ಗಾಂಧಿ-ಅಂಬೇಡ್ಕರ್ ಮತ್ತು ನಮ್ಮ ತಪ್ಪು ನಿಲುವುಗಳು !

 

 

ರವಿವಾರದ ಪ್ರಜಾವಾಣಿ ಸಾಪ್ತಾಹಿಕದಲ್ಲಿ (4-12-2011)  ಎನ್.ಎಸ್. ಶಂಕರ್ ಎಂಬುವವರು ಅಂಬೇಡ್ಕರ್ ಪರಿನಿರ್ವಾಣ ದಿನದ ಸಂದರ್ಭದಲ್ಲಿ ಒಂದು ವಿಶೇಷ ಲೇಖನ ಬರೆದಿದ್ದಾರೆ. ನಿಜಕ್ಕೂ ಅದೊಂದು ವಿಶೇಷವಾದ ಲೇಖನವೇನೂ ಅಲ್ಲ ! ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸರಿಯಾಗಿ ಗ್ರಹಿಸದೆ ಅಥವಾ ಗ್ರಹಿಸಿದರೂ ಅವರ ವಿಚಾರಗಳಿಗೆ ಸಮ್ಮತಿಯಿಲ್ಲದ ಮನೋಭಾವದವರು ಹೀಗೆ ಬರೆಯುವುದರಲ್ಲಿ ಅಚ್ಚರಿ ಪಡುವಂಥದ್ದೇನೂ  ಇಲ್ಲ. ಯಾಕೆಂದರೆ ಇಂಥ ದಿಕ್ಕುಗಾಣದ ಅಭಿಪ್ರಾಯಗಳು ಇಂದು ನಿನ್ನೆಯವಲ್ಲ ; ಅವುಗಳಿಗೂ ದೊಡ್ಡ ಇತಿಹಾಸವೇ ಇದೆ. ಗಾಂಧಿಯನ್ನು ಖಳನಾಯಕನನ್ನಾಗಿ ನೋಡಿದ್ದು ಯಾರು ಮತ್ತು ಯಾಕೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಒಂದು ವೇಳೆ ಗಾಂಧಿ-ಅಂಬೇಡ್ಕರ್ ಇಬ್ಬರೂ ಒಂದೇ ಹೋರಾಟದ ಎರಡು ವಿಭಿನ್ನ ಧ್ವನಿಗಳು ಎಂದು ಗುರುತಿಸೋಣ ; ಆದರೆ ಹಾಗೆ ಗುರುತಿಸುವಾಗ ಐತಿಹಾಸಿಕ ಸತ್ಯಗಳನ್ನು ಮರೆ ಮಾಚಿ ಮಾತನಾಡುವುದು ಸರಿಯಲ್ಲ. ಗಾಂಧಿ, ದಲಿತರ ವಿರೋಧಿಯಲ್ಲ ಎಂಬುದು ಎಷ್ಟು ಸತ್ಯವೋ ಅಷ್ಟೇ ಅವರು ದಲಿತಪರವಾದ ಕಾಳಜಿಯನ್ನೂ ಹೊಂದಿರದ ವ್ಯಕ್ತಿ. ‘ಹರಿಜನ’ ಎಂಬ ಒಂದು ಪತ್ರಿಕೆಯನ್ನು ಪ್ರಕಟಿಸಿ, ಕೆಲ ಅಸಹ್ಯಕರವಾದ ಆಚರಣೆಗಳನ್ನು ಪಾಲಿಸದಂತೆ ಸಮೂಹದಲ್ಲಿ ತೋರಿಸಿಕೊಳ್ಳುವುದು ಕೇವಲ ಡಾಂಭಿಕತೆ ಅಷ್ಟೆ ! ಕೇವಲ ಪೂನಾ ಒಪ್ಪಂದ ಮಾತ್ರವಲ್ಲ ; ಗಾಂಧಿಯ ನಡೆಯನ್ನು ನಿರಾಕರಿಸಲು ಇನ್ನೂ ಬಹಳಷ್ಟು ಕಾರಣಗಳು ಇವೆ ಎಂಬುದನ್ನು ಮರೆಯಬಾರದು ; ಮರೆತು ಮಾತನಾಡಿದರೆ ಅದನ್ನು ‘ಜ್ಞಾನ, ಅರೆಜ್ಞಾನ ಮತ್ತು ಅಪಕಲ್ಪನೆ’ಎನ್ನಬೇಕಾಗುತ್ತದೆ ! 
1930 ರಲ್ಲಿ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೇಲೆ ‘ಅಂಬೇಡ್ಕರ ಇನ್ನೂ ಸಾರ್ವಜನಿಕ ಜೀವನವನ್ನು ಪ್ರವೇಶಿಸಿರಲೂ ಇಲ್ಲ’ ಎಂಬ ವ್ಯಾಖ್ಯಾನ ಮಾಡುವುದು ಅಜ್ಞಾನವಲ್ಲದೇ ಮತ್ತೇನು ? ಇದು ಡಾ.ಬಾಸಾಹೇಬ ಅಂಬೇಡ್ಕರ ಬಗ್ಗೆ ಇರುವ ಅರೆಜ್ಞಾನ ಎನ್ನಬೇಕಾಗುತ್ತದೆ. 