಸ್ತ್ ಮಧ್ಯೆಯೂ ಶನಿವಾರ ರಾತ್ರಿಯೇ ಜ್ಯೋತಿ ಹೇಗೆ ಬೆಳಗಿತು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಪಟ್ಟನಂತಿಟ್ಟು ಮತ್ತು ಕೊಟ್ಟಾಯಂ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಶಬರಿಮಲೆ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಡಿಜಿಪಿ ಪಿ. ಚಂದ್ರಶೇಖರನ್ ಅವರು ತಿಳಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸಂಕ್ರಾಂತಿ ಆಚರಿಸಲು ನಿರ್ಧರಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಲಿಯು ಪೊನ್ನಂಬಲಮೇಡುವಿನಲ್ಲಿ ಭಾನುವಾರ ಸಂಜೆ 6.30ಕ್ಕೆ ಜ್ಯೋತಿ ಬೆಳಗಿಸುವಂತೆ ಅರ್ಚಕರಿಗೆ ಸೂಚಿಸಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೀಪಾರಾಧನೆ ನಡೆಯುತ್ತದೆ. ಮಕರಜ್ಯೋತಿಯು ನೈಸರ್ಗಿಕವಾಗಿ ಮೂಡುವ ಬೆಳಕು ಎಂದೇ ನಂಬಲಾಗಿತ್ತು. ಕಳೆದ ವರ್ಷ ಈ ಬಗ್ಗೆ ದೊಡ್ಡ ವಿವಾದ ಉಂಟಾಗಿ ಕೊನೆಗೆ ದೇವಸ್ಥಾನ ಮಂಡಲಿಯು `ಮಕರಜ್ಯೋತಿ ಮಾನವ ನಿರ್ಮಿತ` ಎಂದು ಒಪ್ಪಿಕೊಂಡಿದ್ದರಿಂದ ವಿವಾದ ತಣ್ಣಗಾಯಿತು.

ಮಕರ ಜ್ಯೋತಿ ಬೆಳಗುವ ಸಂದರ್ಭದಲ್ಲಿಯೇ  ಆಕಾಶದಲ್ಲಿ ನಕ್ಷತ್ರವೊಂದು ಮಿನುಗುವುದರಿಂದ ಈ ಘಟನೆಗೆ ದೈವಿಕ ಭಾವನೆ ಮೂಡಿದೆ ಎಂದೂ ದೇವಸ್ಥಾನ ಮಂಡಲಿ ತಿಳಿಸಿತ್ತು.

ಪೊಲೀಸರು ಪೊನ್ನಂಬಲಮೇಡು ಪ್ರದೇಶದ ಪ್ರವೇಶಕ್ಕೆ ನಿಷೇಧ ಹೇರಿದ್ದು, ಕೆಲವೇ ಕೆಲವು ಅಧಿಕಾರಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ. ಸಾಂಪ್ರದಾಯಿಕ ಮಕರಜ್ಯೋತಿ ಬೆಳಗುವ ಪೊನ್ನಂಬಲಮೇಡುವನ್ನು ರಕ್ಷಿಸಲು ಈಗಿನ ದೇವಸ್ಥಾನದ ಆಡಳಿತ ಮಂಡಲಿ ವಿಫಲವಾಗಿದೆ ಎಂದು ಟೀಕಿಸಿರುವ  ಮಾಜಿ ಅಧ್ಯಕ್ಷ ಜಿ. ರಾಮನ್ ನಾಯರ್ ಅವರು, ಪೊಲೀಸರ ಬಿಗಿ ಕಾವಲಿದ್ದರೂ ಅಲ್ಲಿಗೆ ತೆರಳಿ ಜ್ಯೋತಿ ಬೆಳಗಿಸಿದ್ದಾದರೂ ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪೊನ್ನಂಬಲಮೇಡುವಿನಲ್ಲಿ ಮೊದಲಿನಿಂದ ಜ್ಯೋತಿ ಬೆಳಗಿಸುತ್ತಿದ್ದ ಮಾಲಾ ಆರ್ಯ ಬುಡಕಟ್ಟು ಜನರೇ ಜ್ಯೋತಿಯನ್ನು ಬೆಳಗಿಸರಬಹುದು ಎಂಬ ಶಂಕೆ ಮೂಡಿದೆ. ತಿರವಾಂಕೂರು ದೇವಸ್ಥಾನ ಮಂಡಲಿ ದೇವಸ್ಥಾನದ ಆಡಳಿತವನ್ನು ವಶಕ್ಕೆ ತೆಗೆದುಕೊಂಡು ಜ್ಯೋತಿ ಬೆಳಗಿಸುವ ತಮ್ಮ ಸಾಂಪ್ರದಾಯಿಕ ಹಕ್ಕನ್ನು ಕಸಿದುಕೊಂಡಿದೆ ಎಂದು ಬುಡಕಟ್ಟು ಜನರ ಸಂಘವು ಈ ಹಿಂದೆ ಆಪಾದಿಸಿತ್ತು.

ಮಕರಜ್ಯೋತಿಯನ್ನು ಮಕರ ಸಂಕ್ರಾಂತಿಯಂದೇ ಬೆಳಗಿಸಲಾಗುತ್ತದೆ. ಯಾರೋ ಕಿಡಿಗೇಡಿಗಳು ಶನಿವಾರವೇ ಜ್ಯೋತಿ ಬೆಳಗಿಸಿ ಗೊಂದಲ ಸೃಷ್ಟಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಸತ್ಯ ಸಂಗತಿ ಬಯಲಾಗಲಿದೆ ಎಂದು ಶಬರಿಮಲೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಸತೀಶ್ ಕುಮಾರ್ ತಿಳಿಸಿದ್ದಾರೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s