1930 ಕ್ಕಿಂತಲೂ ಮುಂಚೆಯೇ ಡಾ. ಬಾಬಾಸಾಹೇಬರು ಮಾಡಿರುವ ಕಾರ್ಯಗಳ ಬಗ್ಗೆ ಯಾಕೆ ಇವರು ಅರಿವು ಇಟ್ಟುಕೊಂಡು ಮಾತಾಡುವುದಿಲ್ಲ ? 1920 ರಲ್ಲಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ ‘ಮೂಕ ನಾಯಕ’ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. 1924 ರಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪನೆ ಮಾಡಿದರು. 1927 ರ ಎಪ್ರಿಲ್ ತಿಂಗಳಲ್ಲಿ ‘ಬಹಿಷ್ಕೃತ ಭಾರತ’ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಅದೇ ವರ್ಷ ಮುಂಬಯಿ ವಿಧಾನಮಂಡಲದ ಸದಸ್ಯರಾದರು. ಅದೇ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ;ಸಮಾಜ ಸಮತಾ ಸಂಘ’ ಸ್ಥಾಪಿಸಿದರು. ಅದೇ 1927 ರ ನವ್ಹೆಂಬರ್ ತಿಂಗಳಲ್ಲಿ ಅಮರಾವತಿಯ ಅಂಬಾದೇವಿಯ ಮಂದಿರ ಪ್ರವೇಶ ಚಳುವಳಿ ನಡೆಸಿದರಲ್ಲದೆ, ಡಿಸೆಂಬರ್ ತಿಂಗಳಿನಲ್ಲಿ ‘ಮನುಸ್ಮೃತಿ’ ಮಹಾಡದಲ್ಲಿ ಸುಟ್ಟು ಹಾಕಿ ವೈದಿಕ ಸನಾತನಿ ಸಂಪ್ರದಾಯಕ್ಕೆ ಸವಾಲು ಹಾಕಿದರು. ಐತಿಹಾಸಿಕತೆ ರೂಪಿಸಿದ ನಾಶಿಕದ ‘ಕಾಳಾರಾಮ ಮಂದಿರ ಪ್ರವೇಶ ಚಳುವಳಿ’ ನಡೆಸಿದ್ದೂ 1930 ಮಾರ್ಚ್ ತಿಂಗಳಲ್ಲಿ ; ಆನಂತರವೇ ಅಂದರೆ ಅದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಇಂಗ್ಲಂಡಿಗೆ ಹೋದರು. ಅವರು ಇಂಗ್ಲಂಡಿಗೆ ಹೋಗುವುದಕ್ಕಿಂತ ಮುಂಚೆಯೇ ಇಷ್ಟೆಲ್ಲ ಸಾಮಾಜಿಕ ಕಾರ್ಯಗಳನ್ನು ಮಾಡಿದರೂ ಏನೂ ಮಾಡಿಯೇ ಇಲ್ಲ ಎಂದು ಹೇಳಿಕೆ ಕೊಡುವುದು ಅರೆಜ್ಞಾನದಿಂದ ಬಂದ ಅಹಂಕಾರವೇ ಸರಿ. ಒಂದು ಲೇಖನ ಬರೆಯುವಾಗ ವಿಷಯದ ಆಳ-ಅಗಲಗಳನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ತಿಳಿದುಕೊಂಡಿದ್ದರೂ ಮರೆಮಾಚಿ ಸುಳ್ಳನ್ನು ಹೇಳುವ ಮೂಲಕ ಅವಮಾನಿಸುವ ಪ್ರವೃತ್ತಿಯನ್ನು ಬಿಡಬೇಕಾಗುತ್ತದೆ. ಎನ್.ಎಸ್. ಶಂಕರ ಅವರು ಇನ್ನೊಂದಿಷ್ಟು ಓದಿಕೊಂಡರೆ ಚೆನ್ನ !
                                                                  ಡಾ. ಸಿದ್ರಾಮ ಕಾರಣಿಕ

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